ನೂಕುನುಗ್ಗಲಿಂದ ಹೊರಟುಹೋದ ಪುನೀತ್!

ದಾವಣಗೆರೆ

       ನಟಸಾರ್ವಭೌಮ ಚಿತ್ರದ ಪ್ರಮೋಷನ್‍ಗೆ ಭಾನುವಾರ ನಗರಕ್ಕೆ ಆಗಮಿಸಿದ್ದ ನಟ ಪುನೀತ್ ರಾಜಕುಮಾರ್ ಅವರನ್ನು ಕಣ್ತುಂಬಿಕೊಳ್ಳಲು, ಹಸ್ತ ಲಾಘವ ಮಾಡಲು ಅಭಿಮಾನಿಗಳ ಮಧ್ಯೆ ನೂಕುನುಗ್ಗಲು ಉಂಟಾದ ಪರಿಣಾಮ ಬಸವಳಿದ ಅಪ್ಪು ಐದು ನಿಮಿಷದಲ್ಲೇ ಗೀತಾಂಜಲಿ ಚಿತ್ರ ಮಂದಿರದ ಆವರಣದಿಂದ ವಾಪಾಸ್ ತೆರಳಿದ ಘಟನೆ ನಡೆಯಿತು.

        ನಟ ಪುನೀತ್ ರಾಜಕುಮಾರ್ ನಗರಕ್ಕೆ ಆಗಮಿಸುವ ಸುದ್ದಿ ತಿಳಿದ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಭಾನುವಾರ ಬಳಿಗ್ಗೆ 11 ಗಂಟೆಯಿಂದಲೇ ಗೀತಾಂಜಲಿ ಚಿತ್ರ ಮಂದಿರದ ಆವರಣದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು.

       ಕಾರ್ಯಕ್ರಮದ ಪೂರ್ವ ನಿಗದಿಯಂತೆ ನಟ ಪುನೀತ್ ರಾಜಕುಮಾರ್ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಎದುರಿನ ಪಿಬಿ ರಸ್ತೆಗೆ ಆಗಮಿಸಿ, ಮಿನಿ ಲಾರಿ ಹತ್ತಿ ರೋಡ್ ಶೋ ನಡೆಸಿದರು. ಈ ವೇಳೆ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್, ಪುನೀತ್ ಈಸ್ ಪವರ್ ಸ್ಟಾರ್ ಎಂಬ ಘೋಷಣೆ ಹಾಕುತ್ತಾ ಅಭಿಮಾನಿಗಳು ಹೆಜ್ಜೆ ಹಾಕಿದರು. ಕೆಲವರು ಲಾರಿ ಹತ್ತಿ ಮಾಲಾರ್ಪಣೆ ಮಾಡಿದರು. ಕೆಲವರು ಮೊಬೈಲ್‍ನಲ್ಲಿ ವೀಡಿಯೋ ಚಿತ್ರೀಕರಿಸುತ್ತಿದ್ದರು.

       ಈ ರೋಡ್ ಶೋನಲ್ಲಿ ತೆರಳುತ್ತಿದ್ದ ಅಭಿಮಾನಿಗಳ ಮಧ್ಯೆ ನೂಕುನುಗ್ಗಲು ಆರಂಭವಾದ ಕಾರಣದಿಂದ ಪಿಬಿ ರಸ್ತೆಯಲ್ಲಿರುವ ಎಚ್‍ಪಿ ಪೆಟ್ರೋಲ್ ಬಂಕ್ ಬಳಿ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದನ್ನು ಗಮನಿಸಿದ ಅಪ್ಪು, `ದಯವಿಟ್ಟು ಒಡೆಯಬೇಡಿ, ನಿಲ್ಲಿಸಿ’ ಎಂದು ಮನವಿ ಮಾಡಿದರು.

       ಗೀತಾಂಜಲಿ ಚಿತ್ರ ಮಂದಿರದ ವರೆಗೆ ತೆರಳಬೇಕಿದ್ದ ಪುನೀತ್, ಈ ನೂಕುನುಗ್ಗಲು ಹಾಗೂ ಬಿಸಿಲ ಬೇಗೆಯಿಂದ ಬಸವಳಿದು ತ್ರಿಶೂಲ್ ಕಂಫರ್ಟ್‍ಬಳಿ ಮಿನಿ ಲಾರಿಯಿಂದ ಕೆಳಗಿಳಿದು ತಮ್ಮ ಕಪ್ಪು ಬಣ್ಣದ ಕಾರು ಏರಿ ಮಧ್ಯಾಹ್ನ 2 ಗಂಟೆ ಹೊತ್ತಿಗೆಪೊಲೀಸರ ಬೆಂಗಾವಲು ವಾಹನದೊಂದಿಗೆ ಚಿತ್ರಮಂದಿರದ ಆವರಣಕ್ಕೆ ಆಗಮಿಸಿದರು.

       ಚಿತ್ರ ಮಂದಿರದ ಬಳಿಯಲ್ಲಿ ಪುನಿತ್ ಇದ್ದ ಕಾರ್‍ಗೆ ಅಭಿಮಾನಿಗಳು ಸುತ್ತು ವರೆದ ಕಾರಣ ಕಾರಿನಿಂದ ಇಳಿಯಲು ಸಹ ಅಪ್ಪು ಹರಸಾಹಸ ಪಡಬೇಕಾಯಿತು. ಕಾರಿನಿಂದ ಇಳಿದು ಚಿತ್ರಮಂದಿರಕ್ಕೆ ಹೋಗಲು ಅಭಿಮಾನಿಗಳು ಅವಕಾಶ ನೀಡದೇ ಅವರನ್ನು ಎಳೆದಾಡಿದರು. ಇದರಿಂದ ತಬ್ಬಿಬ್ಬಾದ ಬೌನ್ಸರ್‍ಗಳಿಗೆ ಪುನೀತ್‍ಗೆ ರಕ್ಷಣೆ ಒದಗಿಸಲು ಸಾಧ್ಯವಾಗಲಿಲ್ಲ.

       ಈ ಸಂದರ್ಭದಲ್ಲಿ ಅಲ್ಲೇ ಇದ್ದ ಒಂದಿಬ್ಬರೂ ಪೊಲೀಸರು ಅಭಿಮಾನಿಗಳನ್ನು ಚದುರಿಸಲು ಮತ್ತೊಮ್ಮೆ ಲಘು ಲಾಠಿ ಪ್ರಹಾರ ನಡೆಸಿದರು. ಅದನ್ನು ಲೆಕ್ಕಿಸದ ಅಭಿಮಾನಿಗಳು ಪುನಃ ಪುನೀತ್ ಅವರಿದ್ದ ಕಡೆಗೆ ತೆರಳಿ ಅವರನ್ನು ಮತ್ತೆ ಎಳೆದಾಡಿದರು. ಈ ಘಟನೆಯಿಂದ ಪುನಿತ್ ರಾಜ್‍ಕುಮಾರ್ ಕಾರನ್ನು ಹತ್ತಿ, ಚಿತ್ರಮಂದಿರದ ಆವರಣದಿಂದ ವಾಪಾಸ್ಸಾದರು.

       ಈ ಘಟನೆ ಸ್ವತಃ ಅಭಿಮಾನಿಗಳಲ್ಲಿ ನೋವುಂಟು ಮಾಡಿತು. ನೆಚ್ಚಿನ ನಟನ ಮಾತು, ಮನರಂಜನೆ ಸಿಗದಿದ್ದಕ್ಕೆ ಬೇಸರಗೊಂಡು ಬಹಳಷ್ಟು ಕಾಲದವರೆಗೆ ಚಿತ್ರಮಂದಿರದ ಆವರಣದಲ್ಲೇ ಉಳಿದಿದ್ದರು. ಪುನಿತ್ ಮರಳಿ ಬರುತ್ತಾರೆ ಎಂಬ ನಿರೀಕ್ಷೆಯಿಂದ ಕಾದು ಕೊನೆಗೂ ಬಂದ ದಾರಿಗೆ ಸುಂಕವಿಲ್ಲ ಎಬ್ಬಂತೆ ಮನೆ ಕಡೆ ಹೊರಟರು.ಈ ಸಂದರ್ಭ ನಿರ್ಮಾಪಕ ಪವನ್ ಒಡೆಯರ್, ಶಿವರಾಜ್‍ಕುಮಾರ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಯೋಗೀಶ್, ಗೌರವಾಧ್ಯಕ್ಷ ಬಿ. ವಾಸುದೇವ್, ಕಾರ್ಯದರ್ಶಿ ಪ್ರಕಾಶ್, ದುರ್ಗೇಶ್ ಮತ್ತಿತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link