ಚಿತ್ರದುರ್ಗ:
ಕಟ್ಟಡ ಕಾರ್ಮಿಕರಿಂದ ಸಂಗ್ರಹಿಸಲಾಗುತ್ತಿರುವ ಸೆಸ್ ಹಣವನ್ನು ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಮಾತ್ರ ಬಳಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‍ನಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ಪ್ರಧಾನಿ ನರೇಂದ್ರಮೋದಿ ಪ್ರತಿಕೃತಿ ದಹನಗೊಳಿಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿ.ಐ.ಟಿ.ಯು.ಜಿಲ್ಲಾ ಖಜಾಂಚಿ ಸಿ.ಕೆ.ಗೌಸ್‍ಪೀರ್ ಮಾತನಾಡಿ ಕಟ್ಟಡ ಕಾರ್ಮಿಕರು ಕಾರ್ಮಿಕರ ಕಲ್ಯಾಣ ಮಂಡಳಿಗೆ ಪಾವತಿಸಿರುವ ಸೆಸ್ ಹಣ ರಾಜ್ಯ ಸರ್ಕಾರದಲ್ಲಿ ಏಳು ಸಾವಿರ ಕೋಟಿ ರೂ.ಗಳಷ್ಟಿದೆ. ಅದೇ ರೀತಿ ಕೇಂದ್ರ ಸರ್ಕಾರದಲ್ಲಿ 42 ಸಾವಿರ ಕೋಟಿ ರೂ.ಕಾರ್ಮಿಕರ ಸೆಸ್ ಹಣವಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿ.ಎಸ್.ಟಿ.ಯಿಂದ ಕಟ್ಟಡ ಕಾರ್ಮಿಕರು, ಬಡವರು, ರೈತರು ಹಾಗೂ ದುಡಿಯುವ ವರ್ಗಕ್ಕೆ ಭಾರಿ ತೊಂದರೆಯಾಗಿದೆ. ಸೆಸ್ ಹಣವನ್ನು ನಮ್ಮ ಸುಪರ್ದಿಗೆ ಕೊಡಿ ಎಂದು ಕೇಂದ್ರ ಸರ್ಕಾರ ಕೇಳುತ್ತಿದೆ. ಯಾವುದೇ ಕಾರಣಕ್ಕೂ ಕಾರ್ಮಿಕರ ಹಣಕ್ಕೆ ಕೈಹಾಕಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. ದೇಶದ ಪ್ರತಿಯೊಬ್ಬರಿಗೂ ಸಾಮಾಜಿಕ ಸುರಕ್ಷತೆ ನೀಡುತ್ತೇವೆಂಬ ನೆಪದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳ ಕಲ್ಯಾಣ ಮಂಡಳಿಗಳಲ್ಲಿರುವ ಸೆಸ್ ಹಣಕ್ಕೆ ಕೈಹಾಕುತ್ತಿರುವುದನ್ನು ನಿಲ್ಲಿಸಬೇಕು. ಸೆಸ್ ಹಣವನ್ನು ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರ ಅವಕಾಶ ಕೊಡಬಾರದು ಎಂದು ಸಿ.ಕೆ.ಗೌಸ್‍ಪೀರ್ ಆಗ್ರಹಿಸಿದರು.
ಮಂಜುನಾಥ್, ಷೇಕ್‍ಕಲೀಂ, ಬಿ.ಸಿ.ಭಾಸ್ಕರಚಾರಿ, ನಾಗರಾಜ್ ಬಿ.ದುರ್ಗ, ಜಿಕ್ರಿಯಾಉಲ್ಲಾ, ಕೃಷ್ಣಮೂರ್ತಿ, ಚಂದ್ರಪ್ಪ, ಪರಶುರಾಮ್, ಮಹಮದ್ ಸಮೀವುಲ್ಲಾ, ಗಿರಿಜಮ್ಮ, ವಿವೇಕಾನಂದ, ಅಬ್ದುಲ್ಲಾ, ಕಾಟಯ್ಯ, ಲಕ್ಕಪ್ಪ, ದಾದಾಪೀರ್, ಮಮ್ತಾಜ್ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ