ಚಿತ್ರದುರ್ಗ;
ಇಲ್ಲಿನ ಗಾಂಧಿವೃತ್ತದಲ್ಲಿ ಭಾನುವಾರ ಬೆಳಿಗ್ಗೆ ರಸ್ತೆ ಬದಿಯ ಗೂಡಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ನಗರಸಭೆ ಸಿಬ್ಬಂದಿ ಚಾಲನೆ ನೀಡಿದ್ದಾರೆ ನಗರಸಭೆಯ ಪೌರಾಯುಕ್ತ ಸಿ.ಚಂದ್ರಪ್ಪ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಜೆಸಿಬಿ ಯಂತ್ರಗಳ ಮೂಲಕ ಗಾಂಧಿವೃತ್ತವೂ ಸೇರಿದಂತೆ ಇನ್ನಿತರೆ ಕಡೆ ನಿರ್ಮಿಸಿಕೊಂಡಿದ್ದ ಶೇಡ್, ಗೂಡಂಗಡಿಗಳನ್ನು ತೆರವುಗೊಳಿಸಿದರು. ವ್ಯಾಪಾರಿಗಳ ಭಾರೀ ವಿರೋಧದ ನಡೆವೆಯೂ ತೆರವು ಕಾರ್ಯಾಚರಣೆ ಮುಂದುವರೆಯಿತು
ಹೊಳಲ್ಕೆರೆ ರಸ್ತೆ, ಗಾಂಧಿವೃತ್ತ ಮತ್ತು ಮೆದೇಹಳ್ಳಿ ರಸ್ತೆಯ ಎರಡೂ ಬದಿಯಲ್ಲಿ ಹಾಕಿಕೊಂಡಿದ್ದ ಶೇಡ್‍ಗಳನ್ನು ಹಾಗೂ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ನಗರಸಭೆ ಈ ಹಿಂದೆಯೇ ಸೂಚನೆ ನೀಡಿತ್ತು. ಆದರೆ ವ್ಯಾಪಾರಿಗಳು ಯಾರು ಸಹ ತೆರವುಗೊಳಿಸಿರಲಿಲ್ಲ
ಭಾನುವಾರ ಮುಂಜಾನೆ ಜೆಸಿಬಿಯ ಸಮೇತ ಹಾಜರಾದ ಸಿಬ್ಬಂದಿಗಳು ಎಲ್ಲಾ ಗೂಡಂಗಡಿಗಳನ್ನು ಕೆಡವಿ ನೆಲಸಮ ಮಾಡಿದರು.
ವ್ಯಾಪಾರಿಗಳ ವಿರೋಧ;
ನಗರಸಭೆ ಸಿಬ್ಬಂದಿ ಏಕಾಏಕಿ ಗೂಡಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದರು. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಇದ್ದಕ್ಕಿದ್ದಂತೆ ತೆರವು ಗೊಳಿಸಿದರೆ ನಾವು ಎಲ್ಲಿಗೆ ಹೋಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು
ಸ್ಥಳೀಯ ಮುಖಂಡ ಖಾಸಿಂ ಆಲಿ ಅವರು ವ್ಯಾಪಾರಿಗಳ ಪರವಾಗಿ ನಿಂತು ಬೀದಿ ಬದಿಯಲ್ಲಿ ವ್ಯಾಪಾರ ಮಾಡಿಕೊಂಡಿರುವ ಇವರನ್ನು ತೆರವುಗೊಳಿಸುವುದು ತರವಲ್ಲ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಇಲ್ಲಿ ಸುಮಾರು 50ರಿಂದ 60 ವ್ಯಾಪಾರಿಗಳು ಇದ್ದಾರೆ. ಇದನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಇವರಿಗೆ ತೊಂದರೆ ಕೊಡುವುದು ಬೇಡ. ಪರ್ಯಾಯ ವ್ಯವಸ್ಥೆಗೆ ನಗರಸಭೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು