ಹರಪನಹಳ್ಳಿ:
ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ಕಟ್ಟಡ ಕಟ್ಟುವ, ಕಲ್ಲು ಒಡೆಯುವ ಮತ್ತು ಕ್ವಾರಿ ಕಾರ್ಮಿಕರ ಸಂಘ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಹರಿಹರ ರಸ್ತೆ, ಶಿರಿಸಪ್ಪ ವೃತ್ತ, ಹಳೆ ಬಸ್ ನಿಲ್ದಾಣ, ಐಬಿ ವೃತ್ತ ಮೂಲಕ ಮಿನಿವಿಧಾನಸೌಧ ತಲುಪಿತು. ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರ ರಚಿಸಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯ ನಿಯಮಾವಳಿ ಪ್ರಕಾರ ಫಲಾನುಭವಿಗಳು ಕರ್ನಾಟಕದಲ್ಲೇ ಮದುವೆ ಆಗಬೇಕು ಎಂಬ ಎಂಬುದು ಕಾನೂನು ಬಾಹಿರವಾಗಿದೆ. ರಾಜ್ಯದ ಕಾರ್ಮಿಕರು ಗಡಿಭಾಗದ ರಾಜ್ಯಗಳ ಜತೆ ಸಂಬಂಧಗಳನ್ನು ಹೊಂದಿದ್ದಾರೆ. ಈ ನಿಯಮಾವಳಿ ಒಡೆದಾಳು ನೀತಿ ಅನುಸರಿಸುತ್ತಿದೆ. ಅನ್ಯ ರಾಜ್ಯದವರ ವೈವಾಹಿಕ ಸಂಬಂಧ ಬೆಳೆಸಿದರೆ ಸರ್ಕಾರ ಸಹಾಯಧನ ನೀಡಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗುರುತಿನ ಚೀಟಿ ವಿತರಿಸಲು ಕಾರ್ಮಿಕರನ್ನು ಗುರುತಿಸಬೇಕಾಗಿದ್ದು, ಇದಕ್ಕಾಗಿ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿಸ್ವಾಸ್ ಅವರು ಮಂಡಳಿಯ ನಿಯಮಾವಳಿ ಗಾಳಿಗೆ ತೂರಿ ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದ ಇಲಾಖೆಗೆ ನಕಲಿ ಫಲಾನುಭವಿಗಳ ಅರ್ಜಿ ಸಲ್ಲಿಕೆ ಆಗುತ್ತಿವೆ. ಈ ಒಪ್ಪಂದಲ್ಲಿ ಅವ್ಯವಹಾರ ನಡೆದಿದ್ದು, ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಕೃತಕ ಮರಳು ಅಭಾವ ಸೃಷ್ಟಿಸಿ ಎಂ.ಸ್ಟಾಂಡ್ ಬಳಕೆಗೆ ಪರೋಕ್ಷ ಒತ್ತಡ ಹೇರುವ ಮೂಲಕ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಲಾಗುತ್ತಿದೆ . ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಕಟ್ಟಡ ಕಾರ್ಮಿಕರಿಗೆ ನಿವೇಶನ ನೀಡಿ ಮನೆ ನಿರ್ಮಿಸಿ ಕೊಡಬೇಕು. ಅಲ್ಲದೇ ಮಕ್ಕಳಿಗೆ ಉನ್ನತ ಶಿಕ್ಷಣದವರಿಗೂ ಕಡ್ಡಾಯವಾಗಿ ಉಚಿತ ಶಿಕ್ಷಣ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿ ಆಗ್ರಹಿಸಿದರು.
ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ರಾಜ್ಯ ಸಹಕಾರ್ಯದರ್ಶಿ ಕೊಟ್ರೇಶ್, ಗೌರವಾಧ್ಯಕ್ಷ ಟಿ.ಎಂ.ಕೊಟ್ರಯ್ಯ, ಸಂಘದ ಮುಂಡರಾದ ಕಾಳಾಚಾರಿ, ಮೆಹಬೂಬ್ ಭಾಷಾ, ಕಂಚಿಕೆರೆ ಕೆಂಚಪ್ಪ, ಕಂಚಿಕೆರೆ ಹುಸೇನಿ, ಕೆ.ಸುರೇಶ್, ಎಚ್.ದಾದಾಫಿರ್, ಪಿ.ರಾಜಪ್ಪ, ಪಿ.ದುರುಗಪ್ಪ, ಮಾದಿಹಳ್ಳಿ ಮಂಜುನಾಥ್ ಇವರೂ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
