ಹೊಸಪೇಟೆ :
ನಗರದ ಸಂಕ್ಲಾಪುರ, 24ನೇ ವಾರ್ಡ್, ಮತ್ತು 27ನೇ ವಾರ್ಡುಗಳಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ರಾಣಿ ಸಂಯುಕ್ತಾರವರು ಪಾದಯಾತ್ರೆ ಮೂಲಕ ಸಂಚರಿಸಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಪರವಾಗಿ ಶುಕ್ರವಾರ ಭರ್ಜರಿ ಪ್ರಚಾರ ನಡೆಸಿದರು.
ನಗರದ ಚಪ್ಪರದಳ್ಳಿಯ ಗಣೇಶ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಬಳಿಕ ವಿವಿಧ ವಾರ್ಡುಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.
ಈ ವೇಳೆ ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿ ದೇವೇಂದ್ರಪ್ಪನವರು ಸರಳ ಸಜ್ಜನಿಕೆವುಳ್ಳ ವ್ಯಕ್ತಿಯಾಗಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಮನೋಭಾವನೆವುಳ್ಳವರಾಗಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಪ್ರಬಲವಾಗಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಆಡಳಿತ ನೀಡಿದ್ದಾರೆ. ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಕ್ಷೇತ್ರದ ಮತದಾರರು ಮೋದಿಯವರ ಅಭಿವೃದ್ದಿ ಕೆಲಸ ನೋಡಿ ಮತ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಪಕ್ಷದ ಮುಖಂಡರಾದ ದೇವರಮನೆ ಶ್ರೀನಿವಾಸ, ಜಂಬಾನಳ್ಳಿ ವಸಂತ, ಗೋವಿಂದರಾಜ, ಹನುವಾಳ ದೇವರಾಜ, ಮಹಿಳಾ ಮೋರ್ಚಾದ ಅಧ್ಯಕ್ಷೆ ಯೋಗಲಕ್ಷ್ಮಿ, ಹನುಮಂತಪ್ಪ, ಮಾಧ್ಯಮ ಸಂಚಾಲಕ ಶಂಕರ ಮೇಟಿ ಸೇರಿದಂತೆ ಪ್ರಚಾರದಲ್ಲಿ ನೂರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.