ಗುಬ್ಬಿ
ಗ್ರಾಮೀಣ ಪ್ರಧೇಶಗಳಲ್ಲಿ ಸಮರ್ಪಕ ಶುಧ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನಿಗಧಿತ ಅವಧಿಯಲ್ಲಿ ಕಲ್ಪಿಸುವುದರ ಜೊತೆಗೆ ಗ್ರಾಮೀಣ ಜನರ ಸಮಸ್ಯೆಗಳ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯ್ತಿ ಆವರಣದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಸಭೆ ನಡೆಸಿದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಗ್ರಾಮೀಣ ಜನರಿಗೆ ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳನ್ನು ನಿಯಮಾನುಸಾರ ತಲುಪಿಸುವತ್ತ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಅಲ್ಲದೆ ಕುಡಿಯುವ ನೀರಿನಂತಹ ತ್ವರಿತ ಸಮಸ್ಯೆಗಳಿದ್ದರೆ ಕೂಡಲೆ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುವತ್ತ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ ಅದನ್ನು ಸಂಬಂಧಿಸಿದ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಯಾವುದೆ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು ಈ ಬಗ್ಗೆ ಅಗತ್ಯ ಎಚ್ಚರಿಕೆ ವಹಿಸುವಂತೆ ಸೂಚಿದರು. ನಿಟ್ಟೂರಿನ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ನೀರು ಶುದ್ದವಾದ ನಂತರ ವ್ಯರ್ಥವಾದ ನೀರು ಚರಂಡಿಗೆ ಹರಿಯುತ್ತಿರುವುದನ್ನು ಗಮನಿಸಿದ ಸಿಇಒ ನೀರಿಲ್ಲದ ಕಾಲದಲ್ಲಿ ಅನಗತ್ಯವಾಗಿ ನೀರನ್ನು ವ್ಯರ್ಥ ಮಾಡುವುದು ಸರಿಯಲ್ಲ ಇದನ್ನು ಗೃಹೋಪಯೋಗಿಯಾಗಿ ಬಳಕೆ ಮಾಡಿಕೊಳ್ಳಿ ಇಲ್ಲದಿದ್ದರೆ ಆ ನೀರನ್ನು ಬಳಸಿಕೊಂಡು ಸಸಿಗಳನ್ನು ಬೆಳೆಸುವಂತಹ ಕೆಲಸ ಮಾಡಿ ಎಂದು ತಿಳಿಸಿದರು.
ನಂತರ ಸೋಪನಹಳ್ಳಿ ಅರಣ್ಯ ಇಲಾಖೆಯ ನರ್ಸರಿಗೆ ಬೇಟಿ ನೀಡಿ ಸೀಡ್ ಬಾಲ್‍ಗಳನ್ನು ತಯಾರು ಮಾಡಿ ಅರಣ್ಯ ಬೆಳೆಸುವಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಅರಣ್ಯಗಳ ಸಂರಕ್ಷಣೆ ಮತ್ತು ಗಿಡಮರಗಳ ರಕ್ಷಣೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಗಮನಹರಿಸುವಂತೆ ತಿಳಿಸಿದರು. ನಂತರ ಕೊಂಡ್ಲಿಕ್ರಾಸ್‍ಗೆ ಭೇಟಿ ನೀಡಿ ಅಲ್ಲಿನ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದು ತ್ವರಿತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಗ್ರಾಮ ಪಂಚಾಯ್ತಿ ಅಭಿವೃಧ್ದಿ ಅಧಿಕಾರಿಗೆ ಸೂಚಿಸಿದರು.
ತಾಲ್ಲೂಕಿನ ಕಡಬ ಹೋಬಳಿ ಪೆದ್ದನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಜನತೆ ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆಸುತ್ತಿರುವ ವಿಚಾರ ತಿಳಿದ ಕೂಡಲೆ ಅಲ್ಲಿನ ಸಮಸ್ಯೆಯನ್ನು ತ್ವರಿತವಾಗಿ ಬಗೆ ಹರಿಸುವಂತೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಸಂಬಂಧಿಸಿದ ಇಂಜಿನಿಯರ್ ಅವರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿಗಳ ಅಭಿವೃದ್ದಿ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
