ಚಳ್ಳಕೆರೆ
ಕಳೆದ ಹತ್ತಾರು ವರ್ಷಗಳ ನಿರಂತರ ಬರಗಾಲದಿಂದ ತಾಲ್ಲೂಕಿನ ರೈತರು ಬದುಕಿನ ಹೋರಾಟ ನಡೆಸುತ್ತಿದ್ದು, ಕೃಷಿ ಚಟುವಟಿಕೆಗಳನ್ನು ನಡೆಸುವಲ್ಲಿ ನಿರಾಸಕ್ತರಾಗಿದ್ಧಾರೆ. ಪ್ರತಿವರ್ಷವೂ ಮಳೆ, ಬೆಳೆ ಇಲ್ಲದೆ ಕಂಗಾಲಾಗಿರುವ ಸ್ಥಿತಿಯಲ್ಲಿ ಸರ್ಕಾರ ಎರಡು ವರ್ಷಗಳ ಬೆಳೆ ವಿಮೆ ಪರಿಹಾರವನ್ನು ನೀಡದೆ ರೈತ ಸಮುದಾಯವನ್ನು ಸಂಕಷ್ಟಕೀಡು ಮಾಡಿದ್ದು, ಬೆಳೆ ವಿಮೆ ಪರಿಹಾರದ ಹಣ ಕೂಡಲೇ ಬಿಡುಗಡೆ ಮಾಡದೇ ಇದ್ದಲ್ಲಿ ತಾಲ್ಲೂಕು ಕಚೇರಿ ಮತ್ತು ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿಯುವ ಎಚ್ಚರಿಕೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ತಾಲ್ಲೂಕು ಆಡಳಿತಕ್ಕೆ ಶುಕ್ರವಾರ ಎಚ್ಚರಿಕೆ ನೀಡಿದ್ಧಾರೆ.
ಅವರು, ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ತುಷಾರ್ ಬಿ.ಹೊಸೂರ್, ಸಹಾಯಕ ಕೃಷಿ ನಿರ್ದೇಶಕ ಎನ್.ಮಾರುತಿ ಸಮಕ್ಷಮದಲ್ಲಿ ರೈತ ಸಂಘದ ಹಲವಾರು ಪ್ರತಿನಿಧಿಗಳೊಂದಿಗೆ ಬೆಳೆ ವಿಮೆ ಪರಿಹಾರ ಕುರಿತು ಮಾತನಾಡುವ ಸಂದರ್ಭದಲ್ಲಿ 2017-18 ಮತ್ತು 2018-19ನೇ ಸಾಲಿನ ಬೆಳೆ ವಿಮೆ ಪರಿಹಾರದ ಹಣ ಇದುವರೆಗೂ ರೈತರಿಗೆ ದೊರಕಿಲ್ಲ, ಕೃಷಿ ಇಲಾಖೆಯ ಸೂಚನೆಯಂತೆ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ರೈತರು ಬೆಳೆ ವಿಮೆ ಪಾವತಿಸಿದ್ದು, ಕೇವಲ ಕೆಲವೇ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ರೈತರಿಗೆ ಹಣ ಪಾವತಿಯಾಗಿದ್ದು ಬಿಟ್ಟರೆ, ಬಹುತೇಕ ರೈತರ ಖಾತೆಗೆ ಕೇಂದ್ರ ಸರ್ಕಾರದ ಹಣ ಬಂದಿಲ್ಲ.
ಇನ್ನು ಕೆಲವೇ ದಿನಗಳಲ್ಲಿ ರೈತರು ಮುಂಗಾರು ಬಿತ್ತನೆ ಮಾಡಬೇಕಿದ್ದು, ಬೀಜ,ಗೊಬ್ಬರ ಕ್ರಿಮಿನಾಶ ಕೊಳ್ಳಲು ರೈತರಲ್ಲಿ ಹಣವಿಲ್ಲ. ರೈತರ ಸಾಲ ಮನ್ನಾ ಬಗ್ಗೆಯೂ ಸಹ ಸರ್ಕಾರ ಅಸ್ವಷ್ಟ ನೀತಿ ತಾಳಿದೆ. ಯಾವುದೇ ಬ್ಯಾಂಕ್‍ನಲ್ಲೂ ಸಹ ರೈತರಿಗೆ ಸಾಲ ನೀಡಲು ಹಿಂಜರಿಯುತ್ತಿದ್ಧಾರೆ.
ಕನಿಷ್ಟ ಪಕ್ಷ ರೈತರ ಬೆಳೆ ವಿಮೆ ಹಣವಾದರೂ ಅವರ ಖಾತೆಗೆ ಜಮಾವಾದಲ್ಲಿ ರೈತರು ಬಿತ್ತನೆ ಮಾಡಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಒಂದುವಾರದೊಳಗೆ ತಾಲ್ಲೂಕು ಆಡಳಿತ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಬೆಳೆ ವಿಮೆ ಪಾವತಿಗೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ತಾಲ್ಲೂಕು ಹಾಗೂ ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿಯಲು ರೈತರು ಹಿಂಜರಿಯುವುದಿಲ್ಲವೆಂದರು.
ತಹಶೀಲ್ದಾರ್ ತುಷಾರ್ ಬಿ.ಹೊಸೂರ್ ಮಾತನಾಡಿ, ರೈತರು ಮಾನ್ಯ ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ಭೇಟಿ ನೀಡಿ ಒತ್ತಾಯಪಡಿಸಿದ ಹಿನ್ನೆಲೆಯಲ್ಲಿ ಮೇ 30 ರೊಳಗೆ ಬೆಳೆ ವಿಮೆ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡಿಸುವ ಭರವಸೆಯನ್ನು ಸರ್ಕಾರದ ನೀಡಿತ್ತು. ಆದರೆ, ಇದುವರೆಗೂ ಸರ್ಕಾರದಿಂದ ಈ ಬಗ್ಗೆ ಯಾವುದೇ ಸೂಚನೆ ಬಂದಿಲ್ಲವಾದ್ದರಿಂದ ಎಂಟ್ಹತ್ತು ದಿನಗಳಲ್ಲಿ ಹಣ ಜಮಾವಾಗುವ ಸಾಧ್ಯತೆ ಇದ್ದು, ಅಲ್ಲಿಯ ತನಕ ರೈತರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಸಹಾಯಕ ಕೃಷಿ ನಿರ್ದೇಶಕ ಎನ್.ಮಾರುತಿ ಮಾತನಾಡಿ, ತಾಲ್ಲೂಕಿನ 40 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5 ಗ್ರಾಮ ಪಂಚಾಯಿತಿ ವ್ಯಾಪ್ತಿಯ 7309 ಜನರಿಗೆ 12.06 ಕೋಟಿ ಹಣ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಈಗಾಗಲೇ ಜಮಾವಾಗಿದೆ. ಹಂತ ಹಂತವಾಗಿ ರೈತರ ಬೆಳೆ ವಿಮೆ ಹಣವನ್ನು ಸರ್ಕಾರ ಪಾವತಿ ಮಾಡುತ್ತಾ ಬಂದಿದೆ. ಪ್ರಸ್ತುತ ಬಾಕಿ ಉಳಿದ ಎಲ್ಲಾ ರೈತರಿಗೂ ಬೆಳೆ ಪರಿಹಾರದ ಹಣ ದೊರಕಲಿದೆ ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಪ್ರಗತಿಪರ ಆರ್.ಎ.ದಯಾನಂದಮೂರ್ತಿ, ಎಸ್.ನಾಗರಾಜು ಮುಂತಾದವರು ಮಾತನಾಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಚ್.ತಿಪ್ಪೇಸ್ವಾಮಿ, ಜಿ.ಟಿ.ಮಂಜುನಾಥ, ಎಚ್.ರಾಮಚಂದ್ರಪ್ಪ, ಆರ್.ರಾಜಣ್ಣ, ಜಯಶೀಲರಾವ್ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
