ಕೇಸ್ ದಾಖಲಾದರೆ ಡಿಸಿ ಕಚೇರಿ ಮುಂದೆ ಪ್ರತಿಭಟನೆ: ಎಂಟಿಕೆ

ತುರುವೇಕೆರೆ

    ಕ್ಷೇತ್ರದ ರೈತರ ಹಿತಬಯಸಿ ಸಿ.ಎಸ್.ಪುರ ಭಾಗದ ರೈತರು ನೀರಿನ ಬವಣೆಗಾಗಿ ನೀರಿನ ಹೋರಾಟಕ್ಕೆ ಸಾಥ್ ನೀಡಿದ್ದೇನೆ. ಈ ಬಗ್ಗೆ ನನ್ನ ಹಾಗೂ ರೈತರ ಮೇಲೆ ಕೇಸ್ ದಾಖಲಾದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತರೊಡಗೂಡಿ ಮುಷ್ಕರ ಕೈಗೊಳ್ಳಬೇಕಾಗುತ್ತದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

   ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಸಿ.ಎಸ್.ಪುರ ಭಾಗಕ್ಕೆ ಕಳೆದ ಹಲವು ವರ್ಷಗಳಿಂದ ನೀರು ಹರಿಸಿಯೇ ಇಲ್ಲ. ಹಾಲಿ ಶಾಸಕರಾದ ಜಯರಾಮ್‍ರವರು ರಕ್ತಹರಿಸಿಯಾದರೂ ನೀರು ಹರಿಸುತ್ತೇವೆ ಎಂದವರು ವಿಫಲರಾದರು. ಪ್ರಸ್ತುತ ನೀರು ಸಲಹಾ ಮಂಡಳಿಯಲ್ಲೂ ಸಿ.ಎಸ್.ಪುರ ಭಾಗದ ಕೆರೆಗಳಿಗೆ ನೀರು ಹರಿಸುವ ಪ್ರಸ್ತಾವನೆ ಕೈಗೊಳ್ಳಲೇ ಇಲ್ಲ.

    ವೇಳಾಪಟ್ಟಿ ನಿಗದಿಯಾಗಿದೆ ಎಂದು ಮಾತನಾಡುತ್ತಾರೆಯೇ ಹೊರತು ಆ ಬಗ್ಗೆ ಸ್ಪಷ್ಟನೆ ಹೊರಡಿಸಿಲ್ಲ. ಜಿಲ್ಲಾ ಗಡಿಭಾಗದವರಿಗೆ ನೀರು ಹರಿಸುತ್ತೇವೆ ಎಂದು ಕುಣಿಗಲ್‍ಗೆ ಹರಿಸುತ್ತಿದ್ದಾರೆ. ಇದೆಲ್ಲವನ್ನೂ ನೋಡಿ ಬೇಸತ್ತ ಸಿ.ಎಸ್.ಪುರ ಭಾಗದ ಜನತೆ ನೀರಿಗಾಗಿ ತಮ್ಮ ಅಳಲನ್ನು ತೋಡಿಕೊಂಡಾಗ ಕೃಷಿ ಕಾಳಜಿಯಿಂದ ನೀರು ಬಿಡುವಂತೆ ಅಧಿಕಾರಿಗಳಲ್ಲಿ ವಿನಂತಿಸಿದೆ. ವಿನಂತಿಗೆ ಸ್ಪಂದಿಸದಿದ್ದಾಗ ನೀರು ಬಿಡಿಸಿದ್ದೇವೆ.

    ಈ ವೇಳೆ ಉಪವಿಭಾಗಾಧಿಕಾರಿ ಕನಿಷ್ಠ ರೈತಕಾಳಜಿಯೂ ಇಲ್ಲದೆ ಅಡಿಕೆ – ತೆಂಗನ್ನು ನಮ್ಮನ್ನು ಕೇಳಿ ಬೆಳೆಸಿದ್ದೀರಾ, ಅದಕ್ಕೆಲ್ಲಾ ನೀರು ಹರಿಸಲು ಸಾಧ್ಯವಿಲ್ಲ ಎಂದಾಗ ಮಾತಿನ ಚಕಮಕಿಯಾಯಿತು ಅಷ್ಟೇ, ಎಸ್‍ಐ ಸುಂದರ್‍ರವರೇ ಸಂಘರ್ಷ ತಪ್ಪಿಸಿದರು. ಇದಾದ ನಂತರ ರೈತರ ಒಂದು ಅಡಿ ಮಾತ್ರ ಗೇಟ್ ತೆರವುಗೊಳಿಸಿ ನೀರು ಹರಿಸಿಕೊಂಡಿದ್ದಾರೆ. ಇಂತಹ ರೈತ ಹೋರಾಟಗಳನ್ನು ಜಿಲ್ಲಾಡಳಿತ ಹತ್ತಿಕ್ಕಲು ಮುಂದಾಗಿ ಪ್ರಕರಣ ದಾಖಲಿಸಿದರೆ ಡಿಸಿ ಕಛೇರಿ ಎದುರು ಮತ್ತೆ ಮುಷ್ಕರ ಅನಿವಾರ್ಯ ಎಂದರು.ಗೋಷ್ಠಿಯಲ್ಲಿ ಯುವ ಜೆಡಿಎಸ್‍ನ ರಮೇಶ್, ಯೋಗೀಶ್, ಬಸವರಾಜು. ಶಿವರಾಮ್, ಕುಮಾರ್, ಪುನೀತ್, ರವಿ, ಶಿವಾನಂದ್ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link