ಬಡವರ ಮನೆಬಾಗಿಲಿಗೆ ಪಡಿತರ ಚೀಟಿ ವಿತರಣೆ

ಬಳ್ಳಾರಿ

  ಮೂರು ವರ್ಷಗಳಿಂದ ಪಡಿತರ ಚೀಟಿಗಾಗಿ ಪರಿತಪಿಸುತ್ತಿದ್ದ ಮತ್ತು ಕಚೇರಿ ಅಲೆದು ಸುಸ್ತಾಗಿದ್ದ ಬಳ್ಳಾರಿಯ ಕೋಟಾಲಪಲ್ಲಿಯ 81 ವರ್ಷದ ಮುತ್ಯಾಲಮ್ಮನ ಸಂತಸಕ್ಕೆ ಮಂಗಳವಾರ ಪಾರವೇ ಇರಲಿಲ್ಲ. ಇದಕ್ಕೆ ಕಾರಣಿಕರ್ತವಾಗಿದ್ದು ಅವರಿಗೆ ಸ್ಥಳದಲ್ಲಿಯೇ ದೊರಕಿದ ಹೊಸ ಪಡಿತರ ಚೀಟಿ. ಮುತ್ಯಾಲಮ್ಮನ ಕೈಗೆ ಪಡಿತರ ಚೀಟಿ ನೀಡಿದಾಗ ಆ ದಣಿದ ಜೀವದ ಸಂತಸ ಹೇಳತೀರದಂತಿತ್ತು.

   ನಗರದ ಕೋಟಾಲಪಲ್ಲಿ ಕೊಳಚೆ ಪ್ರದೇಶದಲ್ಲಿ ಆಹಾರ,ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ವತಿಯಿಂದ ಬಡವರ ಮನೆ ಬಾಗಿಲಿನಲ್ಲಿಯೇ ಪಡಿತರ ಸಮಸ್ಯೆಗಳನ್ನು ಪರಿಹರಿಸುವ ಕ್ಷಿಪ್ರ ಕಾರ್ಯಕ್ರಮದಲ್ಲಿ ಇಂತಹ ಅನೇಕರಿಗೆ ಪಡಿತರ ಚೀಟಿಗಳನ್ನು ಸ್ಥಳದಲ್ಲಿಯೇ ಒದಗಿಸಲಾಯಿತು. ಮುತ್ಯಾಲಮ್ಮನಂತೆಯೇ ಪಡಿತರ ಚೀಟಿ ಪಡೆದ ವಿಕಲಾಂಗ ಚೇತನ ಆಟೊ ಮಲ್ಲಿಕಾರ್ಜುನ ಕೂಡ ಸಂತಸದಿಂದ ಕೈಮುಗಿದ. ಕೊಳಗೇರಿಗಳಲ್ಲಿ ಬದುಕು ಕಟ್ಟಿಕೊಂಡಿರುವವರ ಮನೆ ಬಾಗಿಲಿನಲ್ಲಿಯೇ ಅನ್ನಭಾಗ್ಯದ ಆಸೆ ಈಡೇರಿದ್ದ ಕಂಡು ಜನ ಸಂತಸಗೊಂಡರು.

      ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಹಿರಿಯ ಉಪನಿರ್ದೇಶಕ ಕೆ.ರಾಮೇಶ್ವರಪ್ಪ ಅವರು ಸತ್ಯನಾರಾಯಣಪೇಟೆ, ಪಟೇಲ್ ನಗರ, ಹುಸೇನ್ ನಗರ, ಕೊಟಾಲಪಲ್ಲಿ, ಡಿ.ಎ.ಆರ್ ವಸತಿ ನಿಲಯ ಸೇರಿದಂತೆ ಇನ್ನೀತರ ಬಡಾವಣೆಗಳಲ್ಲಿ ಕೆಲಸ ಮಾಡುತ್ತಿರುವ 04 ನ್ಯಾಯ ಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಹೊಸ ಪಡಿತರ ಚೀಟಿ, ತಿದ್ದುಪಡಿ ವಿಷಯಗಳು ಮತ್ತು ಪಡಿತರ ವಿತರಣೆ ವಿಷಯಗಳ ಬಗ್ಗೆ ಸ್ಥಳದಲ್ಲಿಯೇ ಪರಿಶೀಲಿಸಿ ಇತ್ಯರ್ಥಪಡಿಸಿದರು.

     ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲಾಗದವರಿಂದ ಸ್ಥಳದಲ್ಲಿಯೇ ಆನ್‍ಲೈನ್ ಅರ್ಜಿಗಳನ್ನು ಸ್ವೀಕರಿಸಿ ಹೊಸ ಪಡಿತರ ಚೀಟಿಗಳನ್ನು ಇದೇ ಸಂದರ್ಭದಲ್ಲಿ ಅವರು ವಿತರಿಸಿದರು.ಈಗಾಗಲೇ ಅರ್ಜಿ ಸಲ್ಲಿಸಿದ್ದವರ ಅರ್ಜಿಗಳನ್ನು ಇದೇ ಸಂದರ್ಭದಲ್ಲಿ ವಿಲೇವಾರಿ ಮಾಡಿದ ಅವರು ಪಡಿತರ ಚೀಟಿಗಳಲ್ಲಿನ ತಿದ್ದುಪಡಿಗಳನ್ನು ಮಾಡಿಕೊಟ್ಟಿದ್ದು ವಿಶೇಷ.

     ಈ ಸಂದರ್ಭದಲ್ಲಿ ಅನೇಕ ಪಡಿತರ ಸಂಬಂಧಿತ ಸಮಸ್ಯೆಗಳನ್ನು ಆಹಾರ ಇಲಾಖೆಯ ಹಿರಿಯ ಉಪನಿರ್ದೇಶಕರಾದ ಡಾ.ಕಾ.ರಾಮೇಶ್ವರಪ್ಪ ಅವರು ಬಗೆಹರಿಸಿದರು.ಈ ಸಂದರ್ಭದಲ್ಲಿ ಬಳ್ಳಾರಿ ನಗರದ ಆಹಾರ ಇಲಾಖೆಯ ಸಹಾಯಕ ನಿರ್ದೇಶಕರಾದ ಹಲೀಮಾ, ಆಹಾರ ನಿರೀಕ್ಷಕರಾದ ರವಿ ರಾಠೋಡ್, ಆದಿಶೇಷ ಅಂಬೇಡ್ಕರ್ ಸೇರಿದಂತೆ ಇತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link