ಕೆಲಸದ ಭದ್ರತೆ, ಕನಿಷ್ಠ ವೇತನಕ್ಕಾಗಿ ಆಗ್ರಹ

0
15

ದಾವಣಗೆರೆ:

       ಕೆಲಸದ ಭದ್ರತೆ ನೀಡುವುದರ ಜೊತೆಗೆ 18 ಸಾವಿರ ರೂ. ಕನಿಷ್ಠ ವೇತನ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

       ನಗರದ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಬಜೆಟ್‍ನಲ್ಲಿ ಯಾವುದೇ ಸೌಲಭ್ಯ ಕಲ್ಪಿಸದ ಉಭಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಾ ಎಸಿ ಕಚೇರಿಗೆ ತೆರಳಿ ಉಪವಿಭಾಗೀಯ ಅಧಿಕಾರಿಗಳ ಮುಖಾಂತರ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

       ಈ ಸಂದರ್ಭದಲ್ಲಿ ಮಾತನಾಡಿದ ಫೆಡರೇಷನ್‍ನ ರಾಜ್ಯಾಧ್ಯಕ್ಷ ಹೆಚ್.ಕೆ.ರಾಮಚಂದ್ರಪ್ಪ, 1975ರಿಂದಲೂ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿರು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಈ ಬಜೆಟ್‍ನಲ್ಲಿ ಇವರಿಗೆ ಯಾವುದೇ ಸಹಾಯ ಮಾಡದೆಯೇ, ಅಂಗನವಾಡಿ ಮಹಿಳೆಯರಿಗೆ ಶೇ.50 ರಷ್ಟು ಬಂಪರ್ ಆಫರ್ ನೀಡಿದ್ದೇವೆ ಎಂದಿರುವುದು ಬರೀ ಹಸಿ ಸುಳ್ಳಾಗಿದೆ ಎಂದು ಆರೋಪಿಸಿದರು.

      ರಾಜ್ಯದಲ್ಲಿ 1.25 ಲಕ್ಷ ಜನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿದ್ದು, ಈ ಪೈಕಿ 3331 ಮಹಿಳೆಯರು ಮಿನಿ ಅಂಗನವಾಡಿಗಳಲ್ಲಿ ಡಬ್ಬಲ್ ಕೆಲಸ ಮಾಡುತ್ತಿದ್ದರೂ 5250 ರೂ. ವೇತನ ನೀಡುತ್ತಿದ್ದಾರೆ. ರಾಜ್ಯದ ಅಂಗನವಾಡಿಗಳಲ್ಲಿ 6 ತಿಂಗಳಿನಿಂದ 6 ವರ್ಷದ ವರೆಗಿನ 56,15,038 ಮಕ್ಕಳು ಅಂಗನವಾಡಿಗಳ ಫಲಾನುಭವಿಗಳಾಗಿದ್ದಾರೆ. ಈ ಪೈಕಿ 51,480 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಅಪೌಷ್ಟಿಕತೆಯನ್ನು ಹೋಗಲಾಡಿಸಬೇಕಾದರೆ, ಅಂಗನವಾಡಿ ಯೋಜನೆಯನ್ನು ಬಲಿಷ್ಠಪಡಿಸಬೇಕಾಗಿದೆ. ಆದರೆ, ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಯಾವುದೇ ವಿಶೇಷ ಸೌಲಭ್ಯ ನೀಡದೇ, ಅಂಗನವಾಡಿ ಯೋಜನೆಯನ್ನು ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

     ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನವನ್ನಾಗಿ 18 ಸಾವಿರ ರೂ. ನಿಗದಿ ಮಾಡಬೇಕು. ಇವರನ್ನು ಸರ್ಕಾರಗಳು ಸಿ ಮತ್ತು ಡಿ ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು. ನಿವೃತ್ತವಾಗಿರುವ ಅಂಗನಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನಿವೃತ್ತ ಪಿಂಚಣಿ ನೀಡಬೇಕು. ಸೇವಾ ಹಿರಿತನವನ್ನು ಪರಿಗಣಿಸಿ ಗೋವಾ ಸರ್ಕಾರದ ಮಾದಿರಯಲ್ಲಿ ಗೌರವಧನ ನೀಡಬೇಕು. ಇಎಸ್‍ಐ, ಭವಿಷ್ಯ ನಿಧಿ, ಸೇವಾ ಭದ್ರತೆ, ಗ್ರ್ಯಾಚ್ಯುಟಿ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಬೇಕೆಂಬುದು ಸೇರಿದಂತೆ 7 ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನಾನಿರತರು ಆಗ್ರಹಿಸಿದರು.

       ಪ್ರತಿಭಟನೆಯಲ್ಲಿ ಫೆಡರೇಷನ್ ಖಜಾಂಚಿ ಎಂ.ಬಿ.ಶಾರದಮ್ಮ, ಮುಖಂಡರಾದ ಆವರಗೆರೆ ಚಂದ್ರು, ಎಸ್.ಎಸ್.ಮಲ್ಲಮ್ಮ, ವಿಶಾಲಾಕ್ಷಿ, ನೀಲಮ್ಮ ಹೆಚ್.ಎಸ್, ಐರಣಿ ಚಂದ್ರು, ಎಂ.ಸರ್ವಮ್ಮ, ಕೆ.ಸುಧಾ, ಜಿ.ರೇಣುಕಮ್ಮ ಮತ್ತಿತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here