ಹರಪನಹಳ್ಳಿ
ಕಳೆದ 5 ತಿಂಗಳ ವೇತನಕ್ಕಾಗಿ ಆಗ್ರಹಿಸಿ ತಾಲೂಕಿನ ಆರೋಗ್ಯ ಇಲಾಖೆಯ ನೌಕರರು ಪಟ್ಟಣದ ಹಳೆ ಆಸ್ಪತ್ರೆ ಎದುರು ಆಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ಬುಧವಾರ ಕೈಗೊಂಡಿದ್ದಾರೆ. ಕಳೆದ ಮಾರ್ಚ ತಿಂಗಳಿನಿಂದ ಈವರೆಗೂ ಸರ್ಕಾರ ವೇತನವನ್ನು ಬಿಡುಗಡೆ ಗೊಳಿಸಿಲ್ಲ,
ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾದ ನಂತರ ಮೊದಲು ಡ್ರಾಯಿಂಗ್ ಕೋಡ್ ಬದಲಾವಣೆಯಾಗಬೇಕು ಎಂಬ ಸಬೂಬು ಹೇಳುತ್ತಿದ್ದರು, ಡ್ರಾಯಿಂಗ್ ಕೋಡ್ ಬದಲಾವಣೆಯಾದ್ದರೂ ವೇತನ ಮಾತ್ರ ಸಿಗುತ್ತಿಲ್ಲ. ವಿಳಂಬಕ್ಕೆ ತಾಂತ್ರಿಕ ಕಾರಣ ನೀಡಲಾಗುತ್ತಿದೆ ಎಂದು ಪ್ರತಿಭಟನಾ ನಿರತ ಆರೋಗ್ಯ ಸಿಬ್ಬಂದಿ ವೆಂಕಟೇಶ ಬಾಗಲರ್ ಆರೋಪಿಸಿದರು.
ತಾಲೂಕಿನಲ್ಲಿ ಡಿ ಗ್ರೂಪ್ ನೌಕರರು, ವೈದ್ಯರು, ಹೊರ ಗುತ್ತಿಗೆ ನೌಕರರು ಸೇರಿ ಒಟ್ಟು 450 ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ, ಯಾರಿಗೂ ಈವರೆಗೂ ವೇತನ ಹಾಗೂ ಇತರೆ ಭತ್ಯೆ ದೊರಕಿಲ್ಲ.ಕಿರಿಯ ಆರೋಗ್ಯ ಸಹಾಯಕರು ಕರ್ತವ್ಯಕ್ಕಾಗಿ ಗ್ರಾಮೀಣ ಭಾಗಕ್ಕೆ ತೆರಳಲು ಭತ್ಯೆ ಸಹ ನೀಡಿಲ್ಲ, ಹಳ್ಳಿಗಳಿಗೆ ಹೋಗಲು ಸಾಲ ಮಾಡುವ ಪರಿಸ್ಥಿತಿಯಿದೆ. ಜೀವನ ನಿರ್ವಹಣೆ ಸಹ ಕಷ್ಟವಾಗಿದೆ ಎಂದು ಪ್ರತಿಭಟನಾ ನಿರತರು ತಮ್ಮ ಅಳಲು ತೋಡಿಕೊಂಡರು.
ಈ ಕುರಿತು ಈಗಾಗಲೇ ಬಳ್ಳಾರಿ ಜಿಲ್ಲೆಯ ವೈದ್ಯಾಧಿಕಾರಿ ಹಾಗೂ ಜಿ.ಪಂ ಸಿಇಒ ಅವರ ಗಮನಕ್ಕೆ ತಂದರೂ ಯಾವ ಪ್ರಯೋಜನವಾಗಿಲ್ಲ ಎಂದು ಅವರು ಬೇಸರ ವ್ಯಕ್ತ ಪಡಿಸಿದರು. ಡಿಎಚ್‍ಒ ಹಾಗೂ ಜಿ.ಪಂ ಸಿಇಒ ಅವರು ಇಲ್ಲಿಗೆ ಬಂದು ಸಮಸ್ಯೆ ನಿವಾರಣೆಗೆ ಮುಂದಾಗುವವರೆಗೂ ಆಹೋ ರಾತ್ರಿ ಧರಣಿ ಸತ್ಯಾಗ್ರಹ ಕೈ ಬಿಡುವುದಿಲ್ಲ ಎಂದು ಅವರು ಧೃಡವಾಗಿ ಹೇಳಿದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ತು ಸದಸ್ಯ ಬಸವರಾಜ ಸಂಗಪ್ಪನವರ ಮಾತನಾಡಿ. ಸರ್ಕಾರ ಯಾವುದೇ ಕಾರಣ ಹೇಳದೆ ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂದಿಗಳ 5 ತಿಂಗಳ ವೇತನ ಬಿಡುಗಡೆ ಗೊಳಿಸಬೇಕು, ಅವರ ನ್ಯಾಯಯುತ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಲಿಂಗನಗೌಡ ಮಾತನಾಡಿ. ವೇತನ ವಿಳಂಬ ಕುರಿತು ಜಿ.ಪಂ ಮುಖ್ಯ ಲೆಕ್ಕಾಧಿಕಾರಿಯವರ ಬಳಿ ಚರ್ಚಿಸಿದ್ದೇವೆ, ಬೇಗ ಬಿಡುಗಡೆಗೆ ಕ್ರಮ ಕೈಗೊಳ್ಳುತೇತೇವೆ ಎಂದು ಹೇಳಿದ್ದಾರೆ, ಅಲ್ಲಿಯವರೆಗೂ ಇವರ ಸತ್ಯಾಗ್ರಹಕ್ಕೆ ನಮ್ಮ ಬೆಂಬಲಿಸುತ್ತೇವೆ ಎಂದು ನುಡಿದರು.
ಧರಣಿ ಸತ್ಯಾಗ್ರಹದಲ್ಲಿ ಆರೋಗ್ಯ ಸಿಬ್ಬಂದಿಯವರನ್ನು ಬೆಂಬಲಿಸಿ ಸರ್ಕಾರಿ ನೌಕರರ ರಾಜ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗನಗೌಡ, ಪ್ರ.ಕಾರ್ಯದರ್ಶಿ ವೆಂಕಟೇಶ ಬಾಗಲರ್, ಉಪಾದ್ಯಕ್ಷ ರುದ್ರ ಚಾರಿ, ಆರೋಗ್ಯ ಇಲಾಖೆಯ ಚೆನ್ನಮ್ಮ ಸೋಮನಕಟ್ಟೆ, ಬಾಲಚಂದ್ರ, ಪ್ರಕಾಶ ಸೇರಿದಂತೆ ಅನೇಕರು ಪಾಲ್ಗೊಂಡಿದ್ದಾರೆ.