ದಾವಣಗೆರೆ:
ಘಟ್ಟ ಪ್ರದೇಶವಾಗಿರುವ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರೆ ಮೈದುಂಬಿ ಹರಿಯುತ್ತಿದ್ದು, ಜಿಲ್ಲೆಯ ಅನೇಕ ಗ್ರಾಮಗಳ ಸಂಪರ್ಕ ರಸ್ತೆ, ಸೇತುವೆಗಳು ಜಲಾವೃತಗೊಂಡಿವೆ.
ಮಲೆನಾಡಿನಲ್ಲಿ ಸಮೃದ್ಧ ಮಳೆಯಾಗುತ್ತಿದ್ದು ಅತ್ತ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಡ್ಯಾಂಗೆ ಸಾಕಷ್ಟು ನೀರು ಒಳ ಹರಿವು ಬರುತ್ತಿದ್ದು, ಇತ್ತ ಶಿವಮೊಗ್ಗ ಜಿಲ್ಲೆಯಲ್ಲೂ ಉತ್ತಮ ಮಳೆಯಿಂದಾಗಿ ತುಂಗಾ ಡ್ಯಾಂ ತುಂಬಿದ್ದರಿಂದಾಗಿ ತುಂಗಾ ನದಿಗೆ 50 ಸಾವಿರ ಕ್ಯೂಸೆಕ್ಸ್‍ಗೂ ಅಧಿಕ ನೀರನ್ನು ಹರಿಯ ಬಿಡಲಾಗಿದೆ.
ಈಗಾಗಲೇ ತುಂಗಭದ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಿಲ್ಲೆಯನ್ನು ಹಾದು ಹೋಗಿರುವ ಹೊನ್ನಾಳಿ, ಹರಿಹರ ತಾಲೂಕಿನ ನದಿ ಪಾತ್ರದ ಗ್ರಾಮಗಳ ಗ್ರಾಮಸ್ಥರು, ಸಂಪರ್ಕ ಸೇತುವೆಗಳು, ಸಂಪರ್ಕ ರಸ್ತೆಗಳಲ್ಲಿ ಸಾಗುವ ಮಾರ್ಗಗಳೂ ಜಲಾವೃತವಾಗಿದೆ. ಕೆಲವು ಗ್ರಾಮಗಳಿಗೆ ಸಂಪರ್ಕವೇ ಇಲ್ಲದಂತಾಗಿದೆ.
ನೀರು ಇಲ್ಲವೆಂದು ಹೇಳಲಾಗುತ್ತಿದ್ದ ಭದ್ರಾ ಡ್ಯಾಂಗೆ 35,875 ಕ್ಯೂಸೆಕ್ಸ್‍ನಷ್ಟು ಒಳ ಹರಿವು, 2184 ಕ್ಯೂಸೆಕ್ಸ್‍ನಷ್ಟು ಹೊರ ಹರಿವು ಇತ್ತು. 186 ಅಡಿಗಳಷ್ಟು ಗರಿಷ್ಟ ನೀರು ಸಂಗ್ರಹಣ ಸಾಮರ್ಥ್ಯದ ಡ್ಯಾಂನಲ್ಲಿ ಬುಧವಾರ 159.5 ಅಡಿ ನೀರು ಸಂಗ್ರಹವಾದ ಬಗ್ಗೆ ಮಾಹಿತಿ ಇದೆ. ಕಳೆದ ವರ್ಷ ಇದೇ ಅವದಿಯಲ್ಲಿ 149.11 ಅಡಿ ನೀರು ಇತ್ತು. ಆದಷ್ಟು ಬೇಗನೆ ಡ್ಯಾಂ ತುಂಬಲಿ ಎಂಬ ಪ್ರಾರ್ಥನೆ ಅಚ್ಚುಕಟ್ಟು ರೈತರದ್ದಾಗಿದೆ.
ತುಂಗಭದ್ರಾ ನದಿ ಹರಿವು ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದ್ದು, ಸಹಜವಾಗಿಯೇ ಜಿಲ್ಲೆಯ ಹೊನ್ನಾಳಿ, ಹರಿಹರ ತಾಲೂಕಿನ ನದಿ ಪಾತ್ರದ ಗ್ರಾಮಸ್ಥರು ಮತ್ತೆ ಮುಳುಗಡೆಯ ಭೀತಿಗೆ ಒಳಗಾಗಿದ್ದಾರೆ. ತುಂಗಭದ್ರಾ ನದಿಗೆ ಭದ್ರಾ ಡ್ಯಾಂನಿಂದ ಹೊರ ಹರಿವು ಹೆಚ್ಚುತ್ತಿದ್ದು, ಹೊನ್ನಾಳಿ ಪಟ್ಟಣಯ ಹರಿಶ್ಚಂದ್ರ ಘಾಟ್, ಹರಿಹರ ತಾಲೂಕಿನ ಉಕ್ಕಡಗಾತ್ರಿ, ಗೋವಿನಹಾಳ್, ನಂದಿಗುಡಿ, ಪಾಳ್ಯ, ಎಳೆಹೊಳೆ, ಧೂಳೆಹೊಳೆ, ಇಂಗಳಗೊಂದಿ ಸೇರಿದಂತೆ ನದಿ ಪಾತ್ರದ 13 ಗ್ರಾಮಗಳು ನೆರೆಗೆ ತುತ್ತಾಗುವ ಭೀತಿಯಲ್ಲಿವೆ.
ಈಗಾಗಲೇ ಉಕ್ಕಡಗಾತ್ರಿ ಸುಕ್ಷೇತ್ರದ ಒಂದು ಸಂಪರ್ಕ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಹೊನ್ನಾಳಿ, ಹರಿಹರ ತಾಲೂಕಿನ ನದಿ ಪಾತ್ರದ ಗ್ರಾಮಸ್ಥರು ನದಿ ತಟಗಳಿಗೆ ಹೋಗದಂತೆ, ಜಾನುವಾರುಗಳನ್ನು ನದಿ ಪಾತ್ರದಲ್ಲಿ ಮೇಯಿಸದಂತೆ ಎಚ್ಚರಿಕೆ ನೀಡಲಾಗಿದೆ.ಅಲ್ಲದೇ, ನದಿಯಲ್ಲಿ ಯಾವುದೇ ಕ್ಷಣದಲ್ಲಾದರೂ ನೀರಿನ ಹರಿವು ಹೆಚ್ಚುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತುಂಗ ಭದ್ರಾ ನದಿ ಪಾತ್ರದಲ್ಲಿ ಕೃಷಿ ಚಟುವಟಿಕೆಯನ್ನೂ ಕೈಗೊಳ್ಳದಂತೆ ಜಿಲ್ಲಾಡಳಿತ, ಆಯಾ ತಾಲೂಕು ಆಡಳಿತಗಳು ಎಚ್ಚರಿಕೆ ನೀಡಿವೆ.
ಮುಂದುವರೆದ ಮಳೆ ಆರ್ಭಟ
ಆಶ್ಲೇಷ ಮಳೆಯ ಆರ್ಭಟ ಗುರುವಾರವೂ ಮುಂದುವರಿದಿದ್ದು, ನಸುಕಿನಲ್ಲಿ ಮತ್ತೆ ಜೋರು ಮಳೆಯಾಗಿದೆ.ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ಜಿಲ್ಲಾದ್ಯಂತ ಕೃಷಿ ಚಟುವಟಕೆಗಳು ಬಿರುಸುಗೊಂಡಿವೆ. ಮತ್ತೊಂದು ಕಡೆ ನಗರ, ಪಟ್ಟಣ ಪ್ರದೇಶದಲ್ಲೂ ಮಳೆಯಿಂದಾಗಿ ವ್ಯಾಪಾರ, ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ.
ಶ್ರಾವಣ ಶುಕ್ರವಾರದ ಪೂಜಾ ಸಾಮಗ್ರಿ, ಹಣ್ಣು ಹಂಪಲು, ಹೂವು, ಬಾಳೆ ಕಂಬ, ಮಾವಿನ ತೊಪ್ಪಲು ಖರೀದಿಗೆ ಬರಲು ಜನರು ಮಳೆ ಬಿಡುವು ನೀಡುವುದನ್ನೇ ಕಾಯುತ್ತಿದ್ದರು. ಮಧ್ಯಾಹ್ನದಿಂದ ಮಳೆಯು ಒಂದಿಷ್ಟು ಬಿಡುವು ನೀಡಿದ್ದರೂ ದಟ್ಟ ಮೋಡಗಳೇ ಕಂಡು ಬರುತ್ತಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ