ಚಿತ್ರದುರ್ಗ:
ಕನ್ನಡ ಚಲನಚಿತ್ರ ರಂಗ ಕಂಡ ಮೇರು ನಟ, ಡಾ. ರಾಜ್‍ಕುಮಾರ್ ಅವರನ್ನು ಕನ್ನಡ ನಾಡು ಕೇವಲ ಕಲಾವಿದರನ್ನಾಗಿ ಕಾಣದೆ, ಆರಾಧ್ಯ ದೈವವನ್ನಾಗಿ ಪರಿಗಣಿಸಿದ್ದಾರೆ ಎಂದರೆ, ಅವರ ಸಾಧನೆ, ಘನತೆ ಎಂತಹ ಉತ್ಕಷ್ಟ ಮಟ್ಟದ್ದಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಬಣ್ಣಿಸಿದರು.
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಚುನಾವಣಾ ನೀತಿ ಸಂಹಿತೆ ಕಾರಣ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಯೋಜಿಸಿದ್ದ ಡಾ. ರಾಜ್‍ಕುಮಾರ್ ಅವರ 91 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಬಳಿಕ ಅವರು ಮಾತನಾಡಿದರು.
ಚಲನಚಿತ್ರ ಮಾಧ್ಯಮ ಜನರ ಮನಸ್ಸಿನಲ್ಲಿ ಸಾಕಷ್ಟು ಬದಲಾವಣೆ ತರಬಹುದಾದ ಪರಿಣಾಮಕಾರಿ ಮಾಧ್ಯಮವಾಗಿದ್ದು, ಸಿನಿಮಾಗಳಲ್ಲಿನ ಪಾತ್ರಗಳನ್ನು ಜನರು ಕೇವಲ ಪಾತ್ರಗಳೆಂದು ಭಾವಿಸದೆ, ಆ ಪಾತ್ರಗಳಲ್ಲಿ ತಮ್ಮನ್ನೇ ಹೋಲಿಸಿಕೊಂಡು ನೋಡುತ್ತಾರೆ. ಮಕ್ಕಳು ಶಾಲೆಗಳಲ್ಲಿ ಶಿಕ್ಷಕರು ಹೇಳುವ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿ, ಪಾಲಿಸುತ್ತಾರೆ. ಅದೇ ರೀತಿ ಸಿನಿಮಾಗಳಲ್ಲಿನ ನಾಯಕ, ನಾಯಕಿಯರ ಪಾತ್ರಗಳನ್ನು ಮಕ್ಕಳು, ಜನರು ಗಂಭೀರವಾಗಿ ಪರಿಗಣಿಸುವುದರಿಂದ, ಸಿನಿಮಾಗಳು ಉತ್ತಮ ಸಂದೇಶವನ್ನು ನೀಡುವಂತಿರಬೇಕು
ರಾಜ್‍ಕುಮಾರ್ ಅವರು ಅಭಿನಯಿಸಿರುವ ಚಲನಚಿತ್ರಗಳನ್ನು ಗಮನಿಸಿದಾಗ, ಅವರ ಎಲ್ಲ ಚಿತ್ರಗಳಲ್ಲೂ ಸಮಾಜಕ್ಕೆ ಉತ್ತಮ ಸಂದೇಶ ನೀಡಿವೆ. ಅಭಿಮಾನಿಗಳು ಡಾ. ರಾಜ್‍ಕುಮಾರ್‍ರನ್ನು ದೇವರಾಗಿ ಕಾಣುತ್ತಿದ್ದರು, ರಾಜ್‍ಕುಮಾರ್ ಅವರು ಅಭಿಮಾನಿಗಳನ್ನು ದೇವರೆಂದು ಕರೆಯುತ್ತಿದ್ದರು ಹೀಗಾಗಿ ಡಾ. ರಾಜ್‍ಕುಮಾರ್ ಅವರನ್ನು ಕನ್ನಡಿಗರು ಕೇವಲ ಕಲಾವಿದರಂದು ನೋಡದೆ, ಆರಾಧ್ಯ ದೈವವನ್ನಾಗಿಸಿದ್ದಾರೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು ಮಾತನಾಡಿ, ಡಾ.ರಾಜ್‍ಕುಮಾರ್ ಅವರು ಕನ್ನಡ ನಾಡಿನ ಜೀವಾಳ. ಅವರು ಕಲಾವಿದರಾಗಿ, ನಮ್ಮ ನಾಡಿಗೆ ಘನತೆಯನ್ನು ತಂದುಕೊಟ್ಟ ನಟರು. ಎಲ್ಲ ಭಾಷೆಗಳಲ್ಲಿ ಕನ್ನಡ ಭಾಷೆ ಶ್ರೇಷ್ಠ ಎಂದು ನಂಬಿದ್ದ ಅವರು, ಕನ್ನಡ ನಾಡು, ನುಡಿಯ ವಿಷಯ ಬಂದಾಗ ಹೋರಾಟಕ್ಕೂ ಧುಮುಕಿದರು. ಇದಕ್ಕೆ ಗೋಕಾಕ್ ಚಳುವಳಿಯೇ ನಿದರ್ಶನವಾಗಿದೆ
ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದ ಅವರು, ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಅವರ ಚಲನಚಿತ್ರಗಳು ಸಮಾಜಕ್ಕೆ ಮೌಲ್ಯಯುತ ಸಂದೇಶ ನೀಡುವಂತಿದ್ದವು. ಬಂಗಾರದ ಮನುಷ್ಯ ಚಲನಚಿತ್ರದಲ್ಲಿನ ಸಂದೇಶ, ಲಕ್ಷಾಂತರ ರೈತರ ಜೀವನದಲ್ಲಿ ಹೊಸ ಹುರುಪನ್ನು ತುಂಬುವಲ್ಲಿ ಯಶಸ್ವಿಯಾಗಿತ್ತು. ಅವರ ಚಲನಚಿತ್ರಗಳು ದೀರ್ಘಕಾಲ ನೆನಪಿನಲ್ಲಿ ಉಳಿಯುವಂತಹ ಚಿತ್ರಗಳಾಗಿದ್ದು, ಇತ್ತೀಚಿನ ಸಿನಿಮಾಗಳನ್ನು ನಾವು ಗಮನಿಸಿದಾಗ, ಬಹುತೇಕ ಚಲನಚಿತ್ರಗಳು ಜೀವನಕ್ಕೆ ಒಳ್ಳೆಯ ಸಂದೇಶ ನೀಡುವಲ್ಲಿ ವಿಫಲವಾಗುತ್ತಿವೆ ಅಷ್ಟೇ ಅಲ್ಲದೆ ನೆನಪಿನಲ್ಲಿಯೂ ಉಳಿಯುವುದಿಲ್ಲ ಎಂದರು.
ಡಾ.ರಾಜ್‍ಕುಮಾರ್ ಅವರ ಕುರಿತು ಮಾತನಾಡಿದ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು, ಪದ್ಮಭೂಷಣ ಡಾ.ರಾಜ್‍ಕುಮಾರ್ ಅವರ ಜನ್ಮದಿನಾಚರಣೆಯನ್ನು ವಾರ್ತಾ ಇಲಾಖೆ ವತಿಯಿಂದ ವಿಜೃಂಭಣೆಯಿಂದ ಆಚರಿಸಬೇಕಾಗಿತ್ತು. ಆದರೆ ನೀತಿ ಸಂಹಿತೆಯ ಕಾರಣದಿಂದ ಸರಳವಾಗಿ ಆಚರಿಸಲಾಗುತ್ತಿದೆ
ಡಾ. ರಾಜ್‍ಕುಮಾರ್ ಅವರು ಕನ್ನಡ ಚಲನಚಿತ್ರರಂಗದ ಅನಿಭಿಷಕ್ತ ರಾಜನಂತೆ ಮೆರೆದರು ಎಂದರೂ ತಪ್ಪಾಗಲಾರದು. 1929 ಏಪ್ರಿಲ್ 24 ರಂದು ಗಾಜನೂರಿನಲ್ಲಿ ಪುಟ್ಟಸ್ವಾಮಯ್ಯ ಹಾಗೂ ಲಕ್ಷ್ಮಮ್ಮ ದಂಪತಿಗೆ ಮಗನಾಗಿ ಜನಿಸಿದ ಡಾ. ರಾಜ್‍ಕುಮಾರ್ ಅವರ ಮೂಲ ಹೆಸರು ಮುತ್ತುರಾಜ. ಗುಬ್ಬಿ ವೀರಣ್ಣ ಕಂಪನಿಯಲ್ಲಿ ತಂದೆಯ ಜೊತೆಗೆ ವೃತ್ತಿ ಬದುಕು ಪ್ರಾರಂಭಿಸಿದ ರಾಜ್‍ಕುಮಾರ್ ಅವರು, 1954 ರಲ್ಲಿ ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕ ನಟರಾಗಿ ಆಯ್ಕೆಯಾಗಿ, ನಟಿಸಿದರು.
ಇದು ಇವರ ಮೊಟ್ಟ ಮೊದಲ ಚಿತ್ರವಾಯಿತು. ಪೌರಾಣಿಕ, ಭಕ್ತಿ ಪ್ರಧಾನ, ಜೇಮ್ಸ್‍ಬಾಂಡ್ ಮಾದರಿ, ಸಾಮಾಜಿಕ ಹೀಗೆ ಎಂತಹದೇ ಪಾತ್ರಗಳಿರಲಿ, ತನ್ಮಯರಾಗಿ ನಟಿಸಿ, ಆ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಡಾ. ರಾಜ್‍ಕುಮಾರ್ ಅವರು ಸುಮಾರು 206 ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ತಿಳಿಸಿದರು
ಶಬ್ದವೇಧಿ ಅವರು ನಾಯಕ ನಟರಾಗಿ ನಟಿಸಿದ ಕೊನೆಯ ಚಿತ್ರ. ಅಭಿಮಾನಿಗಳನ್ನೇ ದೇವರುಗಳು ಎಂದು ನಂಬಿದ್ದ ಡಾ. ರಾಜ್ ಅವರು ಒಬ್ಬ ಆದರ್ಶ ವ್ಯಕ್ತಿ ಹಾಗೂ ಕಲಾವಿದರಾಗಿದ್ದರು. ಡಾ. ರಾಜ್‍ಕುಮಾರ್ ಅವರು ಕೇವಲ ನಟರು ಮಾತ್ರವಲ್ಲ, ಖ್ಯಾತ ಗಾಯಕರೂ ಕೂಡ ಆಗಿದ್ದರು, ಸುಮಾರು 300 ಕ್ಕೂ ಹೆಚ್ಚು ಚಿತ್ರಗೀತೆಗಳು, 400 ಕ್ಕೂ ಹೆಚ್ಚು ಭಕ್ತಿ ಗೀತೆಗಳನ್ನು ಹಾಡಿದ್ದಾರೆ. ಜೀವನಚೈತ್ರ ಚಿತ್ರದ ‘ನಾದಮಯ’ ಹಾಡಿಗೆ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.
1992 ರಲ್ಲಿ ಕರ್ನಾಟಕದ ಸರ್ವೋನ್ನತ ಪ್ರಶಸ್ತಿಯಾಗಿರುವ ‘ಕರ್ನಾಟಕ ರತ್ನ’ ಪ್ರಶಸ್ತಿ, 1995 ರಲ್ಲಿ ಭಾರತ ಚಲನಚಿತ್ರ ರಂಗದ ಅತ್ಯುನ್ನತ ಪ್ರಶಸ್ತಿಯಾಗಿರುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದರು. ಕಾಡುಗಳ್ಳ ವೀರಪ್ಪನ್‍ನಿಂದ 2000 ಜುಲೈ 30 ರಲ್ಲಿ ಅಪಹರಣಕ್ಕೆ ಒಳಗಾದ ಡಾ. ರಾಜ್‍ಕುಮಾರ್ ಅವರು 108 ದಿನಗಳ ವನವಾಸದ ಬಳಿಕ ಬಿಡುಗಡೆಯಾದರು. 2006 ರ ಏಪ್ರಿಲ್ 12 ರಂದು ಡಾ. ರಾಜ್‍ಕುಮಾರ್ ಅವರು ನಿಧನ ಹೊಂದಿದರು. ವಿನಯ, ವಿಧೇಯತೆಗೆ ಮತ್ತೊಂದು ಹೆಸರೇ ರಾಜ್‍ಕುಮಾರ್ ಆಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಐಎಎಸ್ ಪ್ರೊಬೆಷನರಿ ಅಧಿಕಾರಿ ಡಾ. ನಂದಿತದೇವಿ ಸೇರಿದಂತೆ ವಿವಿಧ ಇಲಾಖೆ, ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು. ಡಾ. ರಾಜ್‍ಕುಮಾರ್ ಜನ್ಮ ದಿನಾಚರಣೆ ಅಂಗವಾಗಿ ಕಲಾವಿದ ವೇಣುಗೋಪಾಲ್ ಅವರು, ಡಾ. ರಾಜ್‍ಕುಮಾರ್ ಅವರು ನಟಿಸಿರುವ ಚಲನಚಿತ್ರಗಳ ಚಿತ್ರ ಗೀತೆಗಳನ್ನು ಇದೇ ಸಂದರ್ಭದಲ್ಲಿ ಪ್ರಸ್ತುತಪಡಿಸಿದರು.