ಮೈತ್ರಿ ಧರ್ಮಕ್ಕೆ ಅಗೌರವ ತಂದ ಸೋಮಶೇಖರ್: ರಾಮಲಿಂಗಾ ರೆಡ್ಡಿ

ಬೆಂಗಳೂರು

       ಮೈತ್ರಿ ಸರ್ಕಾರದ ವಿರುದ್ದ ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್.ಟಿ.ಸೋಮಶೇಖರ್ ಅವರು ನೀಡಿರುವ ಹೇಳಿಕೆ ಸರಿಯಲ್ಲ.ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ಅಗತ್ಯವಿದ್ದರೆ ಉಪ ಮುಖ್ಯಮಂತ್ರಿ ಪರಮೇಶ್ವರ್ ಬಳಿ ಚರ್ಚಿಸಬೇಕಿತ್ತು.ಅದನ್ನು ಹೊರತುಪಡಿಸಿ ಬಹಿರಂಗ ಹೇಳಿಕೆ ನೀಡುವ ಮೂಲಕ ಮೈತ್ರಿ ಧರ್ಮಕ್ಕೆ ಅಗೌರವ ತೋರುವುದು ಸರಿಯಲ್ಲವೆಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

        ಸೋಮಶೇಖರ್ ಮೈತ್ರಿ ಸರ್ಕಾರದ ವಿರುದ್ಧ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಇದನ್ನೆಲ್ಲಾ ಪಕ್ಷದ ಒಳಗೆ ಚೆರ್ಚಿಸಬೇಕು . ಸಮಸ್ಯೆಗಳಿದ್ದರೆ ಪಕ್ಷದ ವೇದಿಕೆಯಲ್ಲೇ ಬಗೆಹರಿಸಿಕೊಳ್ಳಬೇಕು ಬಹಿರಂಗ ಹೇಳಿಕೆ ನೀಡಬಾರದು ಎಂದರು.

         ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು , ಈ ಹಿಂದೆ ನಮ್ಮದೇ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಅಭಿವೃದ್ಧಿಗೆ ಸಾಕಷ್ಟು ಹಣ ನೀಡಿದ್ದರು . ವೈಟ್ ಟ್ಯಾಪಿಂಗ್, ರಸ್ತೆ ಅಗಲೀಕರಣ ,110 ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆ ಸೇರಿದಂತೆ ಹಲವು ಕೆಲಸ ನಡೆದಿತ್ತು. ಆ ಕೆಲಸ ಈಗಲೂ ಮುಂದುವರೆದಿವೆ. ಯಾವ ಶಾಸಕರಿಗೂ ಅನುದಾನ ನೀಡಿಕೆಯಲ್ಲಿ ಕಡಿಮೆ ಮಾಡಿಲ್ಲ. ಸಮ್ಮಿಶ್ರ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ 8 ಸಾವಿರ ಕೋಟಿ ರೂ ಕಾಮಗಾರಿಗಳಿಗೆ ಅನುಮೋದನೆ ನೀಡಿದೆ.ಹೀಗಿದ್ದರೂ ಸೋಮಶೇಖರ್ ಟೀಕಿಸಿರುವುದು ಸರಿಯಲ್ಲ ಎಂದರು.

          ಮೈತ್ರಿ ಸರ್ಕಾರದಲ್ಲಿ ಹಿಂದಿನ ಸರ್ಕಾರದ ಎಲ್ಲ ಯೋಜನೆಗಳು,ಕಾಮಗಾರಿಗಳೂ ಮುಂದುವರೆಯುತ್ತಿದೆ. ಉಪ ಮುಖ್ಯಮಂತ್ರಿಗೆ ಎಲ್ಲಾ ಅಧಿಕಾರ ಕೊಟ್ಟಿದ್ದಾರೆ.ಸಮಿಶ್ರ ಸರ್ಕಾರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳು ಎಲ್ಲಾ ಕಡೆ ನಡೆಯುತ್ತಿದ್ದು ಎಲ್ಲೋ ಕೆಲವೆಡೆ ವ್ಯತ್ಯಯ ಉಂಟಾಗಿರಬಹುದು ಅದನ್ನು ಸಮ್ಮಿಶ್ರ ಸರ್ಕಾರವಾಗಿರುವುದಿಂದ ನಾವು ನಮ್ಮ ಪಕ್ಷದ ಆಂತರಿಕ ಸಭೆಗಳಲ್ಲಿ ಚರ್ಚಿಸಿ ತೀರ್ಮಾನಿಸಬೇಕು. ಸೋಮಶೇಖರ್ ಬಹಿರಂಗ ಹೇಳಿಕೆ ಕೊಡಬಾರದಿತ್ತು ಅವರೊಂದಿಗೆ ನಾನು ವೈಯಕ್ತಿಕವಾಗಿ ಮಾತನಾಡುತ್ತೇನೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ