ರಾಣೇಬೆನ್ನೂರು
ತಾಲೂಕಿಗೆ ಸಂಬಂಧಿಸಿದಂತೆ ತಿರಸ್ಕೃತಗೊಂಡ ಅರಣ್ಯ ಹಕ್ಕುಗಳ ಅರ್ಜಿಗಳನ್ನು ಪರಶೀಲಿಸಿ ಕ್ರಮ ವಹಿಸಲಾಗುವುದು ಎಂದು ತಹಶೀಲದಾರ ಸಿ.ಎಸ್.ಕುಲಕರ್ಣಿ ಭರವಸೆ ನೀಡಿದರು.
ನಗರದ ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾವೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಾವೇರಿ ಉಪ ವಿಭಾಗ ಮಟ್ಟದ ಅರಣ್ಯ ಹಕ್ಕು ಸಮೀತಿ ಸಭೆಯ ಪುನರ್ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಬಗರ್‍ಹುಕಂ ಸಾಗುವಳಿ ಮಾಡುವ ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು. ರಾಣೇಬೆನ್ನೂರು ತಾಲೂಕಿನ ಕಂದಾಯ ಇಲಾಖೆಯ ಜಮೀನು ಅರಣ್ಯ ಇಲಾಖೆಗೆ ಹಸ್ತಾಂತರವಾಗಿದೆ ಎಂಬ ಮಾಹಿತಿ ಮೇರೆಗೆ ಕುಲಂಕುಶವಾಗಿ ಪರಿಶೀಲಿಸಿ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರೈತ ಮುಖಂಡ ಹನುಮಂತಪ್ಪ ದೀವಗಿಹಳ್ಳಿ ಮಾತನಾಡಿ, ಸುಮಾರು 5 ಸಾವಿರ ಎಕರೆ ಕಂದಾಯ ಇಲಾಖೆಯಲ್ಲಿನ ಭೂಮಿಯು ಅರಣ್ಯ ಇಲಾಖೆಗೆ ಹಸ್ತಾಂತರವಾಗಿ ಗೊಂದಲ ಸೃಷ್ಠಿಯಾಗಿದ್ದು ಕೇವಲ ತಾಲೂಕಿನ ಸಮಸ್ಯೆ ಅಷ್ಟೇ ಅಲ್ಲ 19 ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಉಂಟಾಗಿದೆ. ತಾಲೂಕಿನ ರೈತರು ಎಷ್ಠೇ ಹೋರಾಟ ಮಾಡಿದರೂ ಇದು ವರೆಗೂ ನ್ಯಾಯ ಸಿಗುತ್ತಿಲ್ಲಾ. ಪ್ರತೀ ಜಿಲ್ಲೆಗೆ 1.25 ಲಕ್ಷ ರೂ. ಹಣವನ್ನು ಇಲಾಖೆಗೆ ಮಂಜೂರ ಮಾಡಿ ಅರಣ್ಯ ಭೂಮಿ ಸಾಗುವಳಿ ಮಾಡುವ ರೈತರಿಗೆ ಸಭೆ, ಸಮಾರಂಭ ಮಾಡಿ ಮಾಹಿತಿ ಒದಗಿಸುವ ಜವಾಬ್ಧಾರಿ ಅಧಿಕಾರಿಗಳದ್ದು ಆದರೆ ಇದುವರೆಗೂ ಸಂಪೂರ್ಣ ಮಾಹಿತಿ ನೀಡಿರುವುದಿಲ್ಲ ಎಂದರು.
ಈ ವಿಚಾರವಾಗಿ ಪ್ರತೀ ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಾಗೃತಿ ಆಗಬೇಕು. ಕೇಂದ್ರ ಸರ್ಕಾರವು ರೈತರಿಗೆ 75 ವರ್ಷಗಳ ಹಿಂದಿನ ದಾಖಲಾತಿ ಕೇಳುವುದು ಅವೈಜ್ಞಾನಿಕ ಕ್ರಮವಾಗಿದೆ. ಅದನ್ನು ರದ್ದುಗೊಳಿಸಿ 25 ವರ್ಷಕ್ಕೆ ನಿಗಧಿ ಮಾಡಬೇಕೆಂದರು. ರಾಣೇಬೆನ್ನೂರು ತಾಲೂಕಿನ ಕಂದಾಯ ಇಲಾಖೆಯ ಜಮೀನು ಅರಣ್ಯ ಇಲಾಖೆ ಹಸ್ತಾಂತರವಾಗಿದೆ ಇದನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಿ ಕೊಡಬೇಕೆಂದರು. ಸದ್ಯದಲ್ಲಿ ನ್ಯಾಯಾಲಯ ತೀರ್ಪು ಹೊರ ಬೀಳಲಿದ್ದು ಬಳಿಕ ನ್ಯಾಯ ದೊರೆಯದಿದ್ದರೆ ಜಿಲ್ಲಾ ಕೇಂದ್ರದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ಧೇಶಕಿ ಲಲಿತಾ ಹಾವೇರಿ ರೈತರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು ಎಂದರು. ಉಪವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನ, ಆರ್.ಎಮ್.ಕನವಳ್ಳಿ, ಗಿರೀಶ ಮುಡಿಯಮ್ಮನವರ ಸೇರಿದಂತೆ ರೈತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








