ಹಗರಿಬೊಮ್ಮನಹಳ್ಳಿ
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಡಿಯಲ್ಲಿ ನರೇಗಾ ಕೂಲಿಕಾರ್ಮಿಕರಿಗೆ ಸ್ಮಾರ್ಟ್‍ಕಾರ್ಡ್ ವಿತರಣೆಯಾಗದ ಹಿನ್ನೆಲೆಯಲ್ಲಿ ಆಕ್ರೋಶಭರಿತರಾದ ಕಾರ್ಮಿಕ ಸಂಘಟಕರು ಕಾರ್ಮಿಕರೊಂದಿಗೆ ಪಟ್ಟಣದ ಕಾರ್ಮಿಕ ಇಲಾಖೆಯ ಬಳಿ ರಾಜ್ಯ ಹೆದ್ದಾರಿಯನ್ನು ಕೆಲ ಸಮಯ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಂಚಾಲಕ ಮಲ್ಲೇಶ್ ಮಾತನಾಡಿ, ಸ್ಮಾರ್ಟ್ ಕಾರ್ಡ್‍ಗಳನ್ನು ನೀಡುವಂತೆ ಸರ್ಕಾರ ಈಗಾಗಲೇ ಕಾನೂನು ಮಾಡಿದ್ದು, ಅರ್ಜಿ ಕೊಟ್ಟು 2ವರ್ಷವಾದರೂ ಇದುವರೆಗೂ ಗ್ರಾಮೀಣ ಪ್ರದೇಶದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಸ್ಮಾರ್ಟ್‍ಕಾರ್ಡ್‍ಗಳು ತಲುಪಿಲ್ಲ, ಒಂದು ವರ್ಷದಿಂದ ನರೇಗಾ ಕೂಲಿಕಾರ್ಮಿಕರಿಗೆ ಸರ್ಕಾರ ಸೌಲಭ್ಯವನ್ನು ತಲುಪಿಸಲಾಗದ ಈ ಕಾರ್ಮಿಕ ಇಲಾಖೆ ಇದ್ದರೆಷ್ಟು ಬಿಟ್ಟರೆಷ್ಟು, ನಾವು ಈ ದಿನ ಕೇವಲ ಸಾಂಕೇತಿಕವಾಗಿ ಮಾತ್ರ 150ಕ್ಕೂ ಹೆಚ್ಚು ಕೂಲಿಕಾರ್ಮಿಕರು ಸೇರಿ ಪ್ರತಿಭಟನೆ ನಡೆಸಿದ್ದೇವೆ. ಆದಷ್ಟು ಬೇಗನೆ ಎಲ್ಲಾ ಕಾರ್ಮಿಕರಿಗೂ ಸರ್ಕಾರದಿಂದ ಸ್ಮಾರ್ಟ್‍ಕಾರ್ಡ್ ವಿತರಣೆಯಾಗದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಕೂಸ್ ತಾಲೂಕು ಸಂಚಾಲಕಿ ಅಕ್ಕಮ್ಮ ಮಾತನಾಡಿ, ಮರಬ್ಬಿಹಾಳು ಹಾಗೂ ಗದ್ದಿಕೇರಿ ಗ್ರಾಮದಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಅರ್ಜಿ ಸಲ್ಲಿಸಿ 2ವರ್ಷ ಕಳೆದರೂ ಸಹ ಇದುವರೆಗೂ ಕಾರ್ಮಿಕ ಇಲಾಖೆಯಿಂದ ಬಹಳಷ್ಟು ಕುಟುಂಬಗಳಿಗೆ ಸ್ಮಾರ್ಟ್‍ಕಾರ್ಡ್‍ಗಳು ವಿತರಣೆಯಾಗಿಯೇ ಇಲ್ಲ. ಇದಕ್ಕೆಲ್ಲ ತಾಲೂಕು ಕಾರ್ಮಿಕ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿದರು. ಇತ್ತೀಚೆಗೆ ಮರಬ್ಬಿಹಾಳು ಗ್ರಾಮದ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕ ಕರಿಕಳ್ಳಿ ಕರಿಯಪ್ಪ ಎಂಬುವರು ಮೃತಪಟ್ಟಿದ್ದು ನಿಧನ ನಂತರ ಅವರ ಕುಟುಂಬಕ್ಕೆ ಸಿಗಬೇಕಾದ ಜೀವ ವಿಮೆಯ ಹಣ ಇದುವರೆಗೂ ತಲುಪಿಲ್ಲ ಇದೆಲ್ಲಕ್ಕೂ ಮೂಲ ಸ್ಮಾರ್ಟ್‍ಕಾರ್ಡ ನೀಡದಿರುವ ಅಧಿಕಾರಿಗಳೆಂದು ದೂರಿದರಲ್ಲದೆ, ಬಡವರ ಹಾಗೂ ಕೂಲಿಕಾರ್ಮಿಕರ ಜೀವನದಲ್ಲಿ ಅಧಿಕಾರಿಗಳು ಆಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಕೂಸ್‍ನ ಮತ್ತೊಬ್ಬ ತಾಲೂಕು ಸಂಚಾಲಕಿ ಕೊಟ್ರಮ್ಮ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು. ಗ್ರಾಕೂಸ್ ಕಾರ್ಮಿಕರ ಮನವಿ ಸ್ವೀಕರಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿ ದಿವಾಕರ್ ಮಾತನಾಡಿ, ನಮ್ಮ ಇಲಾಖೆಗೆ ಸ್ಮಾರ್ಟ್‍ಕಾರ್ಡ್‍ಗಾಗಿ 5347 ಅರ್ಜಿಗಳು ಬಂದಿದ್ದವು ಅವುಗಳಲ್ಲಿ ಇದುವರೆಗೂ 5004 ಫಲಾನುಭವಿಗಳಿಗೆ ಸ್ಮಾರ್ಟ್‍ಕಾರ್ಡ್‍ಗಳನ್ನು ವಿತರಿಸಲು ಸಹಾಯಕ ನಿರ್ದೇಶಕರಿಗೆ ತಲುಪಿಸಿದ್ದೇವೆ, ಅವರು ಆಯಾ ಗ್ರಾ.ಪಂ.ಪಿಡಿಓ ಗಳ ಮುಖಾಂತರ ಅರ್ಹ ಫಲಾನುಭವಿಗಳಿಗೆ ತಲುಪಿಸಲಿದ್ದಾರೆ ಎಂದರು.
ಗ್ರಾಕೂಸ್ ಕಾರ್ಯಕರ್ತರಾದ ಎಂ.ಗೀತಾ, ಬುಡೇನ್‍ಸಾಬ್, ಶಿವಪ್ಪ, ನಾಗರಾಜ, ಕೊಟ್ರೇಶ್, ಶ್ರೀಕಾಂತ, ಕರಿಬಸಪ್ಪ, ಕೆಂಚಪ್ಪ, ರೇಣುಕಮ್ಮ, ಬಸಮ್ಮ, ಗಂಗಮ್ಮ, ಕರಿಯಮ್ಮ, ಮರಿಯಪ್ಪ, ಚಾಂದ್‍ಬಿ, ಯಲ್ಲಪ್ಪ, ಹನುಮಂತಪ್ಪ, ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.