ವೈವಾಹಿಕ ಕಲಹಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ವಿಳಂಬವಾದಷ್ಟೂ ಅದರ ದುಷ್ಪರಿಣಾಮ ಮಕ್ಕಳ ಮೇಲೆ ಉಂಟಾಗುತ್ತದೆ. ಇಂತಹ ಪ್ರಕರಣಗಳಿಗೆ ಶೀಘ್ರ ಇತ್ಯರ್ಥಗೊಳಿಸಿ ಎಂದು ರಾಷ್ಟ್ರದ ಸರ್ವೋಚ್ಛ ನ್ಯಾಯಾಲಯ ಫೆಬ್ರವರಿ 18 ರಂದು ಎಲ್ಲ ಅಧೀನ ನ್ಯಾಯಾಲಯಗಳಿಗೆ ಸೂಚನೆ ನೀಡಿದೆ.
ಮಕ್ಕಳನ್ನು ಸುಪರ್ದಿಗೆ ಪಡೆಯುವ ಪೋಷಕರ ಕಾನೂನು ಹೋರಾಟ ಹೆಚ್ಚಿದಂತೆಲ್ಲಾ ಯಾವುದೇ ತಪ್ಪು ಮಾಡದ ಮಕ್ಕಳು ಬೆಲೆ ತೆರುತ್ತಿದ್ದಾರೆ ಎಂಬುದು ನ್ಯಾಯಾಲಯದ ಕಳಕಳಿ. ಬಹಳ ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಕೌಟುಂಬಿಕ ವ್ಯಾಜ್ಯವೊಂದನ್ನು ಇತ್ಯರ್ಥಪಡಿಸುವಾಗ ಸುಪ್ರೀಂಕೋರ್ಟ್ ನೀಡಿರುವ ಹೇಳಿಕೆ ಇದು.
ಪೋಷಕರ ಕಾನೂನು ಹೋರಾಟದಲ್ಲಿ ಮಕ್ಕಳು ಪ್ರೀತಿ ವಾತ್ಸಲ್ಯದಿಂದ ವಂಚಿತವಾಗುತ್ತಿರುವುದು, ಕಾನೂನು ಕಟ್ಟಳೆಗಳ ಸುಳಿಗೆ ಸಿಲುಕಿ ಮಾನವೀಯತೆ ನಾಶವಾಗುತ್ತಿರುವುದು, ಒಟ್ಟಾರೆ ಕೌಟುಂಬಿಕ ವ್ಯವಸ್ಥೆಯ ಮೇಲೆ ಇದರ ಪರಿಣಾಮ ಉಂಟಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೆ. ಆದರೂ ಮನುಷ್ಯನಲ್ಲಿನ ಸಹಜ ದ್ವೇಷಗುಣ, ಈಗೋ, ನಾನೇಕೆ ಸೋಲಬೇಕೆಂಬ ಮನೋಭಾವ ವ್ಯಕ್ತಿಗಳ ನಡುವೆ ಮೂಡಿ ವರ್ಷಾನುಗಟ್ಟಲೆ ಕೇಸುಗಳನ್ನು ಎಳೆದುಕೊಂಡು ಹೋಗುವವರೆ ಹೆಚ್ಚು. ಕೌಟುಂಬಿಕ ಪ್ರಕರಣಗಳು ಇತರೆ ಸಿವಿಲ್ ವ್ಯಾಜ್ಯಗಳಂತಾಗಬಾರದು ಎಂಬ ಕಳಕಳಿ ಬೇರೆಯವರಿಗಷ್ಟೆ ಇರಬಹುದು. ಆದರೆ ಆ ಪ್ರಕರಣ ಎದುರಿಸುತ್ತಿರುವವರಲ್ಲಿ ಇಂತಹ ಮನೋಭಾವ ಬರಲಿಕ್ಕೆ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಈಗಿನ ಕಾಲಮಾನದಲ್ಲಿದೆ.
ಬದುಕಿನ ಕಾಲಘಟ್ಟ ಬದಲಾದಂತೆಲ್ಲ ವೈವಾಹಿಕ ಜೀವನವೂ ತಲ್ಲಣಗೊಳ್ಳುತ್ತಿದೆ. ಬೆಂಗಳೂರಿನಂತಹ ಕಾರ್ಪೋರೇಟ್ ವ್ಯವಸ್ಥೆಯ ನಗರಗಳಲ್ಲಿ ಬದುಕುತ್ತಿರುವ ಜನತೆ ಯಾಂತ್ರಿಕ ಜೀವನದಲ್ಲಿ ತೊಳಲಾಡುತ್ತಿದ್ದಾರೆ. ಉದ್ಯೋಗ ಮತ್ತು ಬದುಕಿನ ಬಂಡಿಯೊಳಗೆ ಕೌಟುಂಬಿಕ ವ್ಯವಸ್ಥೆಯ ಪರಿಕಲ್ಪನೆಯೇ ಕ್ಷೀಣಿಸುತ್ತಿದೆ. ಕೌಟುಂಬಿಕ ವ್ಯವಸ್ಥೆ ಮಾತ್ರವೇ ಅಲ್ಲ, ದಂಪತಿಗಳ ಸಾಮರಸ್ಯವೂ ಹಾಳಾಗುತ್ತಿದೆ. ಇದಕ್ಕೆ ಕಾರಣಗಳು ಹಲವು.
ಆದರೆ ವಿವಾಹವಾಗಿ ಕೆಲವೇ ತಿಂಗಳ ಅಂತರದಲ್ಲಿ ವಿಚ್ಛೇದನಕ್ಕೆ ದಾಪುಗಾಲು ಹಾಕುತ್ತಿರುವ ಪ್ರಕರಣಗಳನ್ನು ನೋಡಿದರೆ ಆಶ್ಚರ್ಯ ಉಂಟಾಗುತ್ತದೆ. ಈ ಕಾರಣಕ್ಕಾಗಿಯೇ ಕೌಟುಂಬಿಕ ನ್ಯಾಯಾಲಯಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇವೆ.
ರಾಜಧಾನಿ ಮಾತ್ರವಲ್ಲ, ಜಿಲ್ಲಾ ಕೇಂದ್ರಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಕಳೆದ 10 ವರ್ಷಗಳ ಸಂದರ್ಭದಲ್ಲಿ ತುಮಕೂರಿನಲ್ಲಿ ಪ್ರಥಮ ಬಾರಿಗೆ ಕೌಟುಂಬಿಕ ನ್ಯಾಯಾಲಯ ಆರಂಭವಾಯಿತು. ಈ ಹತ್ತು ವರ್ಷಗಳ ಅವಧಿಯಲ್ಲಿ ಈಗ ಮತ್ತೊಂದು ಕೌಟುಂಬಿಕ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆ. ಆದರೂ ಪ್ರಕರಣಗಳ ಒತ್ತಡ ಹೆಚ್ಚಾಗುತ್ತಲೇ ಇದೆ. ತುಮಕೂರು ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳನ್ನು ಗಮನಿಸಿದರೆ ಕೌಟುಂಬಿಕ ವ್ಯಾಜ್ಯಗಳು ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿರುವುದು ಗಾಬರಿ ಮೂಡಿಸುವ ಅಂಶವಾಗಿದೆ.
ವಿವಾಹವಾಗಿ ಕೆಲವೇ ವರ್ಷಗಳಲ್ಲಿ ವೈಮನಷ್ಯ ಮೂಡುವುದು, ಸಣ್ಣಪುಟ್ಟ ವಿಷಯಗಳಿಗೂ ಗಲಾಟೆ ಮಾಡಿಕೊಳ್ಳುವುದು, ನಿರ್ಲಕ್ಷ್ಯ ಮಾಡುವುದು, ಪತಿಪತ್ನಿಯರ ನಡುವೆ ವಿರಸ, ತವರಿಗೆ ಹೋಗುವುದು, ಹೋಗುವಂತೆ ಮಾಡುವುದು, ಜೀವನ ನಡೆಸಲು ಸಾಧ್ಯವಾಗದೆ ಪತ್ನಿಯನ್ನೇ ತ್ಯಜಿಸಿ ಓಡಿ ಹೋಗುವುದು… ಇತ್ಯಾದಿ… ಇತ್ಯಾದಿ.
ಎಲ್ಲ ಹಂತಗಳನ್ನೂ ಮೀರಿಯೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿಕೊಳ್ಳುತ್ತಾರೆ. ಪತಿ ಅಥವಾ ಪತ್ನಿ ಯಾರೇ ಆಗಲಿ ನ್ಯಾಯಾಲಯಕ್ಕೆ ದಾವೆ ಹೂಡಿದಾಗ ಆರಂಭಿಕ ಹಂತದಲ್ಲಿ ಸಮಾಲೋಚನಾ ಪ್ರಕ್ರಿಯೆಗಳು ನಡೆಯುತ್ತವೆ. ಈ ಪ್ರಕ್ರಿಯೆ ವಿಫಲವಾದಾಗ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಿ ಮುಗಿಯುವ ವೇಳೆಗೆ ವರ್ಷಗಳು ಹಿಡಿಯುತ್ತವೆ. ಅಧೀನ ವಿಚಾರಣಾ ನ್ಯಾಯಾಲಯಗಳಿಂದ ಹೈಕೋರ್ಟ್ ಹಂತದವರೆಗೂ ಕೆಲವರು ಪ್ರಕರಣಗಳನ್ನು ಕೊಂಡೊಯ್ಯುತ್ತಾರೆ.
ಕೇಸು ತನ್ನ ಪರ ಆಗಲಿ ಎಂಬ ಮನೋಭಿಲಾಷೆ ಇರುತ್ತದೆಯೇ ಹೊರತು ಮಕ್ಕಳ ಚಿಂತೆ ಅವರ ಗಮನಕ್ಕೆ ಬರುವುದೇ ಇಲ್ಲ. ಎಷ್ಟೋ ಪ್ರಕರಣಗಳಲ್ಲಿ ಮಕ್ಕಳನ್ನು ಸಾಕಿ ಸಲಹುವ ಹೊಣೆಗಾರಿಕೆಯೂ ಮಹಿಳೆಯ ಮೇಲೆ ಬೀಳುವುದುಂಟು ಅಥವಾ ಕೆಲವು ಪ್ರಕರಣಗಳಲ್ಲಿ ಇದರ ತದ್ವಿರುದ್ಧ ಇರಲಿಕ್ಕೂ ಸಾಕು. ಆದರೆ ಇದರಿಂದ ವ್ಯತಿರಿಕ್ತ ಪರಿಣಾಮಕ್ಕೆ ಒಳಗಾಗುವವರು ಮಕ್ಕಳು ಎಂಬುದನ್ನು ಗಮನಿಸುವುದೇ ಇಲ್ಲ. ಇದು ಸದ್ಯದ ದುರಂತ.
ಕುಟುಂಬಗಳಲ್ಲಿ ನಡೆಯುವ ಇಂತಹ ಅದ್ವಾನಗಳಿಂದಾಗಿಯೇ ಮಕ್ಕಳು ಹಾದಿ ತಪ್ಪುವ ಸಂಭವ ಇರುತ್ತದೆ. ದುಷ್ಟ ಶಕ್ತಿಗಳ ಸಹವಾಸಕ್ಕೆ ಸಿಲುಕುವುದು, ಪ್ರೀತಿ ಸಿಗುವ ಕಡೆಗೆ ಮನಸ್ಸು ವಾಲುವುದು, ಸಿಕ್ಕಿದವರನ್ನೆಲ್ಲಾ ಪರಿಚಯ ಮಾಡಿಕೊಳ್ಳುವುದು… ಹೀಗಾಗಿ ಮಕ್ಕಳ ಮನೋ ದೌರ್ಬಲ್ಯ ಅಡ್ಡದಾರಿ ಹಿಡಿಯಲು ಪ್ರೇರೇಪಿಸುತ್ತದೆ. ಅದೆಷ್ಟೋ ಮಕ್ಕಳು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಲು ಆ ಕುಟುಂಬದ ಹಿನ್ನೆಲೆಯೂ ಕಾರಣ ಎಂಬ ಮನೋ ವಿಶ್ಲೇಷಕರ ಹೇಳಿಕೆಗಳಲ್ಲಿ ಸತ್ಯಾಂಶ ಇದೆ ಎಂಬುದನ್ನು ಅಲ್ಲಗಳೆಯಲಾಗದು.
ಈ ಕಾರಣಕ್ಕಾಗಿಯೇ ಸುಪ್ರೀಂಕೋರ್ಟ್ ನೀಡಿರುವ ಸೂಚನೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಗಂಡ ಹೆಂಡತಿ ಜಗಳ ವರ್ಷಾನುಗಟ್ಟಲೆ ಕೋರ್ಟ್‍ನಲ್ಲಿ ಮುಂದುವರೆದಿದ್ದರೆ ಸಮಸ್ಯೆಗಳಿಗೆ ಸಿಲುಕುವ ಮಕ್ಕಳ ಪರಿಸ್ಥಿತಿಯನ್ನು ನಿಭಾಯಿಸುವವರು ಯಾರು? ಅವರ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಚಿಂತಿಸುವವರು ಯಾರು? ಇತ್ಯಾದಿ ಪ್ರಶ್ನೆಗಳು ಎದುರಾಗುತ್ತವೆ. ಕೌಟುಂಬಿಕ ಸಮಸ್ಯೆಗಳು ಎಲ್ಲ ಕಡೆಯೂ ಇದ್ದದ್ದೆ. ಸಮಸ್ಯೆಗಳು ಸೌಹಾರ್ದಯುತವಾಗಿ ಇತ್ಯರ್ಥಗೊಳ್ಳಲು ಈಗಿನ ವ್ಯವಸ್ಥೆಯಲ್ಲಿ ಹಲವು ಮಾರ್ಗಗಳಿವೆ. ಎಲ್ಲ ಮಾರ್ಗಗಳು ಬಂದ್ ಆದಾಗ ಕಾನೂನಿನ ಚೌಕಟ್ಟು ಇದ್ದೇ ಇದೆ. ಆದರೆ ಇದೇ ಚೌಕಟ್ಟಿನಲ್ಲಿಯೇ ಇಡೀ ಬದುಕನ್ನು ಸವೆಸುವಂತಾದರೆ ಮನುಷ್ಯನ ಬದುಕಿಗೆ ಅರ್ಥವಾದರೂ ಏನು?
-ಸಾ.ಚಿ. ರಾಜಕುಮಾರ್,ಪ್ರಜಾಪ್ರಗತಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ