ಚಿತ್ರದುರ್ಗ:
ಮೂವತ್ತೇಳು ಕೋಟಿ ರೂ.ವೆಚ್ಚದಲ್ಲಿ ರಸ್ತೆ ಕಾಮಗಾರಿಗಳಿಗೆ ಸೋಮವಾರ ಪೂಜೆ ಸಲ್ಲಿಸಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
ನಗರದ ಎಂಟನೇ ವಾರ್ಡ್ ಮರ್ಚೆಂಟ್ ಬ್ಯಾಂಕ್ ಸಮೀಪ ಜೈನ್ ಕಾಲೋನಿಯಲ್ಲಿ ಭಾನುವಾರ 40 ಲಕ್ಷ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಜೈನ್ ಜನಾಂಗ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅಲ್ಪಸಂಖ್ಯಾತರ ಇಲಾಖೆಯಿಂದ ರಸ್ತೆ ಕಾಮಗಾರಿಗೆ ಹಣ ಬಿಡುಗಡೆ ಮಾಡಲಾಗಿದೆ. ಎಸ್.ಸಿ.ಪಿ., ಟಿ.ಎಸ್.ಪಿ., ಯೋಜನೆ ಹಾಗೂ ಅಲ್ಪಸಂಖ್ಯಾತರ ಇಲಾಖೆಯಿಂದ ರಸ್ತೆ ಕಾಮಗಾರಿಗೆ ಹಣ ಮಂಜೂರು ಮಾಡಲಾಗಿದೆ.
ಚಳ್ಳಕೆರೆ ಗೇಟ್‍ನಿಂದ ಪ್ರವಾಸಿಮಂದಿರದವರೆಗೆ, ಐ.ಬಿ.ಯಿಂದ ಗಾಂಧಿ ಸರ್ಕಲ್, ಗಾಂಧಿ ಸರ್ಕಲ್‍ನಿಂದ ಸಂಗೊಳ್ಳಿರಾಯಣ್ಣ ವೃತ್ತ, ಸಂಗೊಳ್ಳಿರಾಯಣ್ಣ ವೃತ್ತದಿಂದ ಕನಕವೃತ್ತ, ಕನಕವೃತ್ತದಿಂದ ಮಾಳಪ್ಪನಹಟ್ಟಿ ವೃತ್ತದವರೆಗೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು. ನಗರಸಭೆ ಸದಸ್ಯರುಗಳಾದ ಶಶಿಧರ, ಹರೀಶ್, ಸುರೇಶ್, ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷರಾದ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ, ರೇಖ, ರಾಜು, ಜಯಣ್ಣ ಸೇರಿದಂತೆ ಜೈನ್ ಕಾಲೋನಿ ನೀಲಕಂಠೇಶ್ವರ ಬಡಾವಣೆಯ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.