ದಾವಣಗೆರೆ
ಆರ್ಥಿಕ ಹಾಗೂ ವಿದ್ಯಾಭ್ಯಾಸದ ಕೊರತೆಯಿಂದ ಪದ್ಮಶಾಲಿ ಸಮಾಜಕ್ಕೆ ಈ ವರೆಗೂ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ ಎಂದು ತುಮ್ಮಿನಕಟ್ಟೆಯ ಪದ್ಮಶಾಲಿ ಮಠದ ಶ್ರೀಪ್ರಭುಲಿಂಗ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ನಗರದ ಎಸ್.ಕೆ.ಪಿ. ರಸ್ತೆಯ ಶ್ರೀಮಾರ್ಕಂಡೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಶ್ರೀಮಾರ್ಕಂಡೇಶ್ವರ ಪದ್ಮಶಾಲಿ ಸಮಾಜ ಸೇವಾ ಸಂಘ, ಶ್ರೀಮಾರ್ಕಂಡೇಶ್ವರ ಪದ್ಮಶಾಲಿ ನೇಕಾರ ಮಹಿಳಾ ಸಂಘ, ಶ್ರೀಮಾರ್ಕಂಡೇಶ್ವರ ಸ್ನೇಹ ಬಳಗ, ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ (ನೇಕಾರ) ಯುವಕರ ಸಂಘ ಇವುಗಳ ಸಂಯುಕ್ರಾಶ್ರಯದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಶೇ.75ಕ್ಕೂ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಸಮಾಜಗಳು ರಾಜಕೀಯ ಪ್ರಾತಿನಿಧ್ಯ ದೊರೆತಿದೆ. ಆದರೆ, ನಮ್ಮ ಸಮಾಜ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಕಾರಣ ಇನ್ನೂ ರಾಜಕೀಯ ಪ್ರಾತಿನಿಧ್ಯ ಸಿಗದಂತಾಗಿದೆ. ಯಾವುದೇ ಸಮಾಜದ ಏಳಿಗೆಗೆ ಶಿಕ್ಷಣವೇ ಅಸ್ತ್ರವಾಗಿದೆ. ಆದ್ದರಿಂದ ಸಮಾಜದ ಪೋಷಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕೆಂದು ಕಿವಿಮಾತು ಹೇಳಿದರು.
ಎಲ್ಲಾ ಮಕ್ಕಳಲ್ಲೂ ಪ್ರತಿಭೆ ಇರುತ್ತೆ. ಆದರೆ, ಅದನ್ನು ಗುರುತಿಸಿ ಬೆಳಕಿಗೆ ತರುವಂತಹ ಪ್ರಯತ್ನವನ್ನು ಪೋಷಕರು ಮಾಡಬೇಕು. ಮಕ್ಕಳ ಅಭಿರುಚಿಗೆ ಪೂರಕವಾಗಿ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತಂದು, ಸಮಾಜವನ್ನು ಸಶಕ್ತಗೊಳಿಸಬೇಕೆಂದು ಸಲಹೆ ನೀಡಿದರು.
ಡಿ.ಆರ್.ಆರ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಬಿ.ಟಿ.ಮಾರ್ಕಂಡೇಯ ಮಾತನಾಡಿ, ನಮ್ಮ ಸಮಾಜವು ಆರ್ಥಿಕವಾಗಿ ಹಿಂದುಳಿದಿದೆ. ಇದು ಸರಿಯಾಗಬೇಕಾದರು ಸಮಾಜದ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಜೀವನದಲ್ಲಿ ಮಾನವರಾಗಿ ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡಬೇಕಾಗಿದೆ. ಇತ್ತೀಚೆಗೆ ಸಮಾಜದ ಮಕ್ಕಳು ಸಾಧನೆಗೈಯ್ಯುವ ಮಟ್ಟಕ್ಕೆ ಬೆಳೆದಿರುವುದು ಸಂತಸದ ಸಂಗತಿ ಎಂದರು.
ಸರ್ಕಾರವು ಹಲವು ಇಲಾಖೆಗಳಲ್ಲಿ ವಿವಿಧ ಹುದ್ದೆಗಳನ್ನು ಪ್ರತಿಭೆಗೆ ಅನುಗುಣವಾಗಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ನಮ್ಮ ಮಕ್ಕಳು ಸಹ ಚೆನ್ನಾಗಿ ಅಭ್ಯಾಸ ಮಾಡಿ, ಒಳ್ಳೆಯ ಅಂಕ ಗಳಿಸಿ, ಉನ್ನತ ಸ್ಥಾನ ಅಲಂಕರಿಸಬೇಕೆಂದು ಸಲಹೆ ನೀಡಿದರು.
ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷ ವದ್ಧಿ ಪಿ.ಜೆ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಮಾರ್ಕಂಡೇಶ್ವರ ಪದ್ಮಶಾಲಿ (ನೇಕಾರ) ಯುವಕರ ಸಂಘದ ಅಧ್ಯಕ್ಷ ವೆಂಕಟೇಶ್ ಎಲ್. ಲಿಂಗಂಪಲ್ಲಿ, ಪ್ರಾಧ್ಯಾಪಕ ಡಾ.ಜಗನ್ನಾಥ್ ನಾರಮಂಚಿ, ಮಹಿಳಾ ಸಂಘದ ಅಧ್ಯಕ್ಷೆ ಸುಧಾ ಡಿ.ಸಿ.ಪಾಂಡುರಂಗ ದೇವರಕೊಂಡಿ, ಉಪಾಧ್ಯಕ್ಷ ರಮೇಶ್ ಟಿ.ಸಂಗೀತ್, ನ್ಯಾಯವಾದಿ ತುಕಾರಾಮಪ್ಪ ಅರಣಿ, ಚಿತ್ರಕಲಾ ಶಿಕ್ಷಕರಾದ ಉಮೇಶ್ ವಿ. ಪೆದ್ದಿಪತಿ, ಮಾನಪ್ಪ ಬಡಿಗೆರೆ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು. 2017-18ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಶೇ.70ಕ್ಕೂ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅನುಷಾ ಪ್ರಾರ್ಥಿಸಿದರು. ದೇವರಾಜ್ ಟಿ.ಸಂಗೀತ್ ಸ್ವಾಗತಿಸಿದರು. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
