ಬೆಂಗಳೂರು
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಇಂದು ಬೆಳಗ್ಗೆ 9.58ಕ್ಕೆ ಪಿಎಸ್‍ಎಲ್‍ವಿಸಿ-43 ರಾಕೆಟ್ ಉಡಾವಣೆಯನ್ನು ಯಶಸ್ವಿಯಾಗಿ ಪೂರೈಸಿತು.
ಈ ರಾಕೆಟ್ ಭಾರತದ ಭೂಪರಿವೀಕ್ಷಣಾ ಉಪಗ್ರಹ ಹೈಸಿಸ್ ಅನ್ನು ಯಶಸ್ವಿಯಾಗಿ ಕಕ್ಷೆಯಲ್ಲಿಸಿದೆ. ಇದರೊಂದಿಗೆ ಇತರ 30 ಉಪಗ್ರಹಗಳನ್ನು ರಾಕೆಟ್ ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದು, ಈ ಪೈಕಿ 23 ಅಮೆರಿಕ ದೇಶದ ಉಪಗ್ರಹಗಳಾಗಿವೆ. ಆಸ್ಟ್ರೇಲಿಯಾ, ಕೆನಡಾ, ಕೊಲಂಬಿಯಾ, ಫಿನ್‍ಲ್ಯಾಂಡ್, ಮಲೇಷಿಯಾ, ನೆದರ್‍ಲ್ಯಾಂಡ್ಸ್ ಮತ್ತು ಸ್ಪೇನ ದೇಶಗಳ ತಲಾ ಒಂದೊಂದು ಉಪಗ್ರಹಗಳನ್ನು ಕೂಡ ರಾಕೆಟ್ ಕೊಂಡೊಯ್ಯಿದಿದೆ.
ಇಂದು ಬಾಹ್ಯಾಕಾಶಕ್ಕೆ ಕಳುಹಿಸಲಾಗಿರುವ ಭೂ ಪರಿವೀಕ್ಷಣಾ ಉಪಗ್ರಹ ಹೈಸಿಸ್ ಅತ್ಯಂತ ಸ್ಪಷ್ಟವಾದ ಚಿತ್ರಗಳೊಂದಿಗೆ ಉಪಯುಕ್ತ ಮಾಹಿತಿಯ ಸಂಗ್ರಹಕ್ಕೆ ನೆರವಾಗಲಿದೆ. ಕೃಷಿ, ಅರಣ್ಯ, ಕರಾವಳಿ ವಲಯಗಳು ಹಾಗೂ ಒಳನಾಡು ಜಲಮಾರ್ಗಗಳ ವಲಯಕ್ಕೆ ಅಗತ್ಯವಾದ ದತ್ತಾಂಶಗಳನ್ನು ಈ ಉಪಗ್ರಹ ಒದಗಿಸಲಿದೆ. ಇಸ್ರೋದ ಈ ಪ್ರಯೋಗ ಐದು ವರ್ಷಅವಧಿಯದ್ದಾಗಿರುತ್ತದೆ.
ಇಸ್ರೋ ಅಧ್ಯಕ್ಷ ಡಾ. ಕೆ.ಸಿವನ್ ಪ್ರತಿಕ್ರಯಿಸಿ, ನಭೋಮಂಡಳಕ್ಕೆ ಯಶಸ್ವಿಯಾಗಿ ಹಾರಿಬಿಡಲಾದ ಭೂ ಸರ್ವೇಕ್ಷಣೆ ಮಾಡುವ, ಅತ್ಯಂತ ಸ್ಪಷ್ಟವಾದ ಚಿತ್ರಗಳನ್ನು ರವಾನಿಸುವ ಪಿಎಸ್‍ಎಲ್ ವಿ – ಸಿ 43 ಸೇರಿ 30 ಇತರೆ ಉಪಗ್ರಹಗಳ ಉಡಾವಣೆಯಿಂದ ಸಂಸ್ಥೆಯ ಕಾರ್ಯವೈಖರಿಯ ವಿಶ್ವಾಸಾರ್ಹತೆ ಮತ್ತೊಮ್ಮೆ ಸಾಬೀತಾಗಿದೆ ಎಂದರು.
ಹದಿನೈದು ದಿನಗಳ ಹಿಂದೆ ಜಿಎಸ್‍ಎಲ್ ವಿ ಎಂಕೆ – ಡಿ2/ಜಿಸ್ಯಾಟ್-29 ಉಪಗ್ರಹಗಳನ್ನು ನಭೋಮಂಡಲಕ್ಕೆ ಉಡಾವಣೆ ಮಾಡಿದ ನಂತರ ದೇಶದ ವಿಜ್ಞಾನಿಗಳು ಇಂದು ಮತ್ತೊಮ್ಮೆ ತಮ್ಮ ಶ್ರೇಷ್ಠತೆಯನ್ನು ಪ್ರದರ್ಶಿಸಿದ್ದಾರೆ ಎಂದು ಶ್ಲಾಘಿಸಿದರು.
ಉಪಗ್ರಹ ಉಡಾವಣೆ ನಂತರ ಉಪಗ್ರಹ ನಿಯಂತ್ರಣ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉಪಗ್ರಹ ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಾಣವಾಗಿದ್ದು, ಇದರಲ್ಲಿ ಚಿತ್ರಗಳನ್ನು ಪತ್ತೆ ಮಾಡುವ ಚಿಪ್ ಸಹ ಅಡಕಗೊಳಿಸಲಾಗಿದೆ. ಇದನ್ನು ಇಸ್ರೋ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರದಲ್ಲಿ ಅಭಿವೃದ್ದಿಪಡಿಸಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
