ಬಳ್ಳಾರಿ
ಕರ್ನಾಟಕ ರತ್ನ, ಪದ್ಮಭೂಷಣ, ನಟ ಡಾ.ರಾಜಕುಮಾರ್ ಜಯಂತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಬುಧವಾರ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಡಾ.ರಾಜಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.
ನಂತರ ಮಾತನಾಡಿದ ಅವರು, ಡಾ.ರಾಜಕುಮಾರ್ ಅವರು ನಾಡಿಗೆ ಸಲ್ಲಿಸಿದ ಸೇವೆ ಅತ್ಯಂತ ಸ್ಮರಣೀಯ. ಅವರು ಚಲನಚಿತ್ರಗಳಲ್ಲಿ ಮಾಡದ ಪಾತ್ರಗಳೇ ಇಲ್ಲ ಎಂದು ಹೇಳಿದ ಅವರು, ಅವರ ಚಲನಚಿತ್ರಗಳಲ್ಲಿನ ಅಭಿನಯಕ್ಕೆ ಮಾರುಹೋಗಿ ಅಡ್ಡದಾರಿ ಹಿಡಿದ ಸಾವಿರಾರು ಜನರು ಸರಿದಾರಿಗೆ ಬಂದಿರುವುದಿದೆ ಎಂದರು.
ಕನ್ನಡ ನಾಡಿಗೆ ಡಾ.ರಾಜಕುಮಾರ್ ಅವರು ನೀಡಿರುವ ಕೊಡುಗೆ ಪರಿಗಣಿಸಿ ರಾಜ್ಯ ಸರಕಾರ ಈ ಜಯಂತಿಯನ್ನು ಎರಡನೇ ವರ್ಷ ಆಚರಿಸುತ್ತಿದೆ. ನೀತಿ ಸಂಹಿತೆ ಇರುವ ಕಾರಣ ಸರಳವಾಗಿ ಆಚರಿಸಲಾಗುತ್ತಿದ್ದು, ಮುಂದಿನ ವರ್ಷದಿಂದ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.
ನಗರದ ರಾಘವ ಕಲಾಮಂದಿರದ ಹತ್ತಿರ ರಸ್ತೆ ಬದಿಯಲ್ಲಿ ಡಾ.ರಾಜಕುಮಾರ್ ರಸ್ತೆ ಅಂತ ನಾಮಫಲಕ ಬರೆಯಲಾಗಿತ್ತು. ರಸ್ತೆ ಅಗಲೀಕರಣದಲ್ಲಿ ಅದು ತೆಗೆಯಲಾಗಿದ್ದು, ಅಳವಡಿಸುವಂತೆ ಕನ್ನಪರ ಸಂಘಟನೆಗಳ ಮುಖಂಡರು ಈ ಸಂದರ್ಭದಲ್ಲಿ ಕೋರಿದರು. ಇದಕ್ಕುತ್ತರಿಸಿದ ಡಿಸಿ ರಾಮ್ ಪ್ರಸಾತ್ ಅವರು ರಸ್ತೆ ಕಾಮಗಾರಿ ನಡೆಯುತ್ತಿದ್ದು, ಡಾ.ರಾಜಕುಮಾರ್ ರಸ್ತೆ ಅಂತ ದೊಡ್ಡದಾಗಿ ಬರೆಯಿಸಿ ಹಾಕಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ, ಹೈಕ ಹೋರಾಟಗಾರ ಸಿರಿಗೆರೆ ಪೊನ್ನರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಕನ್ನಡಪರ ಸಂಘಟನೆಗಳ ಮುಖಂಡರಾದ ಯರ್ರಿಸ್ವಾಮಿ, ಸುರೇಶ, ಮರಿದೇವಯ್ಯ ಸೇರಿದಂತೆ ಅನೇಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ