ತಿಪಟೂರು
ಭಾರತದ ಕೃಷಿಯು ಮಳೆಯೊಂದಿಗಿನ ಜೂಜಾಟ ಎಂಬ ಹೇಳಿಕೆಯು ಸಾರ್ವಕಾಲಿಕ ಸತ್ಯವಾಗಿಯೆ ಉಳಿದಿದೆ. ಮಳೆ ಬಂದರೆ ಬಂಪರ್ ಬೆಳೆ, ಹಾಗೆಯೇ ಮಳೆ ಬಂದರೆ ಬೆಳೆಯು ಕೈ ಹತ್ತದಂತಹ ಪರಿಸ್ಥಿತಿಗೆ ರೈತರು ಬಂದು ತಲುಪಿದ್ದಾರೆ.ತಾಲ್ಲೂಕಿನಲ್ಲಿ ಒಟ್ಟು ರಾಗಿ ಬಿತ್ತನೆಯ ಗುರಿ 17,000 ಹೆಕ್ಟೇರ್ ಆಗಿದ್ದು, ಇದುವರೆಗೂ 9,180 ಹೆಕ್ಟೇರ್‍ಗಳಲ್ಲಿ ಮಾತ್ರ ಬಿತ್ತನೆಯಾಗಿದೆ. ಕೇವಲ ಶೇ. 50 ರÀಷ್ಟು ಜಮೀನಿನಲ್ಲಿ ಮಾತ್ರ ರಾಗಿ ಬಿತ್ತನೆಯಾಗಿದೆ. ಇನ್ನುಳಿದ ಪ್ರದೇಶವು ಹೆಸರು ಮತ್ತು ಕಳೆಯಿಂದ ತುಂಬಿದೆ.
ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ನೆಲವನ್ನು ಸ್ವÀಚ್ಛಗೊಳಿಸಿಕೊಳ್ಳಲು ರೈತರಿಗೆ ಅವಕಾಶವೆ ಆಗುತ್ತಿಲ್ಲ. ಇನ್ನೂ ಮುಂಚೆಯೇ ಸ್ವಚ್ಛಗೊಳಿಸಿಕೊಂಡಿದ್ದ ಭೂಮಿಗೆ ರೈತರು ಕಾಲು ಇಡಲಾದಷ್ಟು ತೇವಾಂಶವನ್ನು ಹೊಂದಿದೆ. ಕಳೆದ ಶನಿವಾರ, ಭಾನುವಾರ ಮತ್ತು ಸೋಮವಾರ ಸ್ವಲ್ಪ ವಿಶ್ರಾಂತಿ ನೀಡಿದ್ದ ಮಳೆಯು ಮಂಗಳವಾರ ಮತ್ತೆ ಸುರಿದಿದ್ದು, ರೈತರನ್ನು ಆತಂಕಕ್ಕೆ ಈಡು ಮಾಡಿದೆ.
ಮಳೆಯ ಪ್ರಮಾಣ:
ತಾಲ್ಲೂಕಿನಲ್ಲಿ ಜುಲೈ ತಿಂಗಳ ಅಂತ್ಯಕ್ಕೆ ವಾಡಿಕೆಯಂತೆ ಸುಮಾರು 60 ಎಂ.ಎಂ. ನಷ್ಟು ಮಳೆಯಾಗಬೇಕಿತ್ತು. ಆದರೆ ಈ ಬಾರಿ ಶೇ. 200 ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಜುಲೈ ಅಂತ್ಯಕ್ಕೆ 180 ಎಂ.ಎಂ. ಮಳೆಯಾಗಿದ್ದು, ಈ ಬಾರಿ ರಾಗಿ ಬಿತ್ತನೆಗೆ ಸ್ವಲ್ಪ ತೊಂದರೆಯಾಗಿದೆ.
ಆದರೂ ಸಹ ಈ ಬಾರಿ ಸರಿಯಾದ ಕಾಲಕ್ಕೆ ಮಳೆ ಬಂದಿದ್ದರಿಂದ ರೈತರು ಕಳೆದ ವರ್ಷಕ್ಕಿಂತ ಸ್ವಲ್ಪ ಮುಂಚಿತವಾಗಿಯೆ ರಾಗಿ ಬಿತ್ತನೆಗೆ ಮುಂದಾಗಿದ್ದಾರೆ. ಜುಲೈ ತಿಂಗಳ ಮೊದಲೆರಡು ವಾರದವರೆಗೂ ದೀರ್ಘಾವಧಿಯ ಎಂಆರ್6 ತಳಿಯ ರಾಗಿ ಬಿತ್ತನೆ ಮಾಡಲಾಗಿದ್ದು, 130 ರಿಂದ 125 ದಿನಗಳಿಗೆ ಬೆಳೆಯು ಬರುತ್ತದೆ. ಆದರೆ ಈಗ ಸ್ವಲ್ಪ ಅಲ್ವಾವಧಿಯ ತಳಿಯಾದ ಎಂಎಲ್ 365 ಬಿತ್ತನೆ ಬೀಜವನ್ನು ವಿತರಿಸುತ್ತಿದ್ದು, 115 ರಿಂದ 110 ದಿನದಲ್ಲಿ ಬೆಳೆಯು ಬರುತ್ತದೆ ಎಂದು ಕೃಷಿ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ ತಿಂಗಳ ಮೊದಲೆರಡು ವಾರಗಳಲ್ಲಿ ಬಿತ್ತನೆ ಮಾಡಿದ್ದ ರಾಗಿಯ ಹೊಲದಲ್ಲಿ ಈಗ ನೀರು ನಿಂತಿದೆ. ಇನ್ನೂ ಕೆಲವು ಹೊಲಗಳಲ್ಲಿ ರಾಗಿಯು ಹುಟ್ಟಿಲ್ಲದೆ ಮಣ್ಣಿನಲ್ಲಿ ಮಣ್ಣಾಗಿ ಹೋಗಿದೆ. ಇನ್ನು ಜಮೀನನ್ನು ಹದಗೊಳಿಸಿಕೊಂಡಿದ್ದ ರೈತರಿಗೆ ಹೊಲದಲ್ಲಿ ಕಾಲಿಡಲು ಸಾಧ್ಯವಾಗದಷ್ಟು ಮಟ್ಟಿಗೆ ತೇವಾಂಶ ಇದೆ.
ಕೋವಿಡ್‍ನಿಂದ ತೋಟ-ಹೊಲ, ಗದ್ದೆಗಳು ಸ್ವಚ್ಛವಾಗಿವೆ : ಸರ್ ಎಂ. ವಿಶ್ವೇಶ್ವರಯ್ಯನವರು ಹೇಳಿರುವ `ಕುಳಿತು ತುಕ್ಕು ಹಿಡಿಯುವುದಕ್ಕಿಂತ, ದುಡಿದು ಸವೆಯುವುದೇ ಲೇಸು’ ಎಂಬ ಮಾತಿಗೆ ಅನುಸಾರವಾಗಿ ನಗರಗಳಿಂದ ಹಿಂದಿರುಗಿರುವ ಯುವಕರಿಂದ ಹಿಡಿದು, ವಯಸ್ಕರು ಬೆಳಗ್ಗೆ ಎದ್ದು ಹೊಲದ ಕಡೆಗೆ ಹೋಗುತ್ತಿದ್ದಾರೆ. ಹೊಲ, ಗದ್ದೆ, ತೋಟ, ತುಡಿಕೆಗಳಲ್ಲಿ ತಮ್ಮ ಅಪ್ಪನ ಜೊತೆಗೆ ಕೈ ಜೋಡಿಸುತ್ತಿದ್ದಾರೆ. ಸ್ವಚ್ಛಗೊಳಿಸಿ ತೋಟವನ್ನು ಹದ ಮಾಡುವುದಲ್ಲದೆ, ಗೊಬ್ಬರ, ಮಣ್ಣನ್ನು ತಮ್ಮ ತೋಟ ತುಡಿಕೆಗಳಿಗೆ ಹೊಡೆಸಿ ಮಣ್ಣನ್ನು ಫಲವತ್ತುಗೊಳಿಸುತ್ತಿದ್ದಾರೆ. ಇನ್ನು ತಮ್ಮ ಇಚ್ಛೆಯಂತೆ ಸ್ವೇಚ್ಛೆಯಾಗಿ ಬೆಳೆದಿದ್ದ ಕಳೆಗಿಡಗಳನ್ನು ಮತ್ತು ತೋಟದ ಬೇಲಿಗಳನ್ನು ಜೋಡಿಸಿದಂತೆ ಅಚ್ಚುಕಟ್ಟಾಗಿ ಕತ್ತರಿಸಿ ಒಪ್ಪ ಮಾಡಿದ್ದಾರೆ.
ಕೂಲಿಗೆ ಮತ್ತು ಮುಯ್ಯಾಳಾಗಿಯೂ ಕರೆಯುತ್ತಿಲ್ಲ :
ಕೊರೊನಾ ಮಹಾಮಾರಿಯಿಂದ ರಾಜ್ಯದಾದ್ಯಂತ ಖಾಸಗಿ ಕೆಲಸಗಳಲ್ಲಿ ತೊಡಗಿದ್ದ ಸುಮಾರು 10 ರಿಂದ 15 ಸಾವಿರ ಯುವಕರು ತಾಲ್ಲೂಕಿಗೆ ಹಿಂತಿರುಗಿದ್ದಾರೆ. ಇವರೆಲ್ಲರೂ ನಂಬಿ ಕೆಟ್ಟವರಿಲ್ಲಲ್ಲವೋ ಮಣ್ಣನ್ನು ಎಂಬ ಡಾ. ರಾಜ್ ರವರ ಒಡಹುಟ್ಟಿದವರು ಚಿತ್ರದ ಗೀತೆಯಂತೆ ಕೃಷಿ ಕಾರ್ಯಗಳಲ್ಲಿ ತಮ್ಮನ್ನು ತಾವು ತನ್ಮಯರಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಯಾರನ್ನೂ ಕೂಲಿಗೆ ಕರೆಯುತ್ತಿಲ್ಲ. ಇನ್ನು ಉಳಿದಂತೆ ತಮ್ಮ ಜಮೀನಿನ ಕೆಲಸಕ್ಕೆ ನೀನು ಬಾ, ನಿಮ್ಮ ಜಮೀನಿನ ಕೆಲಸಕ್ಕೆ ನಾನು ಬರುವೆ ಎಂಬ ಮಾತೇ ಇಲ್ಲವಾಗಿದೆ. ಆದ್ದರಿಂದ ಇಬ್ಬರು ಮೂವರಿರುವ ಚಿಕ್ಕ ಜಮೀನಿನವರು ಕೂಲಿ ದೊರೆಯದಿರುವುದರಿಂದ, ಮುಯ್ಯಾಳನ್ನಾಗಿಯಾದರು ಯಾರೂ ಕರೆಯದೆ ಇರುವುದರಿಂದ ತಮ್ಮ ಹೊಲದ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ.
ಇದಲ್ಲದೆ ಶಾಲೆಗೆಂದು ಓಡುತ್ತಿದ್ದ ಮಕ್ಕಳು ಸಹ ಕೃಷಿಯಲ್ಲಿ ಆಸಕ್ತಿಯನ್ನು ತೋರಿಸುತ್ತಿದ್ದು, ನಾನು ಎಲ್ಲವನ್ನು ಮಾಡುತ್ತೇನೆ ಎಂದು ತಂದೆ, ತಾಯಿಯರೊಟ್ಟಿಗೆ ಹೊಲದತ್ತ ಹೆಜ್ಜೆ ಹಾಕುತ್ತಿದ್ದಾರೆ. ರಾಗಿಯನ್ನು ಹೇಗೆ ಉತ್ತಿ, ಬಿತ್ತಿ ಬೆಳೆ ತೆಗೆಯಬೇಕೆನ್ನುವುದನ್ನು ಕಲಿಯುತ್ತಿದ್ದಾರೆ. ಕೃಷಿಯ ಜ್ಞಾನವನ್ನು ಅಲ್ಪಸ್ವಲ್ಪ ತಿಳಿದುಕೊಳ್ಳುವ ಪ್ರಯತ್ನದಲ್ಲಿ ಮಕ್ಕಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
