ಬಳ್ಳಾರಿ
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ನಡೆಯಲಿರುವ ಶ್ರೀ ಪುರಂದರದಾಸರ ಆರಾಧನೋತ್ಸವ ಇದೇ ಜ.24ರಂದು ಹಂಪಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ. ಇದಕ್ಕೆ ಸಂಬಂಧಿಸಿದ ಅಗತ್ಯ ಸಿದ್ದತೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಂಜುನಾಥ ಅವರು ತಿಳಿಸಿದರು.
ಹೊಸಪೇಟೆ ಪತ್ರಿಕಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜ.24ರಂದು ಬೆಳಿಗ್ಗೆ 8ಕ್ಕೆ ಹಂಪಿ ಬಳಿಯ ನದಿತೀರದ ಶ್ರೀ ಪುರಂದರ ಮಂಟಪದಲ್ಲಿ ವ್ಯಾಸರಾಜಮಠ(ಸೋಸಲೆ) ಉತ್ತರಾಧಿಕಾರಿ ಶ್ರೀ ವಿದ್ಯಾವಿಜಯತೀರ್ಥ ಶ್ರೀಪಾದಂಗಳವರು, ಹಂಪಿ ವಿರೂಪಾಕ್ಷೇಶ್ವರ ವಿದ್ಯಾರಣ್ಯ ಪೀಠದ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮಿಗಳ ಸಾನಿಧ್ಯದಲ್ಲಿ ಪೂಜೆ ನಡೆಯಲಿದೆ, ಇದೇ ಸಂದರ್ಭದಲ್ಲಿ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆಯ ಮಕ್ಕಳು ದಾಸಕೀರ್ತನೆಗಳು ಪ್ರಸ್ತುತಪಡಿಸಲಿದ್ದಾರೆ ಎಂದರು.
ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಸಂಜೆ 6ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದೆ. ಉಪಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರು ಚಾಲನೆ ನೀಡಲಿದ್ದಾರೆ. ಶಾಸಕ ಆನಂದಸಿಂಗ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಂಜೆ 4ರಿಂದ ಸಂಜೆ 6ರವರೆಗೆ ಬಳ್ಳಾರಿ ಜಿಲ್ಲೆಯ ಸ್ಥಳೀಯ ಕಲಾವಿದರಾದ ವೀರೇಶ ದಳವಾಯಿ, ಎಚ್.ಎಂ.ಮಹಾದೇವಯ್ಯ, ಅಮಾತಿ ಬಸವರಾಜ, ಜೆ.ಅಶ್ವೀನಿ, ಅಂಗಡಿ ವಾಮದೇವ, ಮಾರುತಿರಾವ್, ಪಾರ್ವತಮ್ಮ, ಜಯಮ್ಮ ದಾನಮ್ಮನವರ್, ಅನುರಾಧ, ಶ್ಯಾವಳಿಗೆಪ್ಪ, ಸೃಷ್ಠಿ, ಪಾಂಡುನಾಯ್ಕ ತಾಳೆ ಅವರಿಂದ ಪುರಂದರದಾಸರ ಕೀರ್ತನೆಗಳ ಗಾಯನ ಪ್ರಸ್ತುತಪಡಿಸಲಿದ್ದು, ಮೋಹನ್ ಕಲ್ಬುರ್ಗಿ, ಸುಧಾಕರ್, ಎಂ.ಅಹಿರಾಜ್, ಕರುಣಾನಿಧಿ, ಶ್ರೀಧರ್ ಮುರೋಳ್, ಶಿವಪ್ರಕಾಶ್ ವಸ್ತ್ರದ, ಎಚ್.ಎಂ.ಹನುಮಂತಪ್ಪ, ಎಚ್.ಬಸವರಾಜ, ಕೆ.ಮೂರ್ತಿ, ರವಿಕುಮಾರ್ ಹಾಗೂ ತಂಡದವರು ಪಕ್ಕವಾದ್ಯ ಕಲಾವಿದರಾಗಿ ಗಾಯನ ಪ್ರಸ್ತುತಿಗೆ ಸಾಥ್ ನೀಡಲಿದ್ದಾರೆ.
ಸಂಜೆ 7ರಿಂದ ಪುರಂದರದಾಸರ ಕೀರ್ತನೆಗಳ ಗಾಯನ ಹಾಗೂ ನೃತ್ಯ ಕಾರ್ಯಕ್ರಮಗಳು ಜರುಗಲಿವೆ. ಪಂಡಿತ ಕುಮಾರದಾಸ ಅವರಿಂದ ಕರ್ನಾಟಕ ಸಂಗೀತ, ಗಾನಶ್ರೀ ಶ್ರೀನಿವಾಸಲು ಅವರಿಂದ ದಾಸರಪದಗಳು, ಮನೋಜ್ಞ ನೃತ್ಯಕಲಾ ಅಕಾಡೆಮಿಯಿಂದ ಭರತನಾಟ್ಯ,ಕೆ.ಸುನೀತಾ ಅವರಿಂದ ವೀಣಾವಾದನ, ಕಲಾಸಂಪದ ನಾಟ್ಯಶಾಲೆಯಿಂದ ಭರತನಾಟ್ಯ, ಯಶೋಧ ಮತ್ತು ತಂಡದಿಂದ ಕೋಲಾಟ, ಸೂರ್ಯ ಕಲಾಟ್ರಸ್ಟ್ ವತಿಯಿಂದ ಸಮೂಹ ನೃತ್ಯ, ನಾಟ್ಯನಾದ ಕಲಾಸಂಘದಿಂದ ಶಾಸ್ತ್ರೀಯ ಸಮೂಹ ನೃತ್ಯ, ಬೆಂಗಳೂರಿನಲ್ಲಿ ರಂಗಪುತ್ಥಳಿ ಅವರಿಂದ ತೊಗಲುಗೊಂಬೆ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪಿ.ಎನ್.ಲೋಕೇಶ್, ತಹಶೀಲ್ದಾರ್ ವಿಶ್ವನಾಥ, ಬಿ.ಇ.ಒ ಎಲ್.ಡಿ ಜೋಶಿ, ತಾಪಂ ಇಒ ಶ್ರೀಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್.ಕೆ.ರಂಗಣ್ಣವರ ಸೇರಿದಂತೆ ಇತರರು ಇದ್ದರು.