ಕೊನೆ ವಾರದಲ್ಲಿ ಅರ್ಥಪೂರ್ಣ ರಾಜ್ಯೋತ್ಸವಕ್ಕೆ ತೀರ್ಮಾನ

ದಾವಣಗೆರೆ:

       ನವೆಂಬರ್ ಕೊನೆಯ ವಾರದಲ್ಲಿ ನಾಡಹಬ್ಬ ಕನ್ನಡ ರಾಜ್ಯೋತ್ಸವ ಆಚರಿಸಲು ಶನಿವಾರ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮೇಯರ್ ಶೋಭಾ ಪಲ್ಲಗಟ್ಟೆ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

      ಪಾಲಿಕೆ ಸದಸ್ಯ ದಿನೇಶ ಕೆ. ಶೆಟ್ಟಿ ಮಾತನಾಡಿ, ನಮ್ಮ ಆಡಳಿತ ಅವಧಿಯ ಕಳೆದ 4 ವರ್ಷಗಳಿಂದ ಕಸ, ನೀರು ನಿರ್ವಹಣೆ ಸೇರಿದಂತೆ ನಗರದ ಅಭಿವೃದ್ದಿ ಸಾಕಷ್ಟು ಕೆಲಸಗಳನ್ನು ಎಲ್ಲರ ಸಹಕಾರದಿಂದ ಮಾಡಿದ್ದೇವೆ. ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಿದ್ದೇವೆ. ಈ ಬಾರಿಯೂ ನಾಡ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧಾರ ಮಾಡಿದ್ದು. ನವೆಂಬರ್ 28,29. 30ರಂದು ಆಚರಿಸಲು ನಿರ್ಧರಿಸಿದ್ದು, ಇದಕ್ಕೆ ನಿಮ್ಮ ಸಲಹೆ ನೀಡುವಂತೆ ಮನವಿ ಮಾಡಿದರು.

       ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಮಾತನಾಡಿ, ನಗರದಲ್ಲಿ ಸುಮಾರು 2 ಸಾವಿರ ಅಂಗಡಿಗಳಲ್ಲಿ ಆಂಗ್ಲ ನಾಮಫಲಕ ಆಳವಡಿಸಲಾಗಿದೆ. ಈ ಬಗ್ಗೆ ದಾಖಲೆ ಸಮೇತ ದೂರು ಕೊಟ್ಟರು ಪಾಲಿಕೆ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಈ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ? ಎಂದು ಪ್ರಶ್ನಿಸಿದರು. ಇದೇ ನವೆಂಬರ್ 1ರೊಳಗೆ ಎಲ್ಲ ಆಂಗ್ಲನಾಮಫಲಕ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಧ್ವಜಗಳು ಹರಿದು ಹೋಗುತ್ತಿವೆ. ಈ ಬಗ್ಗೆ ಗಮನಹರಿಸಬೇಕು ಎಂದರು.

     ವಿಶ್ವಕರ್ನಾಟಕ ಸಂಘಟನೆಯ ಕೆ.ಜಿ.ಯಲ್ಲಪ್ಪ ಮಾತನಾಡಿ, ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಕವಿ ನಿಸಾರ ಆಹಮದ್ ಅವರನ್ನು ಕರೆಸಬೇಕು. ಆಶ್ಲೀಲ ನೃತ್ಯಗಳಿಗೆ ಕಡಿವಾಣ ಹಾಕಬೇಕು. ಹಬ್ಬದ ವೇಳೆ ಜನರ ಕೊರತೆಯಾಗದಂತೆ ಎಚ್ಚರವಹಿಸಬೇಕು. ಈ ಹಿನ್ನಲೆ ಪಾಲಿಕೆಯ ಎಲ್ಲ ಸದಸ್ಯರು ತಮ್ಮ ಕುಟುಂಬ ಸಮೇತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.

     ಕನ್ನಡ ಪರ ಸಂಘಟನೆಯ ಸೋಮಶೇಖರ ಮಾತನಾಡಿ, ಜನಪದ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡಿ, ಸಮಿತಿ ರಚನೆ ವೇಳೆ ಕನ್ನಡ ಪರಸಂಘಟನೆಗಳ ಸದಸ್ಯರಿಗೆ ಒತ್ತು ನೀಡಿ ಎಂದು ಹೇಳಿದರು.

        ಚುಟುಕು ಸಾಹಿತ್ಯ ಪರಿಷತ್‍ನ ರಾಜಶೇಖರ ಗುಂಡಗತ್ತಿ ಮಾತನಾಡಿ, ಪ್ರತಿವರ್ಷ ಚುಟುಕು ಸಾಹಿತ್ಯ ಪರಿಷತ್‍ಗೆ ರಾಜ್ಯೋತ್ಸವದ ವೇಳೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು ಸ್ಪಂದಿಸಿಲ್ಲ. ಈ ಬಾರಿ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.
ಇನ್ನೋರ್ವ ಹೋರಾಟಗಾರ ಎ.ಎಸ್. ಖದ್ದೂಸ್ ಮಾತನಾಡಿ, ಕಡ್ಡಾಯವಾಗಿ ಕನ್ನಡ ನಾಮಫಲಕ ಆಳವಡಿಸದವರಿಗೆ ವ್ಯಾಪಾರ ಪರವಾನಗಿ ನವೀಕರಣ ಮಾಡಿಕೊಡಬಾರದು ಎಂದು ಆಗ್ರಹಿಸಿದರು.

     ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್ ಮಾತನಾಡಿ, ಈ ಬಾರಿ ರಾಜ್ಯೋತ್ಸವದಲ್ಲಿ ಶಿಸ್ತಿಗೆ ಒತ್ತು ನೀಡಿ. ಅವ್ಯವಸ್ಥೆಗೆ ಅವಕಾಶ ನೀಡಿ ಕಾರ್ಯಕ್ರಮಕ್ಕೆ ಅಗೌರವ ತರಬೇಡಿ. ನಾಡು, ನುಡಿಗೆ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸಿ ಎಂದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ. ಭಾವಿ ಮಾತನಾಡಿ, ನಾಡಹಬ್ಬದಲ್ಲಿ ಸ್ಥಳೀಯ ಕಲಾವಿದರನ್ನು ಗುರುತಿಸಿ ಅವಕಾಶ ನೀಡಿ. ಬಾಡಾಕ್ರಾಸ್ ಬಳಿ ಇರುವ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಅಂಧ ಕಲಾವಿಧರನ್ನು ಕರೆಸಿ ಅವರಿಂದ ಕಾರ್ಯಕ್ರಮ ನಡೆಸಿಕೊಡಿ ಎಂದು ಸಲಹೆ ನೀಡಿದರು.

      ಹೋರಾಟಗಾರ ಗಣೇಶ್ ಕುಂದುವಾಡ ಮಾತನಾಡಿ, ನವೆಂಬರ್ ತಿಂಗಳಲ್ಲಿ ಎಲ್ಲ ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಸೂಚಿಸಿ. ಇಲ್ಲವಾದರೆ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

       ನಗರಸಭೆ ಮಾಜಿ ಅಧ್ಯಕ್ಷ ಕೆ.ಜಿ.ಶಿವಕುಮಾರ್ ಮಾತನಾಡಿ, ನಾಡಹಬ್ಬ ಆಚರಣೆಗೆ ಸರ್ವರ ಸಹಕಾರ ಅಗತ್ಯ ಎಂದರು .ಉಪಮೇಯರ್ ಚಮನ್‍ಸಾಬ್, ಉಪ ಆಯುಕ್ತ ಮಹೇಂದ್ರಕರ್, ಸ್ಥಾಯಿಸಮಿತಿ ಅಧ್ಯಕ್ಷ ತಿಪ್ಪಣ್ಣ, ಪಾಲಿಕೆ ಸದಸ್ಯರಾದ ಹಾಲೇಶ್, ಚಂದ್ರಶೇಖರ್, ಡಾ. ವಿಶ್ವನಾಥ್, ರಕ್ತದಾನಿ ಮಹಡಿ ಶಿವಕುಮಾರ್ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap