ತುಮಕೂರು
ಅಕ್ಷರ ದಾಸೋಹ ಯೋಜ ನೆಯ ಬಿಸಿಯೂಟ ತಯಾರ ಕರಿಗೆ ಏಪ್ರಿಲ್, ಮೇ ತಿಂಗಳ ಲಾಕ್‍ಡೌನ್ ವೇತನ ಹಾಗೂ ಜೂನ್, ಜುಲೈ ತಿಂಗಳ ವೇತನ ಸೇರಿ ನಾಲ್ಕು ತಿಂಗಳ ವೇತನ ವನ್ನು ಕೂಡಲೆ ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಇಂದು ಬೆಳಿಗ್ಗೆ ಪ್ರತಿಭಟನೆ ನಡೆಸಲಾಯಿತು.
ತುಮಕೂರು ಜಿಲ್ಲಾಧಿ ಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿ, ರಾಜ್ಯ ಸರ್ಕಾರಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಗಳಲ್ಲಿ ಅಕ್ಷರ ದಾಸೋಹ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕಳೆದ 17 ವರ್ಷಗಳಿಂದ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರಿಗೆ ವೇತನ ಬಿಡುಗಡೆ ಮಾಡಬೇಕೆಂದು ಆಗ್ರಹಪಡಿಸಿದರು.
ರಾಜ್ಯದಲ್ಲಿ ಸುಮಾರು 1.18 ಲಕ್ಷ ಬಿಸಿಯೂಟ ತಯಾರಕರು ಕನಿಷ್ಠ ವೇತನ ಕಾಯ್ದೆಗೆ ಒಳಪಡದೆ ಗೌರವ ಸಂಭಾವನೆ ಪಡೆದು ಕೆಲಸ ನಿರ್ವಹಿಸುತ್ತಿದ್ದು, ಸೇವಾ ಕಾಯಮಾತಿ ಕನಿಷ್ಠ ವೇತನ, ಇಎಸ್‍ಐ, ಪಿಎಫ್, ನಿವೃತ್ತಿ ವೇತನ, ಇಡುಗಂಟು ಹಣ, ಅಪಘಾತ ಪರಿಹಾರ, ಮರಣ ಪರಿಹಾರಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹಾಕಲು ಹೋರಾಟ ಮಾಡುತ್ತಿದ್ದರೂ ಸರ್ಕಾರ ಸೂಕ್ತ ಕ್ರಮಕೈಗೊಂಡಿಲ್ಲ ಎಂದು ದೂರಿದರು.
ಕೋವಿಡ್-19 ಪರಿಣಾಮವಾಗಿ ಬಿಸಿಯೂಟ ತಯಾರಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಶಾಲೆಗಳಲ್ಲಿ ಅಡುಗೆ ಕೆಲಸವೂ ಇಲ್ಲ, ಬೇರೆ ಕಡೆ ಕೂಲಿ ಹೋಗಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದು, ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ 5 ಸಾವಿರ ಪರಿಹಾರ ನೀಡಲಾಗಿದೆ. ಬಿಸಿಯೂಟ ತಯಾರಕರಿಗೆ ಇಂತಹ ಸೌಲಭ್ಯವಿಲ್ಲ.ನಾಲ್ಕು ತಿಂಗಳಿಂದ ವೇತನವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿರುವ ಕಾರಣ ಸದರಿ ವೇತನವನ್ನು ಬಿಡುಗಡೆ ಮಾಡುವಂತೆ ಮನವಿ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.
ಸಂಘದ ಜಿಲ್ಲಾ ಸಂಚಾಲಕ ಸಿ.ಎಸ್. ಸತ್ಯನಾರಾಯಣ, ಗುಬ್ಬಿ ತಾಲೂಕು ಸಂಚಾಲಕ ದೊಡ್ಡತಿಮ್ಮಯ್ಯ ಇತರೆ ಪದಾಧಿಕಾರಿಗಳಾದ ವನಜಾಕ್ಷಮ್ಮ, ಕಂಬೇಗೌಡ, ಸಾವಿತ್ರಮ್ಮ, ಉಮಾದೇವಿ, ನಾಗರತ್ನಮ್ಮ, ಪದ್ಮ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ