ಹಾವೇರಿ
ಜಿಲ್ಲೆಯಲ್ಲಿ ಈ ವರ್ಷ ನವೆಂಬರ್ 1 ರಂದು ಜಿಲ್ಲಾ ಕೇಂದ್ರ ಒಳಗೊಂಡಂತೆ ಎಲ್ಲ ತಾಲೂಕಾ ಆಡಳಿತಗಳು ಸರಳವಾಗಿ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಆಯೋಜಿಸುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ ಸೂಚನೆ ನೀಡಿದರು.ಜಿಲ್ಲಾಡಳಿತ ಸಭಾಂಗಣದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿಡಿಯೋ ಸಂವಾದದ ಮೂಲಕ ಎಲ್ಲ ತಾಲೂಕ ತಹಶೀಲ್ದಾರ್‍ಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಕರ್ನಾಟಕ ವಿಧಾನ ಪರಿಷತ್ತಿಗೆ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಆಯೋಗದ ಮಾರ್ಗಸೂಚಿಯಂತೆ ಅಧಿಕಾರಿಗಳು ರಾಜ್ಯೋತ್ಸವ ಆಚರಣೆಗೆ ಕ್ರಮ ವಹಿಸಬೇಕೆಂದು ಸೂಚಿಸಿದರು.
ಕೋವಿಡ್ ಸೋಂಕಿನ ಹಿನ್ನಲೆಯಲ್ಲಿ ರಾಜ್ಯೋತ್ಸವ ಸಮಾರಮಭ ಆಯೋಜಿಸುವ ಸ್ಥಳದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪ್ರತಿ ಆರು ಅಡಿ ಅಂತರದಲ್ಲಿ ಮಾರ್ಕಿಂಗ್ ವ್ಯವಸ್ಥೆ ಮಾಡಬೇಕು. 200 ಸಂಖ್ಯೆಯೊಳಗೆ ಕಾರ್ಯಕ್ರಮದಲ್ಲಿ ಜನರು ಭಾಗವಹಿಸುವಂತೆ ನಿಗಾವಹಿಸಬೇಕು. 60 ವರ್ಷದ ಮೇಲ್ಪಟ್ಟು ಹಾಗೂ 10 ವರ್ಷದ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಎಚ್ಚರಿಕೆ ವಹಿಸಬೇಕು. ಪ್ರತಿಯೋಬ್ಬರು ಮಾಸ್ಕ್ ಧರಿಸಬೇಕು, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಆರೋಗ್ಯ ಇಲಾಖೆಯ ಹೆಲ್ಪ್‍ಡೇಸ್ಕ್ ಸ್ಥಾಪಿಸಿ ಜ್ವರ ತಪಾಸಣೆಗೆ ಕ್ರಮ ವಹಿಸಬೇಕು. ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು, ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಕ್ರಮವಹಿಸಬೇಕು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದರು.
ನೃತ್ಯ, ಮನರಂಜನೆ ಕಾರ್ಯಕ್ರಮ, ಸ್ತಬ್ಧ ಚಿತ್ರ, ಕಲಾ ಜಾಥಾ ಹಾಗೂ ಮೆರವಣಿಗೆ ಆಯೋಜನೆ ಮಾಡಬಾರದು, ಶಾಲಾ ಮಕ್ಕಳನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಬಾರದು ಆದರೆ ಸಿಮೀತ ಸಂಖ್ಯೆಯಲ್ಲಿ ಪಟ್ಟಣ ಮತ್ತು ನಗರ ಕೇಂದ್ರದ ಕಾಲೇಜುಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಒಟ್ಟಾರೆ ಸಂಖ್ಯೆ ಎರಡು ನೂರರ ಗಡಿ ದಾಟಬಾರದು ಎಂದು ಸೂಚಿಸಿದರು.
ನೇರವಾಗಿ ಕ್ರೀಡಾಂಗಣದಲ್ಲಿ ಸಮಾವೇಶಗೊಂಡು ನಾಡಗೀತೆ, ರಾಷ್ಟ್ರಗೀತೆ, ರಾಷ್ಟ್ರ ಧ್ವಜಾರೋಹಣ, ರಾಜ್ಯೋತ್ಸವ ಸಂದೇಶ ವಂದನಾರ್ಪಣೆಯೊಂದಿಗೆ ಸಮಾರಂಭ ಸಮಾಪ್ತಗೊಳಿಸಬೇಕು, ಸನ್ಮಾನ ಹಾಗೂ ಸಂದೇಶ ವಾಚನ ಕುರಿತಂತೆ ಸರ್ಕಾರದ ಮಾರ್ಗಸೂಚಿ ಇಷ್ಟರಲ್ಲೇ ಬರಲಿದೆ, ಇದರನ್ವಯ ಕ್ರಮವಹಿಸುವುದು ಎಂದು ತಿಳಿಸಿದರು.
ರಾಜ್ಯೋತ್ಸವದಲ್ಲಿ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಬಾಗವಹಿಸುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು ವೇದಿಕೆ ಅಲಂಕಾರ, ಕವಾಯತು, ಸಾಮಾಜಿಕ ಅಂತರ ಪಾಲನೆ, ಸ್ವಚ್ಚತೆ, ಸಂದೇಶ ಹಾಗೂ ಆಮಂತ್ರಣ ಪತ್ರಿಕೆ ಮುದ್ರಣ ಸೇರಿದಂತೆ ವಿವಿಧ ಕಾರ್ಯಗಳ ಪೂರ್ವಸಿದ್ದತೆಗೆ ವಿವಿಧ ಅಧಿಕಾರಿಗಳನ್ನೊಳಗೊಂಡ ಸಮಿತಿಗಳಿಗೆ ಜವಾಬ್ದಾರಿ ವಹಿಸಿ ವ್ಯವಸ್ಥಿತವಾಗಿ ಕಾರ್ಯಕ್ರಮದ ಸಿದ್ದತೆ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್ ಯೋಗೇಶ್ವರ, ವಾರ್ತಾಧಿಕಾರಿ ಬಿ.ಆರ್ ರಂಗನಾಥ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಸಮಾಜ ಕಲ್ಯಾಣಾಧಿಕಾರಿ ಚೈತ್ರಾ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಪ್ರದೀಪ ಹಾಗೂ ವಿವಿಧ ಅಧಿಕಾರಿಗಳು ವಿಡಿಯೋ ಸಂವಾದದ ಮೂಲಕ ವಿವಿಧ ತಾಲೂಕ ತಹಶೀಲ್ದಾರ್‍ಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ