ಹುಳಿಯಾರು:
ರಂಜಾನ್ ಅಂಗವಾಗಿ ಉಪವಾಸ ನಿರತ ಮುಸ್ಲಿಮರು ಸೂರ್ಯ ಮುಳುಗುತ್ತಲೇ ಬಿಸಿಬಿಸಿಯಾದ ಸಮೋಸಗಳಿಗೆ ಮಾರು ಹೋಗುತ್ತಿದ್ದಾರೆ. ಹುಳಿಯಾರಿನ ಮಸೀದಿಗಳ ಸಮೀಪ ಸೇರಿದಂತೆ ಚಹಾ ಅಂಗಡಿಗಳಲ್ಲಿ ಸಮೋಸ ಭರ್ಜರಿಯಾಗಿ ಮಾರಾಟವಾಗುತ್ತಿವೆ.
ರೋಜಾ ಬಿಟ್ಟ ನಂತರ ಮುಸ್ಲಿಮರು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ರಂಜಾನ್ ಸಮಯದಲ್ಲಿ ಘಮಘಮಿಸುವ ಸಮೋಸ ಸೇವನೆ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಎಂದಿನಂತೆ ರಾಮಗೋಪಾಲ್ ಸರ್ಕಲ್ ಮುಸ್ಲಿಂ ಹೋಟೆಲ್, ಚಹಾ ಅಂಗಡಿಗಳಲ್ಲಿ ಸಮೋಸಗಳು ಮಾರಾಟವಾಗುತ್ತಿವೆ. ಇಷ್ಟೇ ಅಲ್ಲದೆ ಮಸೀದಿಗಳ ಸಮೀಪದಲ್ಲಿ ವ್ಯಾಪಾರಿಗಳು ಬಿಸಿಬಿಸಿ ಸಮೋಸ ಕೊಡುತ್ತಿದ್ದಾರೆ.
ಮಸೀದಿಯಲ್ಲಿ ನಮಾಜ್ ಸಲ್ಲಿಸಿದ ನಂತರ ಜನರು ಬರುತ್ತಾರೆ. ತಕ್ಷಣ ಅವರಿಗೆ ಬಿಸಿಬಿಸಿಯಾಗಿ ಮಾಡಿಕೊಡುತ್ತವೆ. ಮಹಿಳೆಯರು ಹಾಗೂ ಮಕ್ಕಳಿಗಾಗಿ ಮನೆಗೆ ಕಟ್ಟಿಸಿಕೊಂಡು ಹೋಗುತ್ತಾರೆ. ಬೆಳಿಗ್ಗೆಯಿಂದ ಏನನ್ನೂ ತಿನ್ನದ ಜನರು ಉಪವಾಸ ಮುಗಿದ ಕೂಡಲೇ ರುಚಿಯಾದ ಸಮೋಸ ತಿನ್ನುತ್ತಾರೆ. ಅಲ್ಲದೆ ಹರಿರಾ ಕುಡಿಯವ ವಾಡಿಕೆಯಿದ್ದು ಚಹ ಬದಲು ಈಗ ಹರಿರಾದ ಬೇಡಿಕೆ ಹೆಚ್ಚಿದೆ ಎಂದು ರಾಮಗೋಪಾಲ್ ಸರ್ಕಲ್ ಬಳಿ ಸಮೋಸ ಮಾರಾಟ ಸೈಯದ್ ಇಲಿಯಾಜ್ ಹೇಳಿದರು.
ಮಾಂಸಾಹಾರ ಸಮೋಸಗಳಾದ ಚಿಕನ್ ಸಮೋಸ, ಮಟನ್ ಸಮೋಸ, ಚಿಕನ್ ಖೀಮಾ ಸಮೋಸಗಳಿಗೆ ಅಪಾರ ಬೇಡಿಕೆ ಇದ್ದರೂ ಖೀಮಾ ಸಮೋಸ ಮಾತ್ರ ಇಲ್ಲಿ ಮಾರಾಟವಾಗುತ್ತಿದೆ. ಇದರ ಜೊತೆ ತರಕಾರಿ ಸಮೋಸ ಸಹ ಸಿಗುತ್ತಿದ್ದು ಕೆಲವು ಕಡೆ ಸಂಜೆ 7 ಕ್ಕೆ ಬಿಸಿಬಿಸಿ ಸಮೋಹ ಹಾಕಿ ಕೊಡುತ್ತಿದ್ದಾರೆ, ಹುಳಿಯಾರಿನಲ್ಲಿ ಕೆಲವೇ ಕೆಲವು ಕಡೆ ಮಾತ್ರ ಸಮೋಸ ಸಿಗುವುದರಿಂದ ಭರ್ಜರಿ ವ್ಯಾಪಾರ ನಡೆಯುತ್ತಿದೆ.