ಹೂವಿನಹಡಗಲಿ :
ಪ್ರಸ್ತುತ ಶೇಕಡ 3 ರಷ್ಟಿರುವ ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಶೇಕಡ 7ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಘಟಕದಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ಪ್ರಸ್ತುತ ಸಂದರ್ಭದಲ್ಲಿ ಬೇರೆ ಪಂಗಡದವರು ಕೂಡಾ ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ನಮ್ಮ ಸಮುದಾಯದ ಯಾವುದೇ ಅಭ್ಯಂತರವೂ ಇಲ್ಲ ಎಂದು ತಾಲೂಕು ಘಟಕದ ಊಳಿಗದ ಹನುಮಂತಪ್ಪ ಹೇಳಿದರು.
ಆದರೆ, ಸರ್ಕಾರ ಮೀಸಲಾತಿಯನ್ನು ಶೇಕಡ 7ಕ್ಕೆ ಏರಿಸುವುದರ ಮೂಲಕ ಪರಿಶಿಷ್ಟ ವರ್ಗದವರಿಗೆ ನ್ಯಾಯವನ್ನು ದೊರಕಿಸಿಕೊಡಬೇಕೆಂದು ಆಗ್ರಹಿಸಿದರು. ಕೆಲವು ಮುಂದುವರೆದ ವರ್ಗದವರು ಪರಿಶಿಷ್ಟ ವರ್ಗದ ಪಟ್ಟಿಯಲ್ಲಿರುವ ಹೆಸರುಗಳನ್ನು ಬಳಸಿಕೊಂಡು ಜಾತಿ ಪ್ರಮಾಣಪತ್ರ ನೀಡುವ ಪ್ರಾಧಿಕಾರವಾದ ತಹಶೀಲ್ದಾರರುಗಳಿಂದ ಅಸಂವಿಧಾನಾತ್ಮಕವಾಗಿ ಜಾತಿ ಪ್ರಮಾಣಪತ್ರವನ್ನು ಪಡೆದುಕೊಂಡು, ಮೀಸಲು ಸೌಲಭ್ಯವನ್ನು ಉಪಯೋಗಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಂದರ್ಭದಲ್ಲಿ ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷರಾದ ಎಲ್.ಜಿ.ಹೊನ್ನಪ್ಪನವರ್, ಪುರಸಭೆ ಸದಸ್ಯ ಯು.ಹನುಮಂತಪ್ಪ, ಆಂಜನೇಯ ಧಾರವಾಡ, ಹನುಮಂತಪ್ಪ, ಪರಸಪ್ಪ, ದೀಪದ ಕೃಷ್ಣ, ಕೊಂಬಳಿ ರಂಗಪ್ಪ, ಹುಣ್ಸಿಕಾಯಿ ಗಿರೀಶ, ಚಿಂತಿ ಮಾಲತಿ, ಚಿಂತಿ ಚಕ್ರಪತಿ, ಮೋಹನಕುಮಾರ, ಭರ್ಮಜ್ಜ, ನಾಗರಾಜ, ಮಹೇಶ ಸೇರಿದಂತ ಹಲವರು ಇದ್ದರು. ಶಾಸ್ತ್ರೀ ವೃತ್ತದಲ್ಲಿ ಸಭೆಸೇರಿ ತಹಶೀಲ್ದಾರರಿಗೆ ಮನವಿ ಪತ್ರವನ್ನು ಸಲ್ಲಿಸಿದರು.