ಪಾವಗಡ :
ಮೃತ ವ್ಯಕ್ತಿಗೆ ಹೆಚ್ಚಿನ ಚಿಕಿತ್ಸೆ ಬೇಕಿದೆ ಎಂದು ಜಿಲ್ಲಾ ಆಸ್ಪತ್ರೆಗೆ ಸಾಗಹಾಕುವ ಪ್ರಯತ್ನ ನಡೆಸಿದ ವೈದ್ಯ, ವೈದ್ಯರ ನಿರ್ಲಕ್ಷ್ಯದಿಂದ ಮಗುವಿಗೆ ಜನ್ಮ ನೀಡಿ ಬಾಣಂತಿ ಸಾವನ್ನಪ್ಪಿದ ಅಮಾನವೀಯ ಘಟನೆ ಪಟ್ಟಣದ ಮಾತೃ ಶ್ರೀ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ.
ತಾಲ್ಲೂಕಿನ ರಾಜವಂತಿ ಗ್ರಾಮದ ರಾಜೇಂದ್ರ ಎಂಬುವರ ಪತ್ನಿ ಹೇಮಲತಾ (24) ಎರಡನೆ ಹೆರಿಗೆಗಾಗಿ ಡಾ.ಜಗದೀಶ್ ಒಡೆತನದ ಮಾತೃ ಶ್ರೀ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಬೆಳಗ್ಗೆ ಸಹಜ ಹೆರಿಗೆಯಾಗಿದೆ. ಆದರೂ ಕೂಡ ವೈದ್ಯರ ನಿರ್ಲಕ್ಷ್ಯದಿಂದ ಹೇಮಲತಾ ಸಾವನ್ನಪ್ಪಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಹೆರಿಗೆಯಾದ ತಕ್ಷಣ ಹೇಮಲತಾ ಸಾವನ್ನಪ್ಪಿದ್ದಾರೆ. ಆದರೂ ಮೃತ ದೇಹಕ್ಕೆ ಆ್ಯಕ್ಸಿಜನ್ ನೀಡಿ, ಹೆರಿಗೆ ಸಮಯದಲ್ಲಿ ಹೆಚ್ಚು ರಕ್ತ ಸೋರಿಕೆಯಿಂದ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಈಕೆಯನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಕಥೆ ಕಟ್ಟಿ ತರಾತುರಿಯಲ್ಲಿ ಸತ್ತ ಬಾಣಂತಿಯನ್ನು ಆಸ್ಪತ್ರೆಯಿಂದ ಹೊರಗೆ ಸಾಗಿಸುವ ಪ್ರಯತ್ನ ನಡೆದಿದೆ. ಆಗ ಮೃತ ಹೇಮಲತಾ ಸಂಬಂಧಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದು, ಹೇಮಲತಾ ನಾಡಿಯನ್ನು ಪರೀಕ್ಷಿಸಿ ಸಾವನ್ನಪ್ಪಿರುವುದಾಗಿ ದೃಢ ಪಡಿಸಿದಾಗ, ವೈದ್ಯರ ಬಣ್ಣ ಬಯಲಾಗಿದೆ. ಸಂಬಂಧಿಯಿಂದ ನಾಡಿ ಪರೀಕ್ಷೆ ನಡೆದು, ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ರವಾನಿಸುವ ವೇಳೆ ಮಾರ್ಗ ಮಧ್ಯೆ ಹೇಮಲತಾ ಮೃತಪಟ್ಟಿದ್ದಾರೆ ಎಂದು ಬಿಂಬಿಸಿ ಪ್ರಕರಣದಿಂದ ಬಚಾವಾಗುವ ವೈದ್ಯರ ಪ್ರಯತ್ನ ಫಲಿಸಿಲ್ಲ.
ಮೃತ ಹೇಮಲತಾ ಸಾವಿನಿಂದ ಆಸ್ಪತ್ರೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರ ಪತಿ ನೊಂದು ಆಸ್ಪತ್ರೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ ಮಾಡಿದ ಘಟನೆಯೂ ನಡೆದಿದೆ. ಘಟನೆಯ ಸಂಬಂಧ ಪಟ್ಟಣದ ಪೋಲೀಸರು ಆಸ್ಪತ್ರೆಗೆ ಹೆಚ್ಚು ರಕ್ಷಣೆ ನೀಡಿ, ಇಡೀ ತಾಲ್ಲೂಕಿಗೆ ತುಂಬಲಾರದ ನಷ್ಟವುಂಟಾಗುತ್ತದೆ ಎಂಬಂತೆ ಆಸ್ಪತ್ರೆಗೆ ವಿಐಪಿಗಳಿಗೆ ನೀಡುವ ಭದ್ರತೆ ನೀಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ