ಹೊನ್ನಾಳಿ:
ಪಟ್ಟಣ, ತಾಲೂಕಿನ ಕುಂದೂರು ಹೋಬಳಿ ಸೇರಿದಂತೆ ವಿವಿಧೆಡೆ ಸೋಮವಾರ ಮುಂಜಾನೆ ಕೃತ್ತಿಕಾ ಮಳೆ ಉತ್ತಮವಾಗಿ ಸುರಿಯುವ ಮೂಲಕ ಕೆಂಡದಂತೆ ಕಾದ ಧರೆಗೆ ಕೊಂಚ ತಂಪೆರೆಯಿತು. ತಾಲೂಕಿನ ಕೂಲಂಬಿ, ಕುಂದೂರು ಸುತ್ತ-ಮುತ್ತಲಿನ ವಿವಿಧ ಗ್ರಾಮಗಳಲ್ಲಿ ಸೋಮವಾರ ಬೆಳಿಗ್ಗೆ 5ರಿಂದ 7ರವರೆಗೆ ಸುಮಾರು ಎರಡು ಗಂಟೆ ಕಾಲ ಉತ್ತಮ ಮಳೆ ಸುರಿಯಿತು.
ತಾಲೂಕಿನ ಹನುಮನಹಳ್ಳಿ, ತಿಮ್ಲಾಪುರ, ಯಕ್ಕನಹಳ್ಳಿ, ಯರೇಚಿಕ್ಕನಹಳ್ಳಿ, ಬನ್ನಿಕೋಡು, ದಿಡಗೂರು, ಹರಳಹಳ್ಳಿ, ಹೊಳೆಹರಳಹಳ್ಳಿ, ಹನುಮಸಾಗರ, ಕತ್ತಿಗೆ, ಮಾದೇನಹಳ್ಳಿ, ಹತ್ತೂರು, ಮಾರಿಕೊಪ್ಪ, ಹಿರೇಗೋಣಿಗೆರೆ, ಚಿಕ್ಕಗೋಣಿಗೆರೆ, ಕೋಣನತಲೆ, ಅರಕೆರೆ, ತರಗನಹಳ್ಳಿ, ಸಿಂಗಟಗೆರೆ ಮತ್ತಿತರ ಗ್ರಾಮಗಳಲ್ಲಿ ಉತ್ತಮ ಮಳೆ ಸುರಿಯಿತು.
ಸೋಮವಾರ ಸುರಿದ ಮಳೆಯಿಂದಾಗಿ ಭತ್ತದ ಒಕ್ಕಲು ಕಾರ್ಯಕ್ಕೆ ಕೊಂಚ ತೊಂದರೆಯಾಯಿತು. ಆದರೆ, ಮಳೆಯಿಂದಾಗಿ ಭೂಮಿಯ ಅಂತರ್ಜಲ ಮಟ್ಟ ಉತ್ತಮಗೊಳ್ಳುವಂತಾಗಿದ್ದು, ಜಾನುವಾರುಗಳು, ವನ್ಯಜೀವಿಗಳಿಗೆ ನೀರು ದೊರೆಯುವಂತಾಗಿದೆ.
ಅಡಕೆ ತೋಟಗಳಿಗೂ ಈ ಮಳೆ ಸಂಜೀವಿನಿಯಂತಾಗಿದೆ. ಕಳೆದ ಬಾರಿಯ ಭೀಕರ ಬರಗಾಲದಿಂದ ತತ್ತರಿಸಿಹೋಗಿದ್ದ ಅಡಕೆ ಬೆಳೆಗಾರರು, ಇದೀಗ ಸುರಿದ ಉತ್ತಮ ಮಳೆಯಿಂದ ಹರ್ಷ ಚಿತ್ತರಾಗಿದ್ದಾರೆ. ಅಡಕೆ ತೋಟಗಳನ್ನು ಉಳಿಸಿಕೊಳ್ಳಲು ರೈತರು ಭದ್ರಾ ನಾಲೆಗಳಿಂದ ಟ್ಯಾಂಕರ್ ಮೂಲಕ ನೀರು ಹರಿಸುತ್ತಿದ್ದರು.
ಯುಗಾದಿ ಹಬ್ಬದ ನಂತರ ಪ್ರತಿ ವರ್ಷ ಮೂರರಿಂದ ನಾಲ್ಕು ಮಳೆಗಳು ಸುರಿಯುತ್ತಿದ್ದವು. ಆಗ ಭೂಮಿ ತಂಪಾಗುತ್ತಿತ್ತು. ಆದರೆ, ಈ ಬಾರಿ ಯುಗಾದಿ ಹಬ್ಬದ ನಂತರ ಒಂದೂ ಗಟ್ಟಿ ಮಳೆ ಬರಲಿಲ್ಲ, ಈ ಕಾರಣಕ್ಕಾಗಿ ಭೂಮಿ ಕಾದ ಕಾವಲಿಯಂತಾಗಿತ್ತು. ಉಷ್ಣಾಂಶ 41-44 ಡಿಗ್ರಿ ಸೆಂಟಿಗ್ರೇಡ್‍ವರೆಗೂ ಹೆಚ್ಚಳವಾಗಿತ್ತು ಎಂದು ಹೇಳುತ್ತಾರೆ ತಾಲೂಕಿನ ಯಕ್ಕನಹಳ್ಳಿ ಗ್ರಾಮದ ಟಿ. ಬಸವರಾಜಪ್ಪ.
ಹೊನ್ನಾಳಿ ಪಟ್ಟಣ ಹಾಗೂ ಸುತ್ತ-ಮುತ್ತಲಿನ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯರಾತ್ರಿ 1ರಿಂದ 2.30ರವರೆಗೂ ಬಿರುಸಿನ ಮಳೆ ಸುರಿಯತು. ಬೆಳಿಗ್ಗೆ 5.30ರಿಂದ 8.30ರವರೆಗೂ ಉತ್ತಮ ಮಳೆ ಸುರಿಯಿತು. ಬೆಳಿಗ್ಗೆ ಬಿರುಸಿನ ಮಳೆ ಸುರಿದ ಕಾರಣ ದಿನಪತ್ರಿಕೆ ಹಂಚುವವವರು ತೀವ್ರ ತೊಂದರೆ ಅನುಭವಿಸಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ಒಣಗಲು ಹಾಕಿದ್ದ ಭತ್ತ, ಮೆಕ್ಕೆಜೋಳ ರಾಶಿಗಳಿಗೆ ಸ್ವಲ್ಪ ತೊಂದರೆಯಾಯಿತು. ಭತ್ತ ಒಕ್ಕಲು ಮಾಡಿದ ರೈತರು ಗ್ರಾಮೀಣ ಪ್ರದೇಶಗಳಲ್ಲಿಯೂ ರಾಶಿ ಒಣಗಿಸಲು ಪರದಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ