ತುಮಕೂರು
ತುಮಕೂರು ಜಿಲ್ಲೆಯಲ್ಲಿ ಈ ವರ್ಷ ಈವರೆಗೆ ಸಕಾಲಕ್ಕೆ ನಿರೀಕ್ಷಿತ ಮಳೆ ಬರದಿರುವುದರಿಂದ, ಕೃಷಿ ಚಟುವಟಿಕೆಗಳಲ್ಲಿ ಹಿನ್ನಡೆ ಉಂಟಾಗುವಂತಾಗಿದೆ ಎಂಬ ಕಳವಳದ ಸಂಗತಿ ವರದಿಯಾಗಿದೆ.ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಪ್ರಮಾಣವು 697 ಮಿಲಿ ಮೀಟರ್ ಆಗಿದೆ. ಆದರೆ ಈ ವರ್ಷ ಜುಲೈ ಅಂತ್ಯದವರೆಗೆ ಕೇವಲ 236 ಮಿಲಿ ಮೀಟರ್‍ನಷ್ಟು ಮಾತ್ರ ಮಳೆ ಬಂದಿದೆ. ವಾಡಿಕೆ ಪ್ರಕಾರ 264 ಮಿಲಿಮೀಟರ್ ಮಳೆ ಬರಬೇಕಿತ್ತು.
ಆದರೆ ಈಗ ವಾಡಿಕೆ ಮಳೆಗಿಂತ ಶೇ.10 ರಷ್ಟು ಕಡಿಮೆ ಪ್ರಮಾಣದ ಮಳೆ ಆಗಿದೆ ಎಂದು ಕೃಷಿ ಇಲಾಖೆಯ ಅಂಕಿ ಅಂಶಗಳು ಹೇಳುತ್ತಿದ್ದು, ಈ ರೀತಿ ಮಳೆಯ ಅ`Áವ ಉಂಟಾಗಿರುವುದು ರೈತಾಪಿ ವಲಯವನ್ನು ಆತಂಕಕ್ಕೆ ದೂಡಿದೆ.2019-20 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 4,17,780 ಹೆಕ್ಟೇರ್‍ನಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯದ ಗುರಿಯನ್ನು ಹೊಂದಲಾಗಿತ್ತು. ಆದರೆ ಮಳೆಯ ಕೊರತೆಯಿಂದ ಬಿತ್ತನೆ ಕಾರ್ಯಕ್ಕೆ ಕೊಡಲಿಪೆಟ್ಟು ಬಿದ್ದಂತಾಗಿದೆ.
ಜಿಲ್ಲೆಯಲ್ಲಿ ಕೇವಲ 70,961 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಅಂದರೆ ಶೇ.16.99 ರಷ್ಟು ಪ್ರದೇಶದಲ್ಲಿ ಮಾತ್ರ ಈ ಬಾರಿ ಬಿತ್ತನೆಯಾಗಿದೆ ಎಂಬುದು ಕಳವಳ ಉಂಟುಮಾಡಿದೆ.ಪೂರ್ವ ಮುಂಗಾರಿನ ಬೆಳೆಗಳಾದ ಹೆಸರು, ಉದ್ದು, ಅಲಸಂದೆ, ಎಳ್ಳು – ಈ ಬೆಳೆಗಳ ಮೇಲೂ ಮಳೆಯ ಕೊರತೆಯು ಪರಿಣಾಮ ಬೀರಿದೆ. ಈ ಬೆಳೆಗಳ ಬಿತ್ತನೆಯ ನಿಗದಿತ ಗುರಿ 16,000 ಹೆಕ್ಟೇರ್ ಇದೆಯಾದರೂ, ಬಿತ್ತನೆಯಾಗಿರುವುದು ಕೇವಲ 7,475 ಹೆಕ್ಟೇರ್ (ಶೇ. 46.71) ಪ್ರದೇಶದಲ್ಲಿ ಮಾತ್ರ ಎಂಬುದೂ ಗಮನ ಸೆಳೆಯುತ್ತಿದೆ.
ಜಿಲ್ಲೆಯಲ್ಲಿ ಹೆಸರು ಮತ್ತು ಉದ್ದು ಬೆಳೆಗಳ ಕಟಾವು ಮುಗಿದಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದರಿಂದ ಈ ಬೆಳೆಗಳ ಇಳುವರಿಯು ಕಡಿಮೆ ಆಗುವಂತಾಗಿದೆ. ಜಿಲ್ಲೆಯಲ್ಲಿ ಚದುರಿದಂತೆ ಮಳೆಯಾಗುತ್ತಿದೆ. ಅದರ ನಡುವೆಯೇ ಶೇಂಗಾ ಮತ್ತು ತೊಗರಿ ಬೆಳೆಗಳ ಬಿತ್ತನೆ ಕಾರ್ಯವು ಮುಂದುವರೆದಿದೆ. ಈಗಾಗಲೇ ಅಲ್ಲಲ್ಲಿ ಬಿತ್ತನೆಯಾಗಿರುವ ಶೇಂಗಾ ಮತ್ತು ತೊಗರಿ ಬೆಳೆಯು ಬೆಳವಣಿಗೆಯ ಹಂತದಲ್ಲಿದೆ. ರಾಗಿ ಬಿತ್ತನೆ ಕಾರ್ಯ ಮುಂದುವರೆದಿದೆ ಎಂದು ಕೃಷಿ ಇಲಾಖೆ ಹೇಳುತ್ತದೆ.
ಈಗಿನ ಮಳೆಗೆ ಅನುಗುಣವಾಗಿ ಜಿಲ್ಲೆಯಲ್ಲಿ ಪರ್ಯಾಯ ಬೆಳೆಗಳ ಕಾರ್ಯಕ್ರಮವನ್ನು ರೂಪಿಸುತ್ತಿದ್ದು, ಅಗತ್ಯ ಕೃಷಿ ಪರಿಕರಗಳ ದಾಸ್ತಾನು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಜಿಲ್ಲೆಯಲ್ಲಿ ಬೀಜ ಮತ್ತು ರಸಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಇಲಾಖೆಯ ಮಾಹಿತಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ