ಎಚ್.ಎಸ್.ದೊರೆಸ್ವಾಮಿ ಅವಹೇಳನ ಖಂಡಿಸಿ ಪ್ರತಿಭಟನೆ

ದಾವಣಗೆರೆ:

     ಶತಾಯುಷಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

     ಇಲ್ಲಿನ ಎಸಿ ಕಚೇರಿ ಎದುರು ಜಮಾಯಿಸಿದ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದಲ್ಲದೆ, ಬಸವನಗೌಡ ಪಾಟೀಲ್ ಯತ್ನಾಳ್‍ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಬೇಕು ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಉಪವಿಭಾಗಾಧಿಕಾರಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

     ಈ ಸಂದರ್ಭದಲ್ಲಿ ಮಾತನಾಡಿದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ಟಿ.ಅಸ್ಗರ್, ವಿಜಯಪುರದ ಸಭೆಯೊಂದರಲ್ಲಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅನಗತ್ಯವಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ವಿಚಾರವನ್ನು ಎಳೆ ತಂದಿರುವುದಲ್ಲದೆ, ಶತಾಯುಷಿ ಕುರಿತು ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಒಕ್ಕೂಟದ ಜಬೀನಾ ಖಾನಂ ಮಾತನಾಡಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರಿಗೆ ಪಾಕಿಸ್ತಾನ ಏಜೆಂಟ್, ಆತ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ ಎಂಬುದಾಗಿ ಬಸವನಗೌಡ ಪಾಟೀಲ್ ಯತ್ನಾಳ್ ಅವಹೇಳನ ಮಾಡಿರುವುದು ಅತ್ಯಂತ ಖಂಡನೀಯ ವಾಗಿದೆ. ಕನ್ನಡಿಗರಾದ ನಾವೆಲ್ಲರೂ ದೊರೆಸ್ವಾಮಿ ಬಗ್ಗೆ ಅಪಾರ ಗೌರವ, ಅಭಿಮಾನ ಹೊಂದಿದ್ದು, ಇಂತಹ ಹಿರಿಯ ಜೀವದ ಬಗ್ಗೆ ಯತ್ನಾಳ್ ಏಕವಚನದಲ್ಲಿ ಮಾತನಾಡಿರುವುದು ಅತ್ಯಂತ ಅಕ್ಷಮ್ಯವಗಿದೆ ಎಂದು ಕಿಡಿಕಾರಿದರು.

      ಸ್ವಾತಂತ್ರ್ಯ ಚಳವಳಿಯಲ್ಲಿ ದೊರೆಸ್ವಾಮಿ ಪಾತ್ರವೇನು? ಎಂಬ ಬಗ್ಗೆ ಅಧಿಕೃತ ದಾಖಲೆ ಲಭ್ಯವಿದ್ದು, ಅದು ಚರಿತ್ರೆಯಲ್ಲಿ ಈಗಾಗಲೇ ದಾಖಲಾಗಿದೆ. ಕೇವಲ ಬ್ರಿಟೀಷರನ್ನು ಭಾರತದಿಂದ ಓಡಿಸುವುದಕ್ಕಷ್ಟೇ ಸೀಮಿತವಾಗಿರದ ದೊರೆಸ್ವಾಮಿ ಒಂದು ಸುಂದರ, ಸಮಾನ, ಸಹಬಾಳ್ವೆಯ ಭಾರತ ನಿರ್ಮಾಣದ ಕನಸಿನೊಂದಿಗೆ ನಿರಂತರ ಶ್ರಮಿಸುತ್ತಿರುವ ಗಾಂಧಿವಾದಿಯಾಗಿದ್ದಾರೆ. ಜನತೆಯ ಹಿತಾಸಕ್ತಿಗೆ ಹಾಗೂ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆಯುವವರಿಗೆ ನೀತಿ ಬೋಧಿಸುವ ಕೆಲಸ ದೊರೆಸ್ವಾಮಿ ಮಾಡುತ್ತಿದ್ದಾರೆ. ಯತ್ನಾಳ್‍ರಂತಹ ಹೊಣೆಗೇಡಿಗಳಿಗೆ ಇದು ನುಂಗಲಾರದ ತುತ್ತಾಗಿದೆ. ಯತ್ನಾಳ್ ಮಾತುಗಳು ದೊರೆಸ್ವಾಮಿಗೆ ಮಾತ್ರವಲ್ಲ, ಇಡೀ ಸ್ವಾತಂತ್ರ್ಯ ಚಳವಳಿಗೆ ಮಾಡಿದ ಅಪಚಾರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಯತ್ನಾಳ್‍ಗಾಗಲೀ, ಬಿಜೆಪಿಗಾಗಲೀ ಸ್ವಾತಂತ್ರ್ಯ ಹೋರಾಟದ ಬಗ್ಗೆ ಎಳ್ಳಷ್ಟೂ ಗಂಧ ಗಾಳಿ ಗೊತ್ತಿಲ್ಲ. ದೇಶದ ಐಕ್ಯತೆ, ಸಮಗ್ರತೆಗೆ ಧಕ್ಕೆ ತರುವ ಪ್ರಯತ್ನ ಯತ್ನಾಳ್ ಮಾಡಿದ್ದಾರೆ. ಸಂವಿಧಾನದ 51(ಎ)ನ್ನು ಯತ್ನಾಳ್ ಉಲ್ಲಂಘಿಸಿದ್ದು, ಶಾಸಕ ಸ್ಥಾನದಿಂದ ಪದಚ್ಯುತಿಗೊಳಿಸಬೇಕು. ದೊರೆಸ್ವಾಮಿ ಗುಂಡಿಗೆ ಬಲಿಯಾಗುತ್ತಾನೆಂಬ ಹೇಳಿಕೆ ಕೊಲೆಗೆ ಪ್ರಚೋದನೆ ಮಾಡುವಂತಿದ್ದು, ಈ ಬಗ್ಗೆ ಪೆÇಲೀಸರು ಸ್ವಯಂ ಪ್ರೇರಿತವಗಿ ಪ್ರಕರಣ ದಾಖಲಿಸಿಕೊಂಡು, ಯತ್ನಾಳ್‍ನನ್ನು ಬಂಧಿಸಬೇಕು. ಯತ್ನಾಳ್‍ರ ಅಪಾಯಕಾರಿ, ಪ್ರಚೋದನಾಕಾರಿ ಹೇಳಿಕೆಗೆ ಹೊಣೆ ಹೊತ್ತು ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ಒಕ್ಕೂಟದ ಮಂಜುನಾಥ ಕೈದಾಳೆ, ವಕೀಲರಾದ ಉಷಾ ಕೈಲಾಸದ್, ಮಹಮ್ಮದ್ ಅಲಿ ಶೋಯಬ್, ಎಂ.ಕರಿಬಸಪ್ಪ, ಅನ್ವರ್ ಖಾನ್, ಪವಿತ್ರ, ಇ.ಶ್ರೀನಿವಾಸ, ಇಸ್ಮಾಯಿಲ್ ಜಬೀವುಲ್ಲಾ, ಅಬ್ದುಲ್ ಘನಿ ತಾಹೀರ್, ಮಹಮ್ಮದ್ ಸಲೀಂ, ಬಿ.ಎಂ.ಜಾವೀದ್, ಇಸ್ಮಾಯಿಲ್ ನಿಜಾಮುದ್ದೀನ್ ಮಹಮ್ಮದ್ ಜಾಫರ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link