ಮಾರ್ಚ್ 10 ರಂದು ಜಿಲ್ಲೆಯಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

ಹಾವೇರಿ

     ಜಿಲ್ಲೆಯಾದ್ಯಂತ ಮಾರ್ಚ್ 10 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಯಾವುದೇ ಒಂದು ಮಗು ಸಹ ಪೋಲಿಯೋ ಲಸಿಕೆಯಿಂದ ವಂಚಿತವಾಗಬಾರದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಪಲ್ಸ್ ಪೋಲಿಯೋ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈ ಕಾರ್ಯಕ್ರಮದ ಕುರಿತು ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ವ್ಯಾಪಕ ಪ್ರಚಾರಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು, ಡಂಗುರ ಸಾರಬೇಕು. ರೋಟರಿ, ಲಯನ್ಸ್ ಹಾಗೂ ಇತರೆ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಕೆ.ಆರ್.ಟಿ.ಸಿ. ಬಸ್ ನಿಲ್ದಾಣ ಹಾಗೂ ರೇಲ್ವೆ ನಿಲ್ದಾಣಗಳಲ್ಲಿ ಪೋಲಿಯೋ ಹನಿ ಹಾಕಲು ಸಂಚಾರಿ ತಂಡ ರಚಿಸಲು ಸೂಚಿಸಿದ ಅವರು, ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟೀಸ್ ನೀಡಲು ಸೂಚನೆ ನೀಡಿದರು.

       ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ ಅವರು, ಮಾ.10 ರಂದು ಬೂತ್‍ದ ಮಟ್ಟದಲ್ಲಿ ನಂತರದ ಮೂರು ದಿನಗಳ ಕಾಲ ಮನೆಗೆ ತೆರಳಿ ಸೊನ್ನೆಯಿಂದ ಐದು ವರ್ಷದಿಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು. ಜಿಲ್ಲೆಯಲ್ಲಿ 1,66,955 ಮಕ್ಕಳನ್ನು ಗುರುತಿಸಲಾಗಿದೆ ಹಾಗೂ 930 ಬೂತ್‍ಗಳನ್ನು ಸ್ಥಾಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಮಟ್ಟದ ಆಸ್ಪತ್ರೆ ಜಿಲ್ಲಾ ಆಸ್ಪತ್ರೆಗಳಲ್ಲಿ ಪೋಲಿಯೋ ಲಸಿಕೆ ಹಾಕಲು ಕ್ರಮವಹಿಸಲಾಗಿದೆ.

        ಹಾವೇರಿ ತಾಲೂಕಿನಲ್ಲಿ 28,364, ಬ್ಯಾಡಗಿ-12,380,, ರಾಣೇಬೆನ್ನೂರು-37,434, ಹಿರೇಕೆರೂರು-21,959, ಸವಣೂರು18,704, ಶಿಗ್ಗಾಂವ 19,569, ಹಾನಗಲ್ ತಾಲೂಕಿನಲ್ಲಿ 28,545 ಮಕ್ಕಳನ್ನು ಗುರುತಿಸಲಾಗಿದೆ. ಲಸಿಕಾ ಕಾರ್ಯಕ್ರಮಕ್ಕೆ 93 ವಾಹನಗಳು, 186 ಮೇಲ್ವಿಚಾರಕರು, 1453 ಆಶಾ ಮತ್ತು 1918 ಅಂಗನವಾಡಿ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ ಹಾಗೂ 1860 ಜನ ಲಸಿಕೆ ಹಾಕುವವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

        ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಪ್ರಚಾರ ಸಾಮಗ್ರಿಗಳನ್ನು ವಿತರಿಸಿದರು ಹಾಗೂ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಯಾನಂದ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಬೆಳಗಾಂವ ವಿಭಾಗದ ಸರ್ವೇಕ್ಷಣಾಧಿಕಾರಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ರೋಟರಿ, ಲಯನ್ಸ್ ಪ್ರಾಧಿಕಾರಿಗಳು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link