ತುಮಕೂರು ಡಿಸಿಸಿ ಬ್ಯಾಂಕ್ ರಾಜ್ಯಕ್ಕೆ ಮಾದರಿ – ಸಚಿವ ಎಸ್.ಟಿ.ಸೋಮಶೇಖರ್

 ತುಮಕೂರು : 

      ರಾಜ್ಯದ 21 ಡಿಸಿಸಿ ಬ್ಯಾಂಕ್‍ಗಳಲ್ಲೇ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಸಾಲ ನೀಡಿಕೆಯಲ್ಲಿ ಶೇ.100ರಷ್ಟು ಗುರಿ ಸಾಧಿಸಿರುವ ಜೊತೆಗೆ ಮರುಪಾವತಿಯು ಉತ್ತಮವಾಗಿದೆ. ಈ ಸಾಧನೆ ಹಿಂದೆ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ನೇತೃತ್ವದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಶ್ರಮ ಅಡಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಶ್ಲಾಘಿಸಿದರು.

     ನಗರದ ಡಿಸಿಸಿ ಬ್ಯಾಂಕ್‍ನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ಯಾಂಕ್‍ನಿಂದ ಮೃತ ರೈತ ಕುಟುಂಬದವರಿಗೆ ನೀಡುವ ಲಕ್ಷದವರೆಗಿನ ಸಾಲ ತೀರುವಳಿ ಪತ್ರ ಯೋಜನೆ ಎಲ್ಲಾ ಡಿಸಿಸಿ ಬ್ಯಾಂಕ್‍ಗಳು ಅನುಸರಿಸಬೇಕಾದ ಮಹತ್ವದ ಯೋಜನೆಯಾಗಿದೆ. ತುಮಕೂರಿನ ಬ್ಯಾಂಕ್ ಮಾದರಿಯಲ್ಲೇ ಮಾರ್ಚ್ ಒಳಗೆ ನಿಗದಿತ ಸಾಲ ಯೋಜನೆ ಗುರಿ ತಲುಪಿಸಲು ಸೂಚಿಸಲಾಗಿದೆ ಎಂದರು.

      ಪ್ರತೀ ಪಂಚಾಯ್ತಿಗೊಂದು ವ್ಯವಸಾಯ ಸೇವಾ ಸಹಕಾರ ಸಂಘ(ಪ್ಯಾಕ್ಸ್) ತೆರೆಯುವ ಯೋಜನೆಗೆ ತುಮಕೂರಿನಿಂದಲೇ ಚಾಲನೆ ಕೊಡಲಾಗುವುದು ಎಂದ ಸಚಿವರು ರಾಜ್ಯದ ಅಪೆಕ್ಸ್ ಬ್ಯಾಂಕ್ ಹಾಗೂ 21 ಡಿ.ಸಿ.ಸಿ ಬ್ಯಾಂಕ್ ಒಳಗೊಂಡಂತೆ 5000 ಪ್ಯಾಕ್ಸ್‍ಗಳನ್ನು ಒಂದೇ ತಂತ್ರಾಂಶದಡಿ ತಂದು ಕಾರ್ಯನಿರ್ವಹಿಸುವ ಚಿಂತನೆ ನಡೆದಿದೆ. ಜನರಿಗೆ ತುಂಬಾ ಅನುಕೂಲವಾಗುವಂತಹ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೆ ತರುವಂತೆ ಎಲ್ಲಾ ಸಹಕಾರ ಸಂಘ, ಬ್ಯಾಂಕ್, ಯುನಿಯನ್‍ಗಳಿಂದ ಕೋರಿಕೆ ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳೊಡನೆ ಚರ್ಚಿಸಿದ್ದೇನೆ. ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಮತ್ತು ಸಹಕಾರ ಇಲಾಖೆಗಳ ನಡುವೆ ಕೆಲ ವ್ಯತ್ಯಾಸಗಳಿದ್ದು, ಸದ್ಯದಲ್ಲೇ ಆರೋಗ್ಯ ಇಲಾಖೆಯ ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು.

      5000 ಹುದ್ದೆಗಳ ಭರ್ತಿಗೆ ಕ್ರಮ: ರಾಜ್ಯದ ಸಹಕಾರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸಹಕಾರ ಬ್ಯಾಂಕ್/ಸಂಘಗಳಲ್ಲಿ ಖಾಲಿ ಇರುವ 5000 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಸಹಕಾರ ಸಚಿವರು ಈಗಾಗಲೇ 2 ಸಾವಿರ ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ಅಗತ್ಯವಿದ್ದರೆ ನಿಯಮಗಳಿಗೆ ತಿದ್ದುಪಡಿ:

      ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದು, ಸಹಕಾರ ಇಲಾಖೆ/ಕ್ಷೇತ್ರದ ಸಮಸ್ಯೆಗಳು ಕಂಡುಬಂದಲ್ಲಿ ಅವುಗಳನ್ನು ಸರಿಪಡಿಸಲು ಅಗತ್ಯವಿದ್ದರೆ ನಿಯಮಗಳಿಗೆ ತಿದ್ದುಪಡಿ ತರಲಾಗುವುದು. ಕೆಲವು ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಹಣ ದುರುಪಯೋಗವಾದ ಕಾರಣ ಆರ್‍ಬಿಐ ಬಿಗಿ ನಿಯಂತ್ರಣಗಳನ್ನು ಹೇರಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
 
ಸಾಲ ಮನ್ನಾ ಬಾಕಿ ಶೀಘ್ರ ಬಿಡುಗಡೆ :

      ಸಹಕಾರ ಇಲಾಖೆಯ ಯೋಜನೆಗಳಾದ ಬಡವರ ಬಂಧು, ಪರಿಶಿಷ್ಟ ಜಾತಿ ಪಂಗಡದವರಿಗೆ ಸಾಲ ಸೌಲಭ್ಯ, ಕಾಯಕ ಯೋಜನೆ, ರೈತರಿಗೆ ವಿವಿಧ ಬೆಳೆ ಸಾಲಗಳ ವಿತರಣೆಗೆ ಸುಮಾರು 15300ಕೋಟಿ ರೂ. ಗುರಿ ನೀಡಲಾಗಿತ್ತು. ಈ ಪೈಕಿ ಸಹಕಾರ ಬ್ಯಾಂಕ್‍ಗಳು 12543 ಕೋಟಿ ರೂ.ಗಳ ಸಾಲ ವಿತರಣೆ ಮಾಡಿದ್ದು, ಶೇಕಡ 82 ರಷ್ಟು ಪ್ರಗತಿಆಗಿದೆ. ರೈತರ ಸಾಲ ಮನ್ನಾಗೆ ಸಂಬಂಧಿಸಿದಂತೆ ವಿವಿಧ ಕಾರಣಕ್ಕೆ ಬಾಕಿ ಇರುವ 295 ಕೋಟಿ ರೂಗಳನ್ನು ಶೀಘ್ರವೇ ಬಿಡುಗಡೆಗೊಳಿಸ ಲಾಗುವುದು. ಇದರಲ್ಲಿ ತುಮಕೂರು ಡಿಸಿ.ಸಿ ಬ್ಯಾಂಕಿಗೂ 31 ಕೋಟಿ. ರೂ. ಬರಲಿದೆ ಎಂದು ಸಚಿವರು ಮಾಹಿತಿ ನೀಡಿದರು. 

      ಸಂಸದ ಜಿ.ಎಸ್.ಬಸವರಾಜು, ಮಾಜಿ ಶಾಸಕ ಸುರೇಶ್ ಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಕ್ರಿಬ್ಕೋ ನಿರ್ದೇಶಕ ಆರ್.ರಾಜೇಂದ್ರ, ಸಹಕಾರ ಸಂಘಗಳ ಉಪಾಧ್ಯಕ್ಷ ಕಾಂತರಾಜ್, ಬ್ಯಾಂಕ್ ನಿರ್ದೇಶಕರುಗಳು, ಆಡಳಿತವರ್ಗದವರು ಉಪಸ್ಥಿತರಿದ್ದರು.
 
ಇಂದು ತೋವಿನಕೆರೆಯಲ್ಲಿ 36ನೇ ಶಾಖೆ ಉದ್ಘಾಟನೆ : ಕೆಎನ್‍ಆರ್

      ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣ ಮಾತನಾಡಿ ರೈತರು ಬಡವರ ಸ್ನೇಹಿಯಾಗಿ ಮುನ್ನೆಡೆಯುತ್ತಿರುವ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ 36ನೇ ಶಾಖೆ ಇಂದು ತೋವಿನಕೆರೆಯಲ್ಲಿ ಉದ್ಘಾಟನೆಗೊಳ್ಳುತ್ತಿದ್ದು, ಜಿಲ್ಲೆಯ ಪ್ರತೀ ಹೋಬಳಿ ಕೇಂದ್ರದಲ್ಲೂ ಬ್ಯಾಂಕ್ ಶಾಖೆ ತೆರೆಯಬೇಕೆಂಬುದು ನಮ್ಮ ಗುರಿಯಾಗಿದೆ.

     ಈಗಾಗಲೇ ಚೇಳೂರು, ವದನಕಲ್ಲು, ಸಿ.ಎಸ್.ಪುರ, ಮಾಯಸಂದ್ರದಲ್ಲೂ ಶಾಖೆ ತೆರೆಯಲು ಜಾಗ ಗುರುತಿಸಲಾಗಿದೆ. ಎಸ್.ಟಿ.ಸೋಮಶೇಖರ್ ಸಹಕಾರ ಸಚಿವರಾದ ಬಳಿಕ ಹಲವು ಜನಸ್ಪಂದನಾ ಯೋಜನೆಗಳನ್ನು ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿ ಸಹಕಾರಿ ಆಂದೋಲನ ಯಶಸ್ವಿಗೆ ಸಹಕಾರ ನೀಡುತ್ತಿದ್ದಾರೆ.

     ಲಾಕ್‍ಡೌನ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಸಾಲ ಸೌಲಭ್ಯಗಳನ್ನು ನೀಡಿದ್ದೇವೆ. ಸಹಕಾರ ಕೇತ್ರದಲ್ಲಿ ಯಶಸ್ಸು ಸಾಧಿಸುವ ಯೋಜನೆಗಳನ್ನು ತರಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap