ಎಲ್ಲಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ಬಿರುಸು

ಬೆಂಗಳೂರು:

       ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರ ಬಿರುಸುಪಡೆದಿದೆ. ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದು, ಮತದಾರರನ್ನು ಸೆಳೆಯಲು ಭಾವೋದ್ವೇಗದ ಭಾಷಣಗಳಲ್ಲಿ ತೊಡಗಿದ್ದಾರೆ. ಮಠ, ಮಂದಿರ ರಾಜಕೀಯ ಸಹ ತೀವ್ರಗೊಂಡಿದೆ. ಮತ್ತೊಂದೆಡೆ ಜೆಡಿಎಸ್‍ನ ಘಟಾನುಘಟಿ ನಾಯಕರು ಪ್ರಚಾರದಲ್ಲಿ ತೊಡಗಿಕೊಳ್ಳದೇ ಇರುವುದು ಅಭ್ಯರ್ಥಿಗಳ ಆತಂಕ್ಕೆ ಕಾರಣವಾಗಿದೆ.

     ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಸೇರಿ ಜೆಡಿಎಸ್‍ನ ಹಲವು ಮುಖಂಡರು ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ವರ್ಚಸ್ಸನ್ನೇ ನಂಬಿರುವ ಅಭ್ಯರ್ಥಿಗಳಲ್ಲಿ ತಳಮಳ ಶುರುವಾಗಿದೆ.

       ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದು ಮಂಡ್ಯದಲ್ಲಿ ಪ್ರಚಾರ ನಡೆಸಿದರು. ಇದೇ 29ರಿಂದ ರಾಮನಗರ ಹಾಗೂ ಶಿವಮೊಗ್ಗ ಕ್ಷೇತ್ರದಲ್ಲಿ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ. ಆದರೆ ಪಕ್ಷದ ವರಿಷ್ಠ ಎಚ್‍ಡಿ ದೇವೇಗೌಡ ಲಂಡನ್‍ಗೆ ತೆರಳಿರುವುದರಿಂದ ಉಪ ಚುನಾವಣೆಯ ಪ್ರಚಾರದಲ್ಲಿ ತೊಡುವುದು ಇನ್ನಷ್ಟು ವಿಳಂಬವಾಗಲಿದೆ.

      ಇನ್ನು ಅನಾರೋಗ್ಯದಿಂದ ಬಳಲುತ್ತಿರುವ ಪಕ್ಷದ ಅಧ್ಯಕ್ಷ ಎಚ್ ವಿಶ್ವನಾಥ್ ಸೋಮವಾರದಿಂದ ಶಿವಮೊಗ್ಗ ಮತ್ತು ಮಂಡ್ಯ ಜಿಲ್ಲೆಯಲ್ಲಿ ಪ್ರಚಾರ ಕೈಗೊಳ್ಳಲು ತೀರ್ಮಾನಿಸಿದ್ದರು. ಆದರೆ ಇನ್ನೂ ಅವರು ಸುಧಾರಿಸಿಕೊಂಡಿಲ್ಲ.

      ಸಮ್ಮಿಶ್ರ ಸರ್ಕಾರದಲ್ಲಿ 11 ಜನ ಜೆಡಿಎಸ್ ಸಚಿವರಿದ್ದಾರೆ. ಆದರೆ ಅವರ್ಯಾರು ಪೂರ್ಣ ಪ್ರಮಾಣದಲ್ಲಿ ಪ್ರಚಾರದಲ್ಲಿ ನಿರತರಾಗಿಲ್ಲ. ವಿಶೇಷ ಎಂದರೆ, ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಪ್ರಚಾರದಲ್ಲಿ ಭಾಗಿಯಾಗಿಲ್ಲ.

       ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬೆನ್ನಲ್ಲೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಜಯನಗರದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಭೇಟಿ ಮಾಡಿ ಸ್ವಾಮಿಗಳ ಆಶೀರ್ವಾದ ಪಡೆದರು.

      ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಇದು ಸೌಜನ್ಯದ ಭೇಟಿ ಎಂದು ಸ್ಪಷ್ಟಪಡಿಸಿ ನಿನ್ನೆ ಸ್ವಾಮೀಜಿಗಳು ದೂರವಾಣಿ ಕರೆ ಮಾಡಿ ತಮ್ಮ ಆರೋಗ್ಯ ವಿಚಾರಿಸಲು ಬರುವುದಾಗಿ ತಿಳಿಸಿದ್ದರು. ಆದರೆ, ನಾನೇ ನೀವಿರುವ ಸ್ಥಳಕ್ಕೆ ಬರುತ್ತೇನೆ ಎಂದು ನಾನು ಹೇಳಿದ್ದೆ. ಅದರಂತೆ ಇಂದು ಬೆಳಿಗ್ಗೆ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡೆ ಎಂದರು.

      ಯಾವುದೇ ಸ್ವಾಮೀಜಿಗಳನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡಿಲ್ಲ. ಸ್ವಾಮೀಜಿ ಭೇಟಿ ಸಂದರ್ಭದಲ್ಲಿ ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ. ಮಂಡ್ಯ ಲೋಕಸಭಾ ಉಪಚುನಾವಣೆಗೆ ತಮ್ಮ ಭೇಟಿಗೂ ಥಳಕು ಹಾಕುವುದು ಬೇಡ ಎಂದು ಕುಮಾರಸ್ವಾಮಿ ಹೇಳಿದರು.

     ಮಳವಳ್ಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಪರವಾಗಿ ಪ್ರಚಾರ ಭಾಷಣ ಮಾಡಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನಾನು ಈ ಹಿಂದೆ ಇಸ್ರೇಲ್‍ಗೆ ಅಧ್ಯಯನ ಪ್ರವಾಸ ಕೈಗೊಂಡಾಗಲೇ ನನ್ನ ಸಾವು ಸಂಭವಿಸಬೇಕಿತ್ತು. ದೇವರ ದಯೆಯಿಂದ ಬದುಕಿ ಬಂದೆ ಎಂದು ಭಾವುಕರಾಗಿ ನುಡಿದರು.

       ನಾನು ಎಷ್ಟು ದಿನ ಬದುಕುತ್ತೇನೆ ಎಂಬುದು ಗೊತ್ತಿಲ್ಲ. ಆದರೆ, ಬದುಕಿದ್ದಷ್ಟು ದಿನ ಜನರ ಸೇವೆ ಮಾಡುತ್ತೇನೆ. ಜನತೆಗೆ ದ್ರೋಹ ಮಾಡಿದ ದಿನ ನಾನು ಬದುಕಿದ್ದರೇನು, ಸತ್ತರೇನು. ಜನರ ಮೇಲೆ ನನಗಿರುವ ಪ್ರೀತಿಯನ್ನು ಹಾಳು ಮಾಡಲು ಈ ಜನ್ಮದಲ್ಲಿ ಯಾರಿಗೂ, ಸಾಧ್ಯವಿಲ್ಲ. ನಾನು ಬದುಕಿರುವುದೇ ನಿಮ್ಮಂತಹವರ ಸೇವೆಗೆ. ನಾನು ಹಣ ಸಂಪಾದಿಸಬೇಕಿಲ್ಲ. ಎಷ್ಟು ದಿನ ಬದುಕುತ್ತೇನೆ ಎಂಬುದೂ ಮುಖ್ಯವಲ್ಲ. ದೇವರು ನನಗೆ ಕೊಟ್ಟಿರುವ ಈ ಅಧಿಕಾರವನ್ನು ಜನರ ಶ್ರೇಯೋಭಿವೃದ್ಧಿಗೆ ಬಳಸಿ, ಪ್ರತಿಯೊಂದು ಕುಟುಂಬವನ್ನು ಯಾವ ರೀತಿ ಬದುಕಿಸುತ್ತೇನೆ ಎಂಬುದೇ ನನ್ನ ಮುಂದಿರುವ ಸವಾಲು ಎಂದು ಹೇಳಿದರು.

      ಬಳ್ಳಾರಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಕರ್ನಾಟಕದಲ್ಲಿ ಸ್ವಯಂಘೋಷಿತ ಮುಖ್ಯಮಂತ್ರಿಯೆಂದು ಹೇಳಿಕೊಂಡು ತಿರುಉತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳುವವರೇ ಇಲ್ಲದಂತಾಗಿದೆ. ಅವರಿಗೆ ಬಂದಿರುವ ಈ ಸ್ಥಿತಿ ಬೇರೆ ಯಾವ ರಾಜಕಾರಣಿಗೂ ಬರಬಾರದು. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿರುವ ದಿನೇಶ್ ಗುಂಡೂರಾವ್ ಪೇಪರ್ ಹುಲಿಯಿದ್ದಂತೆ. ಅವರನ್ನು ನೋಡಿದರೆ ಭಯವೂ ಇಲ್ಲ, ನಾವು ಅವರನ್ನು ಲೆಕ್ಕಕ್ಕೂ ತೆಗೆದುಕೊಳ್ಳುತ್ತಿಲ್ಲ ಎಂದು ವ್ಯಂಗ್ಯವಾಡಿದರು.

      ರಾಜ್ಯದಲ್ಲಿ ಅತಂತ್ರ ರಾಜಕೀಯ ಪರಿಸ್ಥಿತಿ ಇದೆ. 5 ಉಪ ಚುನಾವಣೆ ಫಲಿತಾಂಶ ಬಂದ ನಂತರ ಅತಂತ್ರ ರಾಜಕಾರಣ ಕೊನೆಗೊಳ್ಳಲಿದೆ. ಕುಮಾರಸ್ವಾಮಿ ಅವರಪ್ಪನಾಣೆ ಮುಖ್ಯಮಂತ್ರಿ ಅಗಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದರು. ಸಿದ್ದರಾಮಯ್ಯನವರಂಥ ಕೆಟ್ಟ ಮುಖ್ಯಮಂತ್ರಿಯನ್ನು ನೋಡೇ ಇಲ್ಲ ಎಂದು ದೇವೇಗೌಡರು ಹೇಳಿದ್ದರು. ಈಗ ಅವರವರೇ ಸೇರಿಕೊಂಡು ಸರ್ಕಾರ ನಡೆಸುತ್ತಿದ್ದಾರೆ. ಮನಸಿಗೆ ಬಂದಂತೆ ಹೇಳಿಕೆ ನೀಡುವ ಸಿದ್ದರಾಮಯ್ಯ ಅವರಂಥ ಭಂಡ ರಾಜಕಾರಣಿಯನ್ನು ನಾನು ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ಬಳ್ಳಾರಿ ನಗರದ ಡಾ. ರಾಜ್ ರಸ್ತೆಯಲ್ಲಿನ ಸಾಂಸ್ಕೃತಿಕ ಸಮುಚ್ಚಯದ ಉದ್ಯಾನವನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಮತಯಾಚನೆ ಮಾಡಿದ ನಂತರ ಮಾತನಾಡಿ, ನನ್ನ ಜೀವನದ ಅತೀ ದೊಡ್ಡ ಶತ್ರುಗಳೆಂದರೆ ಅದು ಭ್ರಷ್ಟಾಚಾರ ಮತ್ತು ಜಾತಿವಾದ. ಇಡೀ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿ ನಾನು. ಜಾತಿವಾದ ಮತ್ತು ಭ್ರಷ್ಟಾಚಾರವನ್ನು ನಾನೆಂದಿಗೂ ಸಹಿಸಲ್ಲ. ನಾನು ಎಲ್ಲ ವರ್ಗದವರನ್ನೂ ಗೌರವಿಸುವೆ. ಲಿಂಗಾಯತ, ವೀರಶೈವ, ಬ್ರಾಹ್ಮಣ ಹಾಗೂ ಮುಸ್ಲಿಂ ಧರ್ಮದಲ್ಲೂ ಕೂಡ ನನಗೆ ಸ್ನೇಹಿತರಿದ್ದಾರೆ ಎಂದರು.

       ಈ ಜಿಲ್ಲೆಯಲ್ಲಿ ಶಾಸಕ ಬಿ.ಶ್ರೀರಾಮುಲು, ರೆಡ್ಡಿ ಕುಟುಂಬದವರು ಮಾತ್ರ ಸ್ಪರ್ಧೆ ಮಾಡಬೇಕೆ. ಉಳಿದ ವಾಲ್ಮಿಕಿ ಸಮುದಾಯದವರು ಸ್ಪರ್ಧೆ ಮಾಡಬಾರದೆ ಎಂದು ಪ್ರಶ್ನಿಸಿದರು. ನನ್ನ ಬದುಕಿನಲ್ಲಿ ಅತಿ ದೊಡ್ಡ ಶತ್ರುಗಳೆಂದರೆ ಭ್ರಷ್ಟಾಚಾರ ಮತ್ತು ಜಾತಿವಾದ. ನನ್ನ ಕೊನೆ ಉಸಿರು ಇರುವವರೆಗೂ ಈ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವೆ ಎಂದರು.

       ಕಳೆದ ಹತ್ತು ವರ್ಷದ ಅವಧಿಯಲ್ಲಿ ಇಬ್ಬರು ಸಂಸದರನ್ನ ಜಿಲ್ಲೆಯವರು ಕಂಡಿದ್ದಾರೆ. ಅರ್ಥ ವ್ಯವಸ್ಥೆ, ವಿದೇಶಾಂಗ ನೀತಿ, ರಕ್ಷಣಾ ಖಾತೆ ಸೇರಿದಂತೆ ಯಾವ ವಿಚಾರದ ಕುರಿತು ಚರ್ಚಿಸಲಿಲ್ಲ ಎಂದು ಶಾಸಕ ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದರು. ವಸತಿ ಸಚಿವ ಯು.ಟಿ.ಖಾದರ್, ಪಾಲಿಕೆ ಸದಸ್ಯ ಬೆಣಕಲ್ ಬಸವರಾಜ, ಮುಖಂಡರಾದ ಜೆ.ಎಸ್. ಆಂಜನೇಯಲು, ಹನುಮ ಕಿಶೋರ, ಜೆ.ವಿ.ಮಂಜುನಾಥ ಪಾಲ್ಗೊಂಡಿದ್ದರು.

      ಬಾಗಲಕೋಟೆ ಜಿಲ್ಲೆಯ ಜಮಖಂಡಿ ಉಪ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಚಿವ ವೇಣುಗೋಪಾಲ ದಿಢೀರನೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡರು.

        ಒಂದು ಕಡೆ ಬಿ.ಎಸ್. ಯಡಿಯೂರಪ್ಪ ಅವರ ಪ್ರಚಾರದ ಅಬ್ಬರ ಜೋರಾಗಿದ್ದರೆ, ಮತ್ತೊಂದು ಕಡೆ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ರಾಜಕೀಯ ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದು ಬಿಜೆಪಿಗೆ ವರವಾಗಿ ಪರಿಣಮಿಸಿದೆ.

        ಇತ್ತ ಕಾಂಗ್ರೆಸ್‍ನಲ್ಲಿ ಹಳ್ಳಿ ಹಳ್ಳಿಗಳಲ್ಲಿ ಎರಡನೇ ಹಂತದ ಮುಖಂಡರು ಠಿಕಾಣಿ ಹೂಡಿ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಮೊದಲ ಹಂತದ ನಾಯಕರು ಕ್ಷೇತ್ರದ ಕಡೆಗೆ ಮುಖ ಮಾಡದೇ ಇರೋದು ಕಾಂಗ್ರೆಸ್ ನಿದ್ದೆಗೆಡಿಸಿದೆ. ಈ ಮಧ್ಯೆ ವೇಣುಗೋಪಾಲ್ ಜಮಖಂಡಿಯ ರಾಯಲ್ ಪ್ಯಾಲೇಸ್‍ನಲ್ಲಿ ಮುಖಂಡರ ಸಭೆ ನಡೆಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap