ಕುರುಬ ಸಮಾಜದ ಅವಹೇಳನ ಮಾಡಿದರೆ ಹೋರಾಟ

ತುಮಕೂರು

    ಹುಳಿಯಾರಿನ ಕನಕ ವೃತ್ತದ ನಾಮಕರಣ ವಿಚಾರ ಸಂಬಂಧ ಸಚಿವ ಮಾಧುಸ್ವಾಮಿಯವರು ಶಾಂತಿ ಸಭೆಯಲ್ಲಿ ಹಗುರವಾಗಿ ವರ್ತಿಸಿದ ಪರಿಣಾಮ ಇಡೀ ರಾಜ್ಯದಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಆದರೆ ಈ ಸಂಬಂಧ ತಾವು ಕ್ಷಮೆ ಕೇಳುವ ಪ್ರಮೇಯ ಬರಲಿಲ್ಲ ಎಂದು ಸಚಿವರು ಹೇಳಿರುವುದು ವಿಷಾದನೀಯ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಎಂ. ರಾಮಚಂದ್ರಪ್ಪ ಹೇಳಿದರು.

      ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ಮುಖ್ಯಮಂತ್ರಿಗಳು ಕ್ಷಮಾಪಣೆ ಕೋರಿದ್ದರು. ಸಚಿವ ಮಾಧುಸ್ವಾಮಿಯವರು ಕನಕ ಗುರು ಪೀಠದಲ್ಲಿ ಸಂಧಾನ ನಡೆದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ ಕ್ಷಮೆ ಕೇಳುವ ಪ್ರಮೇಯವೇ ಬರಲಿಲ್ಲ ಎಂದು ಹೇಳಿರುವುದು ವಿಷಾದಕರ ಎಂದರು.

    ಬಿಜೆಪಿ ಮುಖಂಡರು ಕುರುಬ ಜನಾಂಗದವರ ಬಗ್ಗೆ ಕೀಳು ಭಾವನೆಯಿಂದ ಸಾರ್ವಜನಿಕ ಹೇಳಿಕೆ ನೀಡುತ್ತಿರುವುದು ನಡೆದುಬಂದಿದೆ. ಕೇಂದ್ರ ಸಚಿವರಾಗಿದ್ದ ಅನಂತಕುಮಾರ ಹೆಗ್ಡೆ ಅವರು ಕುರುಬರ ಮತಗಳೇ ಬೇಡ ಎಂದು ಹೇಳಿದ್ದರು. ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್‍ಗೌಡರು ಕುರುಬ ಸಮಾಜದ ಪೊಲೀಸ್ ಕಾನ್‍ಸ್ಟೇಲ್ ಒಬ್ಬರನ್ನು ಜಾತಿ ಹಿಡಿದು ನಿಂದಿಸಿದ್ದರು.

    ಇತ್ತೀಚೆಗೆ ಮಾಜಿ ಸಚಿವ ಸೊಗಡು ಶಿವಣ್ಣ ಅವರು ನಮ್ಮ ಜನಾಂಗದ ನಾಯಕರಾದ ಸಿದ್ದರಾಮಯ್ಯ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದರು, ಈಗ ಸಚಿವ ಮಾಧುಸ್ವಾಮಿ ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿಗಳನ್ನು ಅವಮಾನಿಸಿದ್ದಾರೆ ಎಂದು ರಾಮಚಂದ್ರಪ್ಪ ಹೇಳಿದರು.

   ಇನ್ನು ಮುಂದೆ ಯಾರೇ ಸಮಾಜದ ಬಗ್ಗೆ ಹಗುರವಾಗಿ, ಅವಹೇಳನಾಕಾರಿಯಾಗಿ ವರ್ತಿಸಿದ್ದೇ ಆದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದ ಅವರು, ಕುರುಬ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸಲು ತುಮಕೂರಿನಲ್ಲಿ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.ಮುಖಂಡರಾದ ಸಿ.ಶಿವಮೂರ್ತಿ, ಚಿಕ್ಕವೆಂಕಟಯ್ಯ, ಆರ್.ಎಂ.ಸಿ.ರಾಜು, ಕೆಂಪರಾಜು, ಮಹಲಿಂಗಯ್ಯ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap