ರೈತರ ಬೃಹತ್ ಸಮಾವೇಶ

ಚಳ್ಳಕೆರೆ

        ದೇಶದ ಪ್ರಧಾನ ಮಂತ್ರಿ ನರೇಂದ್ರಮೋದಿ ಫೆ.1ರಂದು ಮಂಡಿಸಿದ ಆಯವ್ಯಯದಲ್ಲಿ ರೈತರಿಗೆ ವಾರ್ಷಿಕ 6 ಸಾವಿರ ಹಣವನ್ನು ಅವರ ಖಾತೆಗೆ ಮೂರು ಕಂತುಗಳಲ್ಲಿ ಜಮಾ ಮಾಡುವ ಭರವಸೆ ನೀಡಿದ್ದು, ಬರುವ ಲೋಕಸಭಾ ಚುನಾವಣೆಯಲ್ಲಿ ರೈತರ ಮತಗಳನ್ನು ಗಳಿಸುವ ದುರುದ್ದೇಶ ಅಡಗಿದೆ. ರಾಜ್ಯ ರೈತರ ಮೇಲೆ ಕೇಂದ್ರ ಸರ್ಕಾರ ಬುದ್ದಿವಂತಿಕೆ ನಯವಂಚನೆ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದಾರೆ.

        ಅವರು, ಭಾನುವಾರ ಇಲ್ಲಿನ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಜಿಲ್ಲಾ ರೈತ ಸಂಘ ಹಮ್ಮಿಕೊಂಡಿದ್ದ ರೈತರ ಬೃಹತ್ ಸಮಾವೇಶವನ್ನು ರೈತ ಸಂಘದ ಸಂಸ್ಥಾಪಕರಾದ ದಿವಂಗತ ಪ್ರೊ.ಎಂ.ಡಿ.ನಂಜುಡಸ್ವಾಮಿ, ಮಾಜಿ ಅಧ್ಯಕ್ಷ ರುದ್ರಪ್ಪ, ಎಂ.ಡಿ.ಸುಂದರೇಶ್‍ ರವರ ಇವರ ಭಾವಚಿತ್ರಗಳಿಗೆ ಪುಪ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

          ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪ್ರಧಾನ ಮಂತ್ರಿಗಳು ಡಾ.ಸ್ವಾಮಿನಾಥನ್ ವರದಿ ಅನ್ವಯ ರಾಜ್ಯದ ರೈತರಿಗೆ ಹಲವಾರು ಸೌಲಭ್ಯ ನೀಡುವ ಭರವಸೆ ನೀಡಿದರು. ಆದರೆ, ಯಾವುದೇ ಭರವಸೆ ಈಡೇರಿಸಿಲ್ಲ, ರಾಜ್ಯದ ರೈತರ ರಾಷ್ಟ್ರೀಕೃತ ಸಾಲ ಮನ್ನಾ ಬಗ್ಗೆ ಪ್ರಧಾನ ಮಂತ್ರಿಯೂ ಸೇರಿದಂತೆ ರಾಜ್ಯದ ಬಿಜೆಪಿ ಮುಖಂಡರು ಯಾವುದೇ ಭರವಸೆ ನೀಡಿಲ್ಲ, ರೈತರ ಸಾಲ ಮನ್ನಾ ಮಾಡಲು ಸಾಧ್ಯವಾಗದ ಈ ರಾಷ್ಟ್ರದ ಪ್ರಧಾನ ಮಂತ್ರಿಗಳು ಅನಿಲ್ ಅಂಬಾನಿಯವರ 3.50 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡುತ್ತಾರಲ್ಲದೆ, ಇದೇ ಒಡೆತನದ ಕಂಪನಿಗೆ ಫಸಲ್ ಭೀಮಾ ಯೋಜನೆಯಡಿ 6.50 ಲಕ್ಷ ಕೋಟಿ ಲಾಭವನ್ನು ಮಾಡಿಕೊಟ್ಟಿದ್ಧಾರೆ. ರೈತರ ಬಗ್ಗೆ ಯಾವುದೇ ರೀತಿಯ ಅಭಿಮಾನವಿಲ್ಲದ, ಕಾಳಜಿ ಇಲ್ಲದ ಕೇಂದ್ರ ಸರ್ಕಾರ ಧ್ವಂಧ್ವ ನಿಲುವನ್ನು ಅವರು ಆಕ್ಷೇಪಿಸಿದರು.

          ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಬರಗಾಲದ ದುಸ್ಥಿತಿಯನ್ನು ಎದುರಿಸುತ್ತಾ ಬಂದಿದೆ. ಈ ಭಾಗದ ರೈತರು ಸಂಪೂರ್ಣವಾಗಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ 46 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡುವುದಾಗಿ ಪ್ರಚಾರ ಪಡೆಯುತ್ತಿದ್ದಾರೆ.

           ವಾಸ್ತವವಾಗಿ ರಾಜ್ಯದ ಬಹುತೇಕ ರೈತರ ಸಾಲ ಇನ್ನೂ ವಜಾ ಆಗಿಲ್ಲ, ರಾಜ್ಯದ ಹಲವಾರು ನೀರಾವರಿ ಯೋಜನೆಗಳಿಗೆ ಮೈತ್ರಿಕೂಟದ ಸರ್ಕಾರ ಯಾವುದೇ ಹಣಕಾಸಿನ ನೆರವನ್ನು ನೀಡಿಲ್ಲ, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಿದ್ದಲ್ಲಿ ಮಾತ್ರ ರೈತ ನಷ್ಟದಿಂದ ಹೊರ ಬರುತ್ತಾನೆ. ಆತ್ಮಹತ್ಯೆ ಯತ್ನದಿಂದ ದೂರ ಉಳಿಯುತ್ತಾನೆಂದರು. ತಾಲ್ಲೂಕಿನ ವೇದಾವತಿ ನದಿ ಪಾತ್ರದ ಅಕ್ರಮ ಮರಳು ದಂಧೆ ಎಲ್ಲೆಮೀರಿದ್ದು, ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಆ ಭಾಗದ ರೈತರು ಸಂಘಟಿತರಾಗಿ ಹೋರಾಟ ಮಾಡಬೇಕೆಂದರು.
ರಾಜ್ಯ ಸರ್ಕಾರ 10 ಸಾವಿರ ಕೋಟಿ ಖರ್ಚು ಮಾಡಿ ಬೆಂಗಳೂರು ನಗರ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತದೆ.

           ಆದರೆ, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಹಿಂದೇಟು ಹಾಕುತ್ತದೆ. ಎಪಿಎಂಸಿ ಮಾರುಕಟ್ಟೆಗಳಲ್ಲಿ ರೈತರ ಬೆಳೆಗಳಿಗೆ ಸ್ವಾಮಿನಾಥನ್ ವರದಿ ಅನ್ವಯ ಹೆಚ್ಚಿನ ಬೆಲೆಯನ್ನು ನೀಡಿ ಖರೀದಿಸುವಂತಾಗಬೇಕು. ಖಾಸಗಿ ಬೆಳೆ ವಿಮೆ ಕಂಪನಿಗಳು ರೈತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಸಹ ವಿಫಲವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಂತಹ ಕಂಪನಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದರು.

           ಪ್ರಸ್ತುತ ಮೈತ್ರಿ ಕೂಟದ ಸರ್ಕಾರದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಯಾವುದೇ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಈ ಬಾರಿಯ ಬಜೆಟ್‍ನಲ್ಲಾದರೂ ನೀರಾವರಿಗೆ ಹಣ ಒದಗಿಸುವಂತೆ ಮನವಿ ಮಾಡಿದರು. ಗ್ರಾಮೀಣ ಭಾಗಗಳಲ್ಲಿ ರೈತ ಸಂಘಟನೆಗಳು ಸಂಘಟಿತರಾಗಿ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಭ್ರಷ್ಟಾಚಾರವನ್ನು ತಡೆಯಬಹುದು. ಆಕ್ರಮ ಮರಳು ದಂಧೆ, ಪಂಚಾಯಿತಿ ಮಟ್ಟದ ಅವ್ಯವಹಾರಗಳ ತಡೆಗೆ ರೈತ ಸಂಘಟನೆ ಬಲಗೊಂಡಲ್ಲಿ ಮಾತ್ರ ಸಾಧ್ಯವೆಂದರು.

              ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ರೈತ ಸಮುದಾಯದ ಸಾಲ ಮನ್ನಾ ಬಗ್ಗೆ ಸರ್ಕಾರದ ನಿರ್ಲಕ್ಷ ರೈತರಿಗೆ ಆಗುತ್ತಿರುವ ಅನ್ಯಾಯಗಳನ್ನು ಎದುರಿಸಲು ಸಂಘಟನೆಯನ್ನು ಬಲಪಡಿಸಲು ಈ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಒಂದು ವಾರದಿಂದ ತಾಲ್ಲೂಕಿನಾದ್ಯಂತ ಪ್ರವಾಸಗೊಂಡು ರೈತರನ್ನು ಜಾಗೃತಿಗೊಳಿಸಲಾಗಿದೆ.

           ತಾಲ್ಲೂಕಿನ ರೈತರಿಗೆ ಭದ್ರಾಮೇಲ್ದಂಡೆ ಮೂಲಕ ನೀರು ರೈತರ ಬೆಳೆಗಳಿಗೆ ಸ್ವಾಮಿನಾಥನ್ ವರದಿ ಪ್ರಕಾರ ಬೆಂಬಲ ಬೆಲೆ, ವೇದಾವತಿ ನದಿ ಪಾತ್ರದ ಅಕ್ರಮ ಮರಳು ದಂಧೆ ನಿಯಂತ್ರಣ, ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಣ ವ್ಯಾಪಾರೀಕರಣಕ್ಕೆ ಕಡಿವಾಣ, ನೈಸರ್ಗಿಕ ಮತ್ತು ಸಾವಯವ ಕೃಷಿಗೆ ರೈತರಿಗೆ ಆಗುತ್ತಿರುವ ಸೌಲಭ್ಯ, ಕೃಷಿ ಆಧಾರಿತ ಸಾಲಗಳಿಗೆ ಶೂರಿಟಿ ಇಲ್ಲದೆ ಸಾಲ ಮಂಜೂರು, ಗ್ರಾಮೀಣ ಭಾಗದ ಯುವಕರಿಗೆ ಗ್ರಾಮೀಣ ಮಟ್ಟದಲ್ಲಿ ಕೈಗಾರಿಕೆ ಸ್ಥಾಪನೆ ಮುಂತಾದ ಒಟ್ಟು 9 ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಸಮ್ಮೇಳನದಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು ಎಂದರು.

           ರೈತ ಸಂಘಟನೆಯ ಬಲವರ್ಧನೆಯ ಬಗ್ಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಗಟ್ಟದ ಸಿದ್ದವೀರಪ್ಪ, ಕೋಲಾರ ಶಿವಪ್ಪ, ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ, ಕಬ್ಬಿಗೆರೆ ನಾಗರಾಜ, ಕೆಂಕೆರೆ ಸತೀಶ್, ಶಿವರತ್ನ, ಡಾ.ನಟರಾಜ, ಡಾ.ಕೆ.ಪಾಪಣ್ಣನವರ್, ಚನ್ನಕೇಶವ ಮೂರ್ತಿ ಮುಂತಾದವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಅಧ್ಯಕ್ಷ ಕೆ.ಸಿ.ಶ್ರೀಕಂಠಮೂರ್ತಿ ವಹಿಸಿದ್ದರು

.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap