ರಾಗಿ ಬೆಳೆಗಾರರ ಸಂಭ್ರಮಕ್ಕೆ ತಣ್ಣೀರೆರೆಚಿದ ಮಳೆ..!

ಹುಳಿಯಾರು:
     ವಾಯುಭಾರ ಕುಸಿತದಿಂದ ತಾಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆ ರಾಗಿ ಬೆಳೆಗಾರರಿಗೆ ಸಂಭ್ರಮಕ್ಕೆ ಅಡ್ಡಿಯುಂಟು ಮಾಡಿದೆ. ಸಮಯಕ್ಕೆ ತಕ್ಕಂತೆ ಹದವಾಗಿ ಉತ್ತಮ ಮಳೆಯಾಗಿರುವುದರಿಂದ ತಾಲ್ಲೂಕಿನಾದ್ಯಂತ ನಿರೀಕ್ಷೆಗೂ ಮೀರಿದ ರಾಗಿ ಬೆಳೆ ಬಂದಿದ್ದು ಇನ್ನೇನು ಕೈ ಸೇರುವ ಸಂದರ್ಭದಲ್ಲಿ ಮಳೆ ಬರುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ. 
 
    ಏಳೆಂಟು ವರ್ಷಗಳಿಂದ ಮಳೆಯಾಗದೆ ತಾಲ್ಲೂಕು ನಿರಂತರ ಬರಗಾಲಕ್ಕೆ ಗುರಿಯಾಗಿತ್ತು. ಈ ವರ್ಷವೂ ಸಹ ಪೂರ್ವ ಮುಂಗಾರು ಕೈ ಕೊಟ್ಟು ಬಿತ್ತಿದ್ದ ಬೀಜ ಭೂಮಿಯಿಂದ ಮೇಲೇರಲೇ ಇಲ್ಲ. ಈ ವರ್ಷವೂ ಬರ ಕಟ್ಟಿಟ್ಟ ಬುತ್ತಿ ಎನ್ನುವಷ್ಟರಲ್ಲಿ ಉತ್ತಮ ಮಳೆ ಬಂದು ರೈತರ ಮೊಗದಲ್ಲಿ ಸಂತಸ ಮೂಡಿಸಿತ್ತು. ರಾಗಿ, ಸಾವೆ, ನವಣೆ ಈ ಬಾರಿ ರೈತರಿಗೆ ಬಂಪರ್ ಎನ್ನುವಂತೆ ಬೆಳೆಬಂದಿದೆ.
 
    ಹಾಗಾಗಿಯೇ ರಾಗಿ ಬೆಳೆಗಾರರು ಈ ವರ್ಷ ಸಂಭ್ರಮ ಮತ್ತು ಸಡಗರದಿಂದ ರಾಗಿ ಕಟಾವು ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ಮನಗಂಡ ಕೆಲ ಹಣವಂತರು ಯಂತ್ರದ ಮೊರೆ ಹೋಗಿ ಕಟಾವು ಮುಗಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಸ್ವಯಂ ಕಟಾವು ಮಾಡುತ್ತಿರುವ ರೈತರು ಈ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.  
    ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ ತಾಲ್ಲೂಕಿನಲ್ಲಿ ಮೂರ್ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು ಶುಕ್ರವಾರ ಬೆಳಿಗ್ಗೆಯೆ ತುಂತುರು ಮಳೆ ಶುರುವಾಗಿ ರೈತರಲ್ಲಿ ಆಂತಕ ಸೃಷ್ಟಿಸಿತ್ತು. ಈ ಋತುಮಾನದಲ್ಲಿ ಹಿಂದೆಂದೂ ಮಳೆ ಬಂದಿದ್ದು ಕಂಡರಿಯದ ರೈತರು ಬಂಡ ದೈರ್ಯದಿಂದ ರಾಗಿ ಕಟಾವು ಮಾಡಿ ಹೊಲದಲ್ಲೇ ಬಿಟ್ಟಿದ್ದಾರೆ.
      ಆದರೆ ಶನಿವಾರ ರಾತ್ರಿ ಸರಿಸುಮಾರು ಎರಡೂವರೆ ಗಂಟೆ ತಾಲೂಕಿನಲ್ಲಿ ಜೋರು ಮಳೆ ಸುರಿದಿದ್ದು ಕಟಾವಿಗೆ ಬಂದಿರುವ, ಕಟಾವು ಮಾಡಿರುವ, ಕಣದಲ್ಲಿ ಸುರಿದಿರುವ ರಾಗಿ ಸಂಪೂರ್ಣ ನೆನೆದಿದೆ. ಈ ರಾಗಿ ಒಣಗದ ವಿನಃ ಕಣ ಮಾಡಲು ಬರೋದಿಲ್ಲ. ಆದರೆ ಒಣಗಲು ಭಾನುವರವೂ ಸಹ ಮೋಡ ಕವಿದ ವಾತವರಣವಿದ್ದು ಬಿಸಿಲು ಬರಲೇ ಇಲ್ಲ. ಇದು ರೈತರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ. 
      ಹವಮಾನ ಇಲಾಖೆಯ ಪ್ರಕಾರ ಇನ್ನೂ ಮೂರ್ನಲ್ಕು ದಿನ ಮಳೆ ಬರುವ ಸಾಧ್ಯತೆಯಿದ್ದು ಈ ಮಳೆ ಬಂದರಂತೂ ಕಟಾವಿಗೆ ಬಂದಿರುವ ಅರ್ಧಕರ್ಧ ರಾಗಿ ನಷ್ಟವಾಗುವುದು ನಿಶ್ಚಿತ. ದೇವರ ದಯೆಯಿಂದ 15 ದಿನಗಳ ಕಾಲೆ ಒಳ್ಳೆ ಬಿಸಿಲು ಬಂದು ಮಳೆಬಾರದಿದ್ದರೆ ನಾವು ಕಷ್ಟಪಟ್ಟಿದಕ್ಕೂ ಸಾರ್ಥಕವಾಗುತ್ತದೆ ಎನ್ನುತ್ತಾರೆ ರೈತ ನಿಂಗಪ್ಪ.
      ಒಟ್ಟಾರೆ ವಾಯುಭಾರ ಕುಸಿತದಿಂದ ಬರುತ್ತಿರುವ ಮಳೆ ತಾಲೂಕಿನಲ್ಲಿ ಕಟಾವು ಕಾರ್ಯಕ್ಕೆ ಅಡ್ಡಿಯುಂಟು ಮಾಡಿದೆ. ರಾಗಿ ತೆನೆ ನೆನೆದಿರುವುದರಿಂದ ಯಂತ್ರದಿಂದಲೂ ಕಟಾವು ಮಾಡಲಾಗುತ್ತಿಲ್ಲ.  ಕಟಾವು ಮಾಡಿ ಹೊಲ, ಕಣದಲ್ಲಿ ಬಿಟ್ಟಿದ್ದ ರಾಗಿ ಹುಲ್ಲನ್ನು ಒಣಗಿಸುವುದು ರೈತರಿಗೆ ಹೊಸ ಸವಾಲಾಗಿದೆ. ಇನ್ನೆರಡು ದಿನಗಳಲ್ಲಿ ಈ ಮಳೆರಾಯ ರೈತನ ಪಾಲಿಗೆ ವರವಾಗುವುದೋ, ಶಪವಾಗುವುದೋ ಕಾದು ನೊಡಬೇಕಿದೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ