ಚಳ್ಳಕೆರೆ
ನಗರಸಭೆ ವ್ಯಾಪ್ತಿಯಲ್ಲಿರುವ ಕೊಳಚೆ ಪ್ರದೇಶದ ಕೆಲವು ಭಾಗಗಳಲ್ಲಿ ಮಾತ್ರ ರಾಜ್ಯ ಕೊಳಚೆ ನಿರ್ಮೂಲನ ಮಂಡಳಿವತಿಯಿಂದ ಮನೆಗಳನ್ನು ನಿರ್ಮಿಸಿಕೊಡುವ ಕಾರ್ಯ ಚಾಲ್ತಿಯಲ್ಲಿದ್ದು, ಈ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರೈಸುವಂತೆ ಶಾಸಕ ಟಿ.ರಘುಮೂರ್ತಿ ಸೂಚನೆ ನೀಡಿದರು.
ಅವರು, ಗುರುವಾರ ಇಲ್ಲಿನ ನಗರಸಭೆಗೆ ದಿಢೀರ್ ಭೇಟಿ ನೀಡಿ ನಗರಸಭೆ ಅಧಿಕಾರಿಗಳು, ಸದಸ್ಯರು, ಸಾರ್ವಜನಿಕರೊಂದಿಗೆ ನಗರಸಭೆ ಅಭಿವೃದ್ಧಿಯ ಬಗ್ಗೆ ಸಭೆ ನಡೆಸಿ ಸರ್ಕಾರ ಈ ಹಿಂದೆಯೇ ನಗರ ವ್ಯಾಪ್ತಿಯಲ್ಲಿ ಒಟ್ಟು 6 ಕೊಳಚೆ ಪ್ರದೇಶಗಳನ್ನು ಗುರುತಿಸಿದ್ದು, ಆ ಪೈಕಿ ಮೂರು ಕೊಳಚೆ ಪ್ರದೇಶಗಳ ವ್ಯಾಪ್ತಿಯಲ್ಲಿ 200 ಮನೆಗಳ ನಿರ್ಮಾಣಕ್ಕೆ ಮಂಡಳಿ ಈಗಾಗಲೇ ಕಾಮಗಾರಿ ಪ್ರಾರಂಭಿಸಿದ್ದು, ಈ ಕಾಮಗಾರಿಗಳನ್ನು ಕೂಡಲೇ ಮುಕ್ತಾಯಗೊಳಿಸಿ ಫಲಾನುಭವಿಗಳಿಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ ಪೌರಾಯುಕ್ತ ಪಿ.ಪಾಲಯ್ಯನವರಿಗೆ ಸೂಚನೆ ನೀಡಿದರು.
ನಗರಸಭೆ ವ್ಯಾಪ್ತಿಯಲ್ಲಿ ಇನ್ನೂ ಮೂರು ಕೊಳಚೆ ಪ್ರದೇಶದಲ್ಲಿದ್ದು, ಇಲ್ಲಿಯೂ ಸಹ ಮನೆ ನಿರ್ಮಾಣಕ್ಕೆ ಸರ್ಕಾರಕ್ಕೆ ವರದಿ ನೀಡಿ ನಕಲನ್ನು ತಮಗೆ ನೀಡಿದರೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಹೆಚ್ಚಿನ ಪ್ರಮಾಣದ ಮನೆಗಳನ್ನು ಮಂಜೂರು ಮಾಡಿಸುವ ಭರವಸೆ ನೀಡಿದರು. ನಗರಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸಿಬ್ಬಂದಿ ವರ್ಗ ಸಕರಾತ್ಮಕವಾಗಿ ಸ್ಪಂದಿಸಬೇಕು, ಯಾವುದೇ ಕಾರಣಕ್ಕೂ ಮದ್ಯವರ್ತಿಗಳ ಹಾವಳಿ ಕಚೇರಿಯಲ್ಲಿ ಇಲ್ಲದಂತೆ ಜಾಗ್ರತೆ ವಹಿಸಬೇಕೆಂದರು.
ಪೌರಾಯುಕ್ತ ಪಿ.ಪಾಲಯ್ಯ ಮಾಹಿತಿ ನೀಡಿ, ಇತ್ತೀಚಿಗಷ್ಟೇ ನಗರಸಭೆ ವ್ಯಾಪ್ತಿಯ 16,17 ಮತ್ತು 18ನೇ ವಾರ್ಡ್‍ಗಳಲ್ಲಿ ಕೊಳಚೆ ಪ್ರದೇಶ ಮಂಡಳಿ ಮನೆಗಳನ್ನು ನಿರ್ಮಿಸುತ್ತಿದ್ದು, ಎಲ್ಲವೂ ಮುಕ್ತಾಯ ಹಂತ ತಲುಪಿವೆ, ಅವುಗಳನ್ನು ಮುಂದಿನ ತಿಂಗಳ ಒಳಗಾಗಿ ಸಂಬಂಧಪಟ್ಟ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದರು.
ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಾಹಿತಿ ನೀಡಿ, ನಗರಸಭೆ ವ್ಯಾಪ್ತಿಯಲ್ಲಿ ಬಿಎಂ ಸರ್ಕಾರಿ ಪ್ರೌಢಶಾಲೆಯೂ ಸೇರಿದಂತೆ ಇನ್ನೂ ವಿವಿಧ ಕಡೆ ಸರ್ಕಾರಿ ಜಾಗವಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ, ನಿವೇಶನ ರಹಿತರಿಗೆ ನೀಡುವ ಕುರಿತು ಅಧಿಕಾರಿಗಳಿಂದ ಅನುಮತಿ ಪಡೆದ ನಂತರ ಕ್ರಮಕೈಗೊಳ್ಳಬಹುದಾಗಿದೆ ಎಂದರು.
ಸಭೆಯಲ್ಲಿ ನಗರಸಭಾ ಸದಸ್ಯರಾದ ರಮೇಶ್‍ಗೌಡ, ಚಳ್ಳಕೆರೆಯಪ್ಪ, ವಿರೂಪಾಕ್ಷಿ, ವೈ.ಪ್ರಕಾಶ್, ಮಲ್ಲಿಕಾರ್ಜುನ, ಸುಜಾತಬೋರಣ್ಣ, ಎಂ.ಜೆ.ರಾಘವೇಂದ್ರ, ಮಾಜಿ ಸದಸ್ಯ ಎಸ್.ಮುಜೀಬ್, ಆರ್.ಪ್ರಸನ್ನಕುಮಾರ್, ಕಚೇರಿ ವ್ಯವಸ್ಥಾಪಕ ಕಂದಾಯಾಧಿಕಾರಿ ಈ.ಈರಮ್ಮ, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ಯಾಮಲ, ಸಹಾಯಕ ಇಂಜಿನಿಯರ್ ವಿನಯ್, ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ