ಮಾರ್ಚ್ 10 ರಂದು ಪಲ್ಸ್ ಪೋಲಿಯೋ…!!!

ಬೆಂಗಳೂರು

        ರಾಜ್ಯಾದ್ಯಂತ ಸುಮಾರು 65 ಲಕ್ಷ ಮಕ್ಕಳಿಗೆ ಮಾರ್ಚ್ 10 ರಂದು ಪಲ್ಸ್ ಪೋಲಿಯೋ ಲಸಿಕೆ ಹಾಕಲು ಸರ್ಕಾರ ನಿರ್ಧರಿಸಿದೆ.

       ವಿಕಾಸಸೌಧದಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಶಿವಾನಂದ ಪಾಟೀಲ್ ಅವರು ಈ ವಿಷಯ ತಿಳಿಸಿದರು.

      2011 ರ ನಂತರ ಭಾರತದಲ್ಲಿ ಪೋಲಿಯೋ ಪ್ರಕರಣಗಳು ಕಂಡು ಬರದಿದ್ದರೂ ಕಳೆದ ತಿಂಗಳು ಅಫ್ಘಾನಿಸ್ತಾನದಲ್ಲಿ ಎರಡು,ಪಾಕಿಸ್ತಾನದಲ್ಲಿ ನಾಲ್ಕು ಪೋಲೀಯೋ ಪ್ರಕರಣಗಳು ಪತ್ತೆಯಾಗಿದ್ದು ಈ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದರು.

      ಈ ಹಿನ್ನೆಲೆಯಲ್ಲಿ ಮಾರ್ಚ್ ಹತ್ತರಂದು ನಡೆಯಲಿರುವ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಐದು ವರ್ಷದವರೆಗಿನ 64,85,980 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು ಎಂದು ಹೇಳಿದರು.

      ಇದಕ್ಕಾಗಿ ರಾಜ್ಯಾದ್ಯಂತ 32,571 ಬೂತ್ ಗಳನ್ನು ನಿರ್ಮಿಸಲಾಗಿದ್ದು 51,918 ತಂಡಗಳು ಕಾರ್ಯ ನಿರ್ವಹಿಸಲಿವೆ.1,10,351 ಲಸಿಕಾ ಕಾರ್ಯಕರ್ತರು ಭಾಗವಹಿಸಲಿದ್ದು 2481 ತನಿಖಾ ತಂಡಗಳನ್ನು ನೇಮಕ ಮಾಡಲಾಗಿದೆ ಎಂದರು.

      ಒಂದು ವೇಳೆ ಮಾರ್ಚ್ 10 ರಂದು ಪಲ್ಸ್ ಪೋಲಿಯೋ ಲಸಿಕೆ ಹಾಕಿಸಲಾಗದಿದ್ದರೆ 11 ರಿಂದ 13 ರವರೆಗೆ ಲಸಿಕೆ ಹಾಕಿಸಲು ಕಾಲಾವಕಾಶ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

      ಇತ್ತೀಚೆಗೆ ಬಿಗಡಾಯಿಸಿರುವ ಮಂಗನ ಕಾಯಿಲೆ( ಕ್ಯಾಸನೂರು ಫಾರೆಸ್ಟ್ ಡಿಸೀಸ್)ಯ ವಿರುದ್ಧ ಸರ್ಕಾರ ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದು ಇದಕ್ಕಾಗಿ ಹತ್ತು ಕೋಟಿ ರೂ ಒದಗಿಸಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಹೇಳಿದರು.

       ಇದರಿಂದ ಸಾಗರದಲ್ಲಿ ಒಂದು ಲ್ಯಾಬೋರೇಟರಿ ಮತ್ತು ಮೂವತ್ತು ಹಾಸಿಗೆಗಳ ಆಸ್ಪತ್ರೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.ಹಾಗೆಯೇ ರೋಗಾಣುವನ್ನು ಪತ್ತೆ ಹಚ್ಚಲು ಇದುವರೆಗೂ ಜ್ವರಪೀಡಿತರ ರಕ್ತದ ಸ್ಯಾಂಪಲ್ ಅನ್ನು ಪುಣೆಗೆ ಕಳಿಸಲಾಗುತ್ತಿತ್ತು.ಅದರ ಬದಲು ಶಿವಮೊಗ್ಗ ಅಥವಾ ಸಾಗರದಲ್ಲೇ ಒಂದು ಡಯಾಗ್ನೋಸ್ಟಿಕ್ ಕೇಂದ್ರ ಆರಂಭಿಸಲು ಸರ್ಕಾರ ನಿರ್ಧರಿಸಿದೆ.

      ಅರಳಗೋಡು,ಸಿರಿವಂತೆ ಮತ್ತು ಆವಿನಹಳ್ಳಿ ವ್ಯಾಪ್ತಿಯಲ್ಲಿ ಈ ರೋಗ ಕಂಡು ಬಂದಿದ್ದು ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ನಂತರ ಈ ಮಟ್ಟದಲ್ಲಿ ಅದರ ಸುಳಿವು ಕಂಡು ಬಂದಿರುವುದರಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

       ಇದೇ ಸಂದರ್ಭದಲ್ಲಿ ಮದನ್ ಗೋಪಾಲ್ ಹಾಗೂ ಶಿವಕುಮಾರ್ ಅವರು ಮಂಗನ ಕಾಯಿಲೆಗೆ ಸಂಬಂಧಿಸಿದ ಹಲವು ವಿವರಗಳನ್ನು ನೀಡಿದರಲ್ಲದೆ ಮಂಗನ ಕಾಯಿಲೆಗೆ ತುತ್ತಾದವರಿಗೆ ಎಂದು ಮತ್ತಷ್ಟು ಪರಿಣಾಮಕಾರಿಯಾದ ವ್ಯಾಕ್ಸಿನ್ ಸಂಶೋಧನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರ ನೀಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap