ಇಜಾರಿ ಸಿರಸಪ್ಪ ವೃತ್ತದಲ್ಲಿ ಪ್ರತಿಭಟನೆ

ಹರಪನಹಳ್ಳಿ:

       ತಾಲ್ಲೂಕಿನ ವಿವಿಧ ಸಂಘಟನೆಗಳು ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ ಪರಿಣಾಮ ರಾಜ್ಯ ರಸ್ತೆ ಸಾರಿಗೆ, ಶಾಲಾ ಕಾಲೇಜುಗಳು, ಅಂಗನವಾಡಿ, ಜೀವ ವಿಮೆ ಹಾಗೂ ಸರ್ಕಾರಿ ಕಛೇರಿಗಳು ಮಾತ್ರ ಸಂಪೂರ್ಣ ಬಂದ್‍ಗೆ ಬೆಂಬಲ ನೀಡಿ ಸಿಬ್ಬಂದಿಗಳೂ ಭಾಗವಹಿಸಿದ್ದರು. ಎಂದಿನಂತೆ ವ್ಯಾಪಾರ ವಹಿವಾಟು, ಖಾಸಗಿ ಸಾರಿಗೆ ಸಂಚಾರ ನಡೆಯಿತು.

        ಸೆಂಟರ್ ಆಫ್ ಇಂಡಿಯನ್ ಟ್ರೆಡ್ ಯೂನಿಯನ್ಸ್ ಜೊತೆ ತಾಲ್ಲೂಕಿನ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಅಂಗನವಾಡಿ, ಆಶಾ ಕಾರ್ಯಕರ್ತರು, ಎಐಎಸ್‍ಎಫ್, ಎಐಟಿಯುಸಿ, ಎಲ್‍ಐಸಿ ಸಿಬ್ಬಂದಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಕೃಷಿ ಕೂಲಿ ಕಾರ್ಮಿಕರು ಹಾಗೂ ಇನ್ನೂ ಹಲವಾರು ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಹಾಕಿ ಇಜಾರಿ ಸಿರಸಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

        ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳನ್ನು ತಟೆಗಟ್ಟಬೇಕು. ಹೊಸ ಮತ್ತು ಸಭ್ಯ ಉದ್ಯೋಗಗಳನ್ನು ಸೃಷ್ಠಿಸಬೇಕು, 7ನೇ ವೇತನ ಅಯೋಗ ಕಾರ್ಮಿಕರಿಗೆ ಶಿಪಾರ್ಸ ಮಾಡಿರುವ 18 ಸಾವಿರ ವೇತನ ಜಾರಿ ಮಾಡಬೇಕು, ಕಾರ್ಮಿಕ ಕಾನೂನುಗಳ ತಿದ್ದುಪಡಿಯನ್ನು ನಿಲ್ಲಿಸಬೇಕು. ಸ್ಕೀಂ ನೌಕರರನ್ನು ಖಾಯಂ ಮಾಡಬೇಕು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ನಿಲ್ಲಿಸಬೇಕು. ದೇಶದ ಎಲ್ಲಾ ಕಾರ್ಮಿಕರಿಗೂ ಸಾರ್ವತ್ರಿಕ ರಕ್ಷಣೆ ಕೊಡಬೇಕು. ಕೃಷಿ ಬಿಕ್ಕಟ್ಟು ನಿವಾರಿಸಿ ರೈತರಿಗೆ ರಕ್ಷಣೆ ನೀಡಬೇಕು. ಭಾರತವನ್ನು ಉಳಿಸಿ ದೇಶದ ಜನತೆಯನ್ನು ರಕ್ಷಿಸಬೇಕಿದ್ದು ಕೇಂದ್ರ ಸರ್ಕಾರದ ಆಡಳಿತವನ್ನು ಕೊನೆಗಾಣಿಸಬೇಕಿದೆ ಎಂದು ಆಗ್ರಹಿಸಿದರು.

ಕೆಡಿಪಿ ಸಭೆ ರದ್ದು :

          ಪಟ್ಟಣದ ತಾಲ್ಲೂಕು ಪಂಚಾಯ್ತಿಯಲ್ಲಿ ಮಾಸಿಕ ಕೆಡಿಪಿ ಸಭೆ ನಡೆಯುತ್ತಿದ್ದ ಮಾಹಿತಿ ಪಡೆದ ಪ್ರತಿಭಟನಕಾರರು ಸಭೆಗೆ ನುಗ್ಗಿ ಕೂಡಲೇ ಕಾರ್ಮಿಕರ ಪ್ರತಿಭಟನೆಗೆ ಬೆಂಬಲ ನೀಡಿ ಸಭೆಯನ್ನು ರದ್ದು ಪಡಿಸಬೇಕು ಎಂದು ಹೆಚ್.ಎಂ. ಸಂತೋಷ್ ಅವರು ಮನವಿ ಮಾಡಿದರು. ಇದಕ್ಕೆ ಅಧ್ಯಕ್ಷೆರು ಸ್ಪಂದಿಸಿ ಸಭೆಯನ್ನು ರದ್ದು ಮಾಡಿದ ಘಟನೆ ಜರುಗಿತು.

          ಹೊಸ ಬಸ್ ನಿಲ್ದಾಣ ಹಾಗೂ ರಾಜ್ಯ ರಸ್ತೆ ಸಾರಿಗೆ ಘಟಕಕ್ಕೆ ತೆರಳಿದ ವಿವಿಧ ಸಂಘಟನೆಗಳ ಕಾರ್ಯಕರ್ತರು ಯಾವುದೇ ಕಾರಣಕ್ಕೂ ವಾಹನಗಳನ್ನು ರಸ್ತೆಗೆ ಇಳಿಸಬಾರದು ಎಂದು ಎಚ್ಚರಿಸಿದ ಘಟನೆಯೂ ನಡೆಯಿತ್ತು. ವಿವಿಧ ಸಂಘಟನೆಗಳ ಮುಖಂಡರಾದ ಗುಡಿಹಳ್ಳಿ ಹಾಲೇಶ್, ರಮೇಶನಾಯ್ಕ್, ಬಾಷುಸಾಬ್, ಇದ್ಲಿ ರಾಮಪ್ಪ, ಸಂದೇರ ಪರಶುರಾಮಪ್ಪ, ರಾಜಪ್ಪ, ಸುಮಾ, ಪದ್ಮಾವತಿ, ಈಶ್ವರನಾಯ್ಕ್ ಹಾಗೂ ಇತರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link