ದಾವಣಗೆರೆ:
ರಾಜ್ಯ ಸರ್ಕಾರದಿಂದ ಆಚರಿಸುತ್ತಿರುವ ಟಿಪ್ಪು ಸುಲ್ತಾನ್ ಜಯಂತಿಯನ್ನು ತಕ್ಷಣವೇ ರದ್ದು ಮಾಡಬೇಕೆಂದು ಆಗ್ರಹಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಪಾಲಿಕೆ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಟಿಪ್ಪು ಜಯಂತಿ ಆಚರಿಸುವ ಮೂಲಕ ಸಮಾಜದ ಶಾಂತಿ ಕದಡಲು ಪ್ರಯತ್ನಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಆಕ್ರೋಶ ವ್ಯಕ್ತಪಡಿಸುತ್ತಾ ಎಸಿ ಕಚೇರಿಗೆ ತೆರಳಿ ಉಪ ವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೇನೆಯ ಮುಖಂಡ ಪರಶುರಾಮ್ ನಡುಮನಿ, ಹಿಂದಿನ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ಘೋಷಿಸಿದ್ದರಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ವ್ಯಕ್ತವಾಗಿ ಸಮಾಜದಲ್ಲಿ ಅಶಾಂತಿ, ಕೋಮು ಗಲಭೆ ನಡೆದು ಸಾವು-ನೋವುಗಳಾಗಿದ್ದರೂ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಈ ಬಾರಿಯೂ ಟಿಪ್ಪು ಜಯಂತಿ ಆಚರಿಸಲು ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಟಿಪ್ಪು ಸುಲ್ತಾನ್ ಓರ್ವ ಹಿಂದೂ ವಿರೋಧಿ ಮತಾಂಧನಾಗಿದ್ದು, ಹಲವಾರು ದೇವಸ್ಥಾನಗಳನ್ನು ನೆಲಸಮ ಮಾಡಿ, ಮಸೀದಿಗಳನ್ನು ಕಟ್ಟಿಸಿದ್ದ. ಹಿಂದೂಗಳ ಮಾರಣ ಹೋಮ ನಡೆಸಿ ಮತಾಂತರ ಮಾಡಿರುವ ಬಗ್ಗೆ ಅನೇಕ ದಾಖಲೆಗಳಿವೆ. ಆದ್ದರಿಂದಲೇ ನಾಡಿನ ಬಹುಸಂಖ್ಯಾತ ಜನ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದಾರೆ. ಆದ್ದರಿಂದ ತಕ್ಷಣವೇ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆಯ ಪ್ರಶಾಂತ್ ಮತ್ತೂರ್, ನೂತನ್ ಆಚಾರ್ಯ, ವಿನೋದ್ ಡಿ.ಬಿ, ಕುಮಾರ್ ಮತ್ತಿ, ಆದರ್ಶ ಟಿ.ಆರ್, ಮೋಹನಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.