ರೈತ ಸಂಘದಿಂದ ಪ್ರತಿಭಟನೆ …!!!

ಬ್ಯಾಡಗಿ:

       ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸಲು ಮುಂದಾಗಿದ್ದ ರೈತ ಸಂಘದ ಐವರು ಮುಖಂಡರನ್ನು ಏಕಾಏಕಿ ಬಂಧಿಸಿದ ಪೊಲೀಸರ ಕ್ರಮವನ್ನು ಖಂಡಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಶನಿವಾರ ಪಟ್ಟಣದ ಹಳೇ ಪೊಲೀಸ್ ಠಾಣೆಯ ಬಳಿ ಸುಮಾರು 2 ತಾಸುಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರಲ್ಲದೇ ಟೈರ್‍ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

      ಆಣೂರು ಕೆರೆಗೆ ನೀರು ತುಂಬಿಸುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಹಾಗೂ ರೈತ ಸಂಘದ ಕಾರ್ಯಕರ್ತರ ನಡುವೆ ಕಳೆದೊಂದು ವಾರದಿಂದ ಆರೋಪ ಪ್ರತ್ಯಾರೋಪಗಳು ನಡೆದಿದ್ದವು, ರೂ.212 ಕೋಟಿ ಅನುದಾನ ಮಂಜೂರು ಮಾಡಿಸಿದ್ದಾಗಿ ಸುಳ್ಳು ಹೇಳಿದ್ದೇ ರೈತರು ಆಕ್ರೋಶಗೊಳ್ಳಲು ಕಾರಣವಾಗಿದ್ದು ಕೊನೆಗೆ ಜಮೀರ್ ಅಹ್ಮದ್ ಪಾಲ್ಗೊಳ್ಳುವ ಕಾರ್ಯಕ್ರಮಕ್ಕೆ ಕಪ್ಪುಪಟ್ಟಿ ಪ್ರದರ್ಶಿಸುವ ನಿರ್ಧಾರಕ್ಕೆ ರೈತ ಮುಖಂಡರು ಬಂದ ಹಿನ್ನೆಲೆಯಲ್ಲಿ ಪೊಲೀಸರು ರೈತ ಮುಖಂಡರನ್ನು ಬಂಧಿಸಲು ಕಾರಣವೆನ್ನಲಾಗುತ್ತಿದೆ.

      ನಾವು ಕೇಳಿದ್ದು ನೀರು, ಪರ್ಸೆಂಟೇಜ್ ಅಲ್ಲ:ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಕಳೆದ 40 ವರ್ಷಗಳಿಂದ ರಾಜ್ಯ ರೈತ ಸಂಘವು ಜಿಲ್ಲೆಯಲ್ಲಿ ಶಾಂತಿಯುತವಾಗಿ ವಿಷಯಾಧಾರಿತ ಹೋರಾಟ ನಡೆಸುತ್ತಾ ಬಂದಿದೆ, ಅಂತೆಯೇ ಆಣೂರು ಕೆರೆಯನ್ನು ತುಂಬಿಸುವ ಮೂಲಕ ಬ್ಯಾಡಗಿ, ಹಿರೇಕೆರೂರ, ಹಾವೇರಿ ತಾಲ್ಲೂಕುಗಳ 36 ಕೆರೆಗಳನ್ನು ತುಂಬಿಸುವ ಯೋಜನೆಅನುಷ್ಟಾನಕ್ಕೆ ಹೋರಾಟ ನಡೆಸುತ್ತಿರುವುದು ಇದೇನು ಮೊದಲಲ್ಲ, ಅಷ್ಟಕ್ಕೂ ಇಲ್ಲಿ ರೈತರು ಕೇಳುತ್ತಿರುವುದು ಜನ ಜಾನು ವಾರುಗಳಿಗೆ ಕುಡಿಯಲು ನೀರು ಸೇರಿದಂತೆ ಅಂತರ್ಜಲ ವೃದ್ಧಿಗೆ ಕೆರೆಗಳನ್ನು ಭರ್ತಿ ಮಾಡುವುದೇ ಹೊರತು ಸ್ವಾರ್ಥಕ್ಕಾಗಿ ಸರ್ಕಾರವನ್ನು ಲೂಟಿ ಮಾಡುತ್ತಿರುವ ನಿಮ್ಮ ಪರ್ಸೆಂಟೇಜ್ ಹಣಕ್ಕಲ್ಲಾ ಎಂದರು. 

        ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧವಲ್ಲ: ರೈತರಿಗೆ ನೀರು ಕೊಡಿಸಲಾಗದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಓರ್ವ ರಣಹೇಡಿ, ಸುಳ್ಳು ಹೇಳಿಕೊಂಡು ತಿರುಗಾಡು ವುದೇ ಆತನ ಜಾಯಮಾನ, ಇಂತಹ ಕೈಲಾಗದ ಸಚಿವರು ಜಿಲ್ಲೆಯಲ್ಲಿ ಇದ್ದರೆಷ್ಟು ಬಿಟ್ಟರೆಷ್ಟು, ಕೂಡಲೇ ಕಾಂಗ್ರೆಸ್ ಹೈಕಮಾಂಡ್ ಯಾವುದೇ ಕಾರಣಕ್ಕೂ ಜಮೀರ್ ಅಹ್ಮದನನ್ನು ಜಿಲ್ಲೆಯಲ್ಲಿ ಇಟ್ಟು ಕೊಳ್ಳದಿರುವುದೇ ಸೂಕ್ತಅಷ್ಟಕ್ಕೂ ನಮ್ಮ ಹೋರಾಟ ಕಾಂಗ್ರೆಸ್ ಸಮಾವೇಶದ ವಿರುದ್ಧವಲ್ಲ, ಸುಳ್ಳು ಹೇಳಿ ಸಮಾಜ ಸ್ವಾಸ್ಥ ಕೆಡಿಸುತ್ತಿರುವ ಜಮೀರ್ ಅಹ್ಮದ್ ವಿರುದ್ಧವಾಗಿದೆ ಎಂದರು.

         ನಿನ್ನಲ್ಲಿ ಜೈಲುಗಳೆಷ್ಟಿವೆ ನೋಡಿಕೋ: ಜಿಲ್ಲಾ ಉಸ್ತುವಾರಿ ಸಚಿವರೇ ಕುತಂತ್ರದಿಂದ ನೀವು 5 ಜನ ಮುಖಂಡರನ್ನು ಬಂಧಿಸಿರಬಹುದು, ಹೋರಾಟದಲ್ಲಿ 50 ಸಾವಿರಕ್ಕೂ ಹೆಚ್ಚು ರೈತರಿದ್ದೇವೆ, ನಮ್ಮ ಘೋಷವಾಕ್ಯವೇ ‘ಜೀವ ಬಿಟ್ಟೇವು ಜೀವಜಲ ಬಿಡೆವು’ ನಿಮ್ಮಂತಹ ಪೊಳ್ಳು ಬೆದರಿಕೆಗಳಿಗೆ ರೈತ ಸಂಘ ಜಗ್ಗುವುದಿಲ್ಲ ಮುಂದಿನ ದಿನಗಳಲ್ಲಿ ನೀರಿಗಾಗಿ ‘ಜೈಲ್ ಭರೋ’ ಚಳುವಳಿ ಹಮ್ಮಿಕೊಳ್ಳುತ್ತೇವೆ, ತಾಕತ್ತಿದ್ದರೇ ನಿಮ್ಮ ಜೈಲುಗಳಲ್ಲಿ ನಮ್ಮ ರೈತರನ್ನು ಬಂಧಿಸಲು ಮುಂದಾಗಿ ಎಂದು ಸವಾಲೆಸೆದರು.

         ಬಂಧಿಸಿದ್ದ ರೈತರ ಬಿಡುಗಡೆ: ಪ್ರತಿಭಟನೆಯ ಕಾವು ಏರತೊಡಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು, ರಾಹುಲ್ ಗಾಂಧಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದ ರೈತ ಮುಖಂಡರಾದ ಗಂಗಣ್ಣ ಎಲಿ, ಮಲ್ಲಿಕಾರ್ಜುನ ಬಳ್ಳಾರಿ, ರುದ್ರಗೌಡ ಕಾಡನಗೌಡ್ರ, ಶಶಿಧರ ಛತ್ರದಮಠ ಹಾಗೂ ಕಿರಣ ಗಡಿಗೋಳ ಇವರನ್ನು ಬಿಡುಗಡೆ ಮಾಡುವ ಮೂಲಕ ಪ್ರತಿಭಟನಾಕಾರರಿಗೆ ತಂದೊಪ್ಪಿಸಿದರು.

       ಈ ಸಂದರ್ಭದಲ್ಲಿ ಮಂಜು ತೋಟದ, ಶಿವಯೋಗಿ ಶಿರೂರ, ಮಹದೇವಪ್ಪ ಶಿಡೇನೂರ, ಈರಣ್ಣ ಬಣಕಾರ, ನಂದೀಶ್ ವೀರನಗೌಡ್ರ, ಡಾ.ಕೆ.ವಿ.ದೊಡ್ಡಗೌಡ್ರ, ಮೌನೇಶ ಕಮ್ಮಾರ, ಮಲ್ಲೇಶಪ್ಪ ಡಂಬಳ, ಶೇಖಪ್ಪ ಕಾಶಿ, ಸಂಜೀವ್ ಮಡಿವಾಳರ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link