ದಾವಣಗೆರೆ:
ವೇತನ ಹಾಗೂ ಪಿಂಚಣಿ ಪರಿಷ್ಕರಣೆ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬಿಎಸ್‍ಎನ್‍ಎಲ್ ನೌಕರರು ನಗರದಲ್ಲಿ ಮಂಗಳವಾರ ಧರಣಿ ನಡೆಸಿದರು.
ನಗರದ ಪಿಜೆ ಬಡಾವಣೆಯಲ್ಲಿರುವ ಬಿಎಸ್‍ಎನ್‍ಎಲ್ ಕಚೇರಿ ಎದುರು ಧರಣಿ ನಡೆಸಿದ ಬಿಎಸ್‍ಎನ್‍ಎಲ್ ನೌಕರರು, ತಮ್ಮ ಬೇಡಿಕೆಗಳಿಗೆ ಸ್ಪಂದಿಸದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಧರಣಿನಿರತರು, ಬಿಎಸ್‍ಎನ್‍ಎಲ್ ನೌಕರರ ಮೂರನೇ ವೇತನ ಹಾಗೂ ಪಿಂಚಣಿಯನ್ನು ಪರಿಷ್ಕರಣೆ ಮಾಡಬೇಕು. ನೇರ ನೇಮಕವಾಗಿರುವ ನೌಕರರಿಗೆ ಶೇ.30ರ ನಿವೃತ್ತಿ ಸವಲತ್ತುಗಳನ್ನು ನೀಡಬೇಕು. ಮೂಲವೇತನದ ಮೇಲೆ ಮಾತ್ರ ಪಿಂಚಣಿ ದೇಣಿಗೆ ಕಡಿತಗೊಳಿಸಬೇಕೆಂಬುದು ಕೇಂದ್ರ ಸರ್ಕಾರದ ನಿಯಮವಾಗಿದೆ. ಆದರೆ, ಈ ಆದೇಶ ಇನ್ನೂ ಜಾರಿಗೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೂರ ಸಂಪರ್ಕ ಕ್ಷೇತ್ರದ ಎಲ್ಲಾ ಕೇಂದ್ರ ಸರ್ಕಾರದ ಯೋಜನೆಗಳನ್ನು ದೇಶದಲ್ಲಿ ಅನುಷ್ಟಾನಗೊಳಿಸಲು ಸರ್ವರೀತಿಯಲ್ಲಿಯೂ ಬಿಎಸ್‍ಎನ್‍ಎಲ್ ಸಹಕಾರ ನೀಡುತ್ತಿದೆ. ಬೇರೆ ಖಾಸಗಿ ಕಂಪನಿಗಳ ರೀತಿ ಕೋಟಿ ರೂ.ಗಳ ಬ್ಯಾಂಕ್ ಸಾಲವಿಲ್ಲ. ದೇಶದ ಸಾಮಾಜಿಕ ಜವಾಬ್ದಾರಿಯನ್ನು ಬಿಎಸ್‍ಎನ್‍ಎಲ್ ನಿರ್ವಹಿಸುತ್ತಿದೆ. ಬಿಎಸ್‍ಎನ್‍ಎಲ್‍ಗೆ ಕೇಂದ್ರ ಸರ್ಕಾರ ತಕ್ಷಣವೇ 4ಜಿ ಸೇವೆ ಆರಂಭಿಸಲು ಬೇಕಾದ ಸ್ಪೆಕ್ಟ್ರಂಗಳನ್ನು ನೀಡಬೇಕೆಂದು ಆಗ್ರಹಿಸಿದರು.ಧರಣಿಯಲ್ಲಿ ಈರಣ್ಣ, ಅನಂತ ನಾಯ್ಕ, ಶಂಭುಲಿಂಗಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ