ಕುಡಿಯುವ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚನೆ

ಚಳ್ಳಕೆರೆ

      ಕ್ಷೇತ್ರದಾದ್ಯಂತ ಬರಗಾಲದ ದುಸ್ಥಿತಿಯನ್ನು ಎದುರಿಸಲು ತಾಲ್ಲೂಕು ಅಧಿಕಾರಿಗಳು ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಜನತೆ ಸರ್ಕಾರದಿಂದ ಹೆಚ್ಚಿನ ನಿರೀಕ್ಷೆ ಮಾಡುವುದು ಸ್ವಾಭಾವಿಕ, ಕಡೇ ಪಕ್ಷ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರನ್ನಾದರೂ ನಾವು ನೀಡದೇ ಇದ್ದಲ್ಲಿ ಜನತೆ ಆಡಳಿತದ ಮೇಲೆ ಬೇಸರ ವ್ಯಕ್ತಪಡಿಸುತ್ತಾರೆ. ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಗಳನ್ನು ತಕ್ಷಣವೇ ಪ್ರಾರಂಭಿಸಬೇಕೆಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

     ಅವರು, ಬುಧವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಬರದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನೆರವಾಗುವ ದೃಷ್ಠಿಯಿಂದ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಗಳ ಅನುಷ್ಠಾನ, ಹಾಗೂ ಕುಡಿಯುವ ನೀರು ಒದಗಿಸುವ ಕುರಿತು ಹಮ್ಮಿಕೊಂಡಿದ್ದ ತುರ್ತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

       ಪ್ರಾರಂಭದಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಗ್ರಾಮೀಣ ಭಾಗಗಳಲ್ಲಿ ಶುದ್ದ ಕುಡಿಯುವ ನೀರು ಘಟಕಗಳು ಕಾನಿರ್ವಹಿಸದೇ ಇದ್ದಲ್ಲಿ ಅವುಗಳನ್ನು ಚಾಲನೆ ನೀಡಬೇಕು. ನೀರು ಬಾರದೆ ಇದ್ದಲ್ಲಿ ಸಂಬಂಧಪಟ್ಟ ಪಿಡಿಒಗಳೇ ಟ್ರ್ಯಾಕ್ಟರ್ ಮೂಲಕ ನೀರು ಪೂರೈಸಬೇಕು. ಯಾವುದೇ ಕಾರಣಕ್ಕೂ ಗ್ರಾಮೀಣ ಭಾಗದ ಜನರು ಕುಡಿಯುವ ನೀರಿಗೆ ಪರಿತಪಿಸಬಾರದು. ಪ್ರತಿಯೊಬ್ಬ ಅಧಿಕಾರಿಯೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಪ್ರತಿಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಉದ್ಯೋಗ ಖಾತರಿ ಕಾಮಗಾರಿ ಅನುಷ್ಠಾನವಾಗಬೇಕು.

         ಡಿ.10ರಿಂದಲೇ ಕಾಮಗಾರಿ ಪ್ರಾರಂಭಿಸಬೇಕು. ಸಣ್ಣ ಗ್ರಾಮಗಳಿದ್ದಲ್ಲಿ ಎರಡು ಗ್ರಾಮಗಳನ್ನು ಸೇರಿಸಿ ಹೆಚ್ಚಿನ ಕೂಲಿಕಾರರು ಕಾರ್ಯನಿರ್ವಹಿಸುವಂತೆ ಯೋಜನೆ ತಯಾರಿಸಬೇಕು. ಬರಗಾಲ ಪೀಡಿತ ಪ್ರದೇಶಗಳಲ್ಲಿ 100ರ ಬದಲಾಗಿ 150 ಮಾನವ ದಿನಗಳನ್ನು ಹೊಂದಲು ಅವಕಾಶ ಕಲ್ಪಿಸಿದೆ. ಗ್ರಾಮೀಣ ಭಾಗಗಳಲ್ಲಿ ಕೆರೆಗಳ ಜಾಲಿತೆಗೆಯುವುದು, ಕಾಲುವೆ ರಿಪೇರಿ, ಕೆರೆ ಹೂಳೆತ್ತುವುದು, ಜಮೀನುಗಳನ್ನು ಸಂಪರ್ಕಿಸುವ ರಸ್ತೆಗಳ ದುರಸ್ಥಿ ಕಾಮಗಾರಿ ಅವಕಾಶ ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿಯ ಪಿಡಿಒ ಕಡ್ಡಾಯವಾಗಿ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೊಳಿಸಬೇಕು. ಯಾವುದೇ ಹಂತದಲ್ಲೂ ಯಾವುದೇ ಅಧಿಕಾರಿ ಉದಾಸೀನತೆ ತೋರಬಾರದು ಎಂದರು.

          ಗ್ರಾಮೀಣ ಭಾಗಗಳಲ್ಲಿ ಈ ಯೋಜನೆಯಡಿ ಆಸಕ್ತಿಯಿಂದ ಕೂಲಿಕಾರರು ಭಾಗವಹಿಸುವಂತೆ ಮನವಿ ಮಾಡಬೇಕು, ಕರಪತ್ರ ಮುದ್ರಿಸಿ ಗ್ರಾಮದಲ್ಲಿ ಹಂಚಿಕೆ ಮಾಡಬೇಕು, ನೀವು ಕೈಗೊಂಡ ಕಾಮಗಾರಿಯಿಂದ ಅಲ್ಲಿನ ನೂರಾರು ಕಾರ್ಮಿಕರು ಕೆಲಸ ನಿರ್ವಹಿಸುವಂತಾಗಬೇಕು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಜೆಸಿಬಿ ಯಂತ್ರವನ್ನು ಉಪಯೋಗಿಸುವಂತೆ ಸೂಚನೆ ನೀಡಿದರು. ಕ್ಷೇತ್ರದ ವಿವಿಧ ಭಾಗಗಳಲ್ಲಿ ಕುಡಿಯುವ ಶುದ್ದ ನೀರಿನ ಘಟಕಗಳು ಕಾರ್ಯನಿರ್ವಹಿಸದೇ ತಟಸ್ಥವಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿದಾಗ ಒಟ್ಟು 38 ಘಟಕಗಳು ದುರಸ್ಥಿಯಾಗಬೇಕಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಅವುಗಳನ್ನು ದುರಸ್ಥಿಗೊಳಿಸಿ ಎಂದರು. ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು 600 ರಿಂದ 800 ಅಡಿಯಷ್ಟು ಬೋರ್ ಹಾಕಿಸಿದರೂ ನೀರು ಸಿಗುವ ವ್ಯವಸ್ಥೆ ಮಾಡಿ. ಗ್ರಾಮೀಣ ಭಾಗದಲ್ಲಿ ಈಗಾಗಲೇ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ಕುಡಿಯುವ ನೀರನ್ನಾದರೂ ನೀಡದೇ ಇದ್ದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಇಲಾಖೆ ಅಧಿಕಾರಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.

        ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾರಾಮಣ್ಣ, ಉಪಾಧ್ಯಕ್ಷೆ ತಿಪ್ಪಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಗಿರಿಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಗದ್ದಿಗೆ ತಿಪ್ಪೇಸ್ವಾಮಿ, ಸಣ್ಣ ಸೂರಯ್ಯ, ಜಿ.ವೀರೇಶ್, ಎಚ್.ತಿಪ್ಪೇಸ್ವಾಮಿ, ಎಚ್.ಆಂಜನೇಯ, ಉಮಾ, ರಂಜಿತಾ, ಹನುಮಕ್ಕ, ಗಂಗೀಬಾಯಿ, ಸುವರ್ಣಮ್ಮ, ವಿಜಯಲಕ್ಷ್ಮಿ, ಶಿವಮ್ಮ, ಇಒ ಈಶ್ವರಪ್ರಸಾದ್, ಕೃಷ್ಣಾನಾಯ್ಕ, ತಹಶೀಲ್ದಾರ್ ಮಲ್ಲಿಕಾರ್ಜುನ, ಕಾಂತರಾಜು, ನಗರಸಭೆ ಜಿಲ್ಲಾ ಯೋಜನಾಧಿಕಾರಿ ರಾಜಶೇಖರ್, ಪೌರಾಯುಕ್ತ ಜೆ.ಟಿ.ಹನುಮಂತರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್, ಎಇಇ ಮಂಜಪ್ಪ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link