ರೈತರಿಗೆ ನೀರಿನ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ವಿಶ್ವ ಜಲ ದಿನಾಚರಣೆ

ಹುಳಿಯಾರು

       ನಮ್ಮ ಮಣ್ಣಿಗೆ ಸೂಕ್ತವಾದ ಬೆಳೆ ಬೆಳೆಯದೆ ಹಾಗೂ ತಿಳುವಳಿಕೆಯ ಕೊರತೆಯಿಂದ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿರುವ ಅತಿ ಹೆಚ್ಚು ನೀರು ಕೇಳುವ ತೆಂಗು ಹಾಗೂ ಅಡಿಕೆ ಬೆಳೆಯುತ್ತಿರುವುದರಿಂದ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಇದರಿಂದ ಪ್ರಕೃತಿ ಹಾಗೂ ಪರಿಸರದ ಮೇಲೆ ಪರಿಣಾಮ ಬೀರಿದ್ದು ನೀರನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಕವಿ ಹಾಗೂ ಲೇಖಕ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು.

         ಹುಳಿಯಾರಿನ ಬಿಎಂಎಸ್ ಕಾಲೇಜು ಎನ್‍ಎಸ್‍ಎಸ್ ಘಟಕದ ಸಹಯೋಗದೊಂದಿಗೆ ಸಮೀಪದ ಕಂಪನಹಳ್ಳಿಯ ರೈತ ಮರುಳಪ್ಪನವರ ತೋಟದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜಲ ದಿನದಲ್ಲಿ ಕೃಷಿಯಲ್ಲಿ ನೀರಿನ ಬಳಕೆ, ಉಳಿಕೆ ಮತ್ತು ಅದರ ಮಹತ್ವದ ಬಗ್ಗೆ ರೈತರಲ್ಲಿ ಜಾಗೃತಿ ಉಂಟು ಮಾಡಿದ ಅವರು, ನಮ್ಮ ಹಿರಿಯರಿಗೆ ನೀರಿನ ಬಗ್ಗೆ ಸರಿಯಾದ ತಿಳುವಳಿಕೆ ಇರಲಿಲ್ಲ. ಅವರಿಗೆ ನೀರನ್ನು ಸರಿಯಾಗಿ ಬಳಸುವುದನ್ನು ಯಾರೂ ಹೇಳಲಿಲ್ಲ.

        ಬೆಳೆಗಳನ್ನು ಎಲ್ಲೆಲ್ಲಿ, ಯಾವ ಪ್ರದೇಶದಲ್ಲಿ ಯಾವ ಬೆಳೆ ಬೆಳೆಯಬೇಕೆಂದು ತಿಳಿಸಲಿಲ್ಲ. ಹೀಗಾಗಿಯೇ ನಮ್ಮಲ್ಲಿನ ಮಳೆ ಪ್ರಮಾಣಕ್ಕೆ ಸರಿಯಾಗಿ ಒಗ್ಗದ ತೆಂಗು ಹಾಗೂ ಅಡಿಕೆಯತ್ತ ಎಲ್ಲರೂ ಮಾರು ಹೋಗಿದ್ದು ಎಷ್ಟರ ಮಟ್ಟಿಗೆ ತೆಂಗು ಬೆಳೆದಿದ್ದಾರೆಂದರೆ ಇದರಿಂದಾಗಿಯೇ ನಮ್ಮದು ಕಲ್ಪತರು ನಾಡು ಎಂಬ ಹೆಗ್ಗಳಿಕೆ ಹೊಂದುವಂತಾಗಿರುವುದು ವಿಪರ್ಯಾಸ ಎಂದರು.

         ರಾಗಿ, ನವಣೆ, ಸಜ್ಜೆ, ಆರ್ಕ ಇವುಗಳಿಗೆ ಸಂಬಂಧಪಟ್ಟಂತೆ ಆದ್ಯತೆ ಸಿಗದಿದ್ದಾಗ ನಿಧಾನವಾಗಿ ಅವುಗಳನ್ನು ಕಳಚಿಕೊಂಡ ರೈತನಿಗೆ ಇದೀಗ ಬೀಜವೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಆ ಬೆಳೆಗಳಿಗೆ ಬೆಂಬಲ ಕೊಡುವುದರ ಬದಲು ಆರ್ಥಿಕ ಬೆಳೆಗಳತ್ತ ಜನರು ಗಮನಹರಿಸಿದ್ದರಿಂದ ಹಾಗೂ ಅವುಗಳು ಹೆಚ್ಚು ನೀರಿನ ಪ್ರಮಾಣ ಬೇಡುವುದರಿಂದ ಇಂದು ನೀರಿನ ಸಮಸ್ಯೆ ಎದುರಿಸುವಂತಾಗಿದೆ ಎಂದರು.

        3000 ಮಿಲಿಮೀಟರ್ ಮಳೆ ಇದ್ದರೆ ಮಾತ್ರ ತೆಂಗು ಬದುಕುತ್ತದೆ. ಅದೇ ರೀತಿ ಅಡಿಕೆಗೆ 2,500 ರಿಂದ 3000 ಮಿಲಿಮೀಟರ್ ಮಳೆ ಬೇಕಾಗುತ್ತದೆ. ಆದರೆ ಈ ಭಾಗದಲ್ಲಿ ಐನೂರರಿಂದ ಆರುನೂರು ಮಿಲಿಮೀಟರ್ ಮಳೆಯಾಗುತ್ತಿದ್ದು ಉಳಿದ ನೀರು ಕೊಳವೆ ಬಾವಿ ಕೊರೆಸುವುದರ ಮೂಲಕ ಬಳಕೆಯಾಗುತ್ತಿದೆ. ನಮ್ಮದು ತೆಂಗು ಅಡಿಕೆ ಬೆಳೆಯುವ ಜಾಗವಲ್ಲದಿದ್ದರೂ ಸರಿಯಾದ ತಿಳುವಳಿಕೆಯಿಲ್ಲದೆ ಇವುಗಳನ್ನು ಬೆಳೆಯುವ ಮೂಲಕ ಅಂತರ್ಜಲ ಬರಿದು ಮಾಡುತ್ತಿದ್ದೇವೆ ಎಂದರು.

      ನಾವು ತೆಂಗು ಬೆಳೆಯುವುದರ ಮೂಲಕ ದಾರಿ ತಪ್ಪಿದ ಪರಿಸ್ಥಿತಿ ಇದೆ ಎಂದ ಅವರು, ಇದು ಕಲ್ಪತರು ನಾಡಲ್ಲ ಇದು ಹುಣಸೆ ನಾಡು, ಹಲಸಿನ ನಾಡು. ನೀರಿಲ್ಲದಿದ್ದರೂ ಹೊಲದ ಬದುವಿನಲ್ಲಿ ಹಲಸು, ಮಾವು ಇಂತಹ ರಣ ಬಿಸಿಲಿನಲ್ಲಿ ಹೂವು ಬಿಡುತ್ತದೆ. ಇದು ವಾತಾವರಣದಲ್ಲಿನ ತೇವಾಂಶ ಹೀರಿ ಬೆಳೆಯುತ್ತದೆ. ಇದು ನಮ್ಮ ದೇಸಿ ಗಿಡಗಳು ಎಂದರು.

       ಲಕ್ಷಾಂತರ ವರ್ಷದಿಂದ ಸಂಗ್ರಹವಾಗಿದ್ದ ನೀರು ಅಂತರ್ಜಲವಾಗಿ ಬೋರ್ವೆಲ್ ಮೂಲಕ ತೆಂಗು ಅಡಕೆಗೆ ಬಳಸಲಾಗುತ್ತಿದೆ. ಆದರೆ ಯಾರೊಬ್ಬರೂ ಜಲ ಮರುಪೂರಣದತ್ತ ಗಮನ ಹರಿಸುತ್ತಿಲ್ಲ. ಅಲ್ಲದೆ ಲಕ್ಷಾಂತರ ವರ್ಷದ ನೀರನ್ನು ಕೇವಲ 40 ರಿಂದ 50 ವರ್ಷಗಳಲ್ಲಿ ಬಳಸಿ ಖಾಲಿ ಮಾಡಿದ್ದೇವೆ ಎಂದರು. ನೀರಿನ ಸಮಸ್ಯೆಗೆ ಮಲ್ಚಿಂಗ್ ಮಾಡಬೇಕು, ದೇಸಿ ಗಿಡಗಳನ್ನು ಹಾಕಬೇಕು, ಮಳೆ ನೀರಿಗೆ ಆದ್ಯತೆ ಕೊಡಬೇಕು ಎಂದರು.

        ದಿನದಿಂದ ದಿನಕ್ಕೆ ಅಂತರ್ಜಲದ ಮಟ್ಟ ಕುಸಿಯುತ್ತಿದ್ದು ಈ ಬಗ್ಗೆ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಸಮಸ್ಯೆ ತೀವ್ರವಾಗುತ್ತದೆ. ಅನಾವಶ್ಯಕವಾಗಿ ನೀರನ್ನು ಪೋಲು ಮಾಡದೆ ಹನಿ ಹನಿ ನೀರನ್ನು ಸಂರಕ್ಷಿಸುವುದು ಹಾಗೂ ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಬಗ್ಗೆ ರೈತರಲ್ಲಿ ರೈತರನ್ನು ಜಾಗೃತಿ ಉಂಟು ಮಾಡಬೇಕಿದೆ ಎಂದರು. ನೀರಿನ ಬಗ್ಗೆ ತಮ್ಮ ಸ್ವರಚಿತ ಕವನ ವಾಚಿಸುವ ಮೂಲಕ ಜಲಜಾಗೃತಿ ಉಂಟು ಮಾಡಿದರು.

        ಈ ಸಂದರ್ಭದಲ್ಲಿ ರೈತ ಸಂಘದ ಕೆಂಕೆರೆ ಸತೀಶ್, ಕಂಪನಹಳ್ಳಿ ಮರುಳಪ್ಪ, ಪಾತ್ರೆ ಸತೀಶ್, ಪ್ರಕಾಶ್, ಚನ್ನಬಸವಯ್ಯ, ಯೋಗಣ್ಣ, ರಮೇಶ್, ಜಯಣ್ಣ, ಮಲ್ಲೇಶಪ್ಪ, ಕೆಂಕೆರೆ ಶಿವಣ್ಣ, ರಂಗನಕೆರೆ ಮಂಜಣ್ಣ, ಉಪನ್ಯಾಸಕ ಜಯಪ್ರಕಾಶ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಯ್ಯ, ಉಪನ್ಯಾಸಕ ಜಯಪ್ರಕಾಶ್, ಕನಕ ಬ್ಯಾಂಕ್ ನಿರ್ದೇಶಕ ಉಮೇಶ್ ಸೇರಿದಂತೆ ಎನ್‍ಎಸ್‍ಎಸ್ ಘಟಕದ ವಿದ್ಯಾರ್ಥಿಗಳು, ಆ ಭಾಗದ ರೈತರುಗಳು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link