ನೊಂದವರ ಕಣ್ಣಿರು ಒರೆಸಲು ರೆಡ್ ಕ್ರಾಸ್ ಸದಾ ಸಿದ್ದವಾಗಿರುತ್ತದೆ..!

ತುಮಕೂರು

    ಎಲ್ಲಾ ರೀತಿಯ ವಿಶೇಷ ಚೇತನರು ಸರ್ಕಾರದ ಮತ್ತು ಇತರೆ ಸಂಸ್ಥೆಗಳ ಸಹಕಾರ ಪಡೆದು ಸಮಾಜದಲ್ಲಿ ಎಲ್ಲರಂತೆ ಸರಿ ಸಮಾನರಾಗಿ ಬಾಳಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ರೆಡ್‍ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷರಾದ ಶುಭಾ ಕಲ್ಯಾಣ್ ಆಶಯ ವ್ಯಕ್ತಪಡಿಸಿದರು.

     ನಗರದ ರೆಡ್‍ಕ್ರಾಸ್ ಸಂಸ್ಥೆಯ ವಾಕ್-ಶ್ರವಣದೋಷ ಶಾಲೆಯಲ್ಲಿ ನಡೆದ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ತುಮಕೂರು ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್‍ರವರು ಮತ್ತು ಛೇರ್ಮನ್‍ರವರಾದ ಎಸ್. ನಾಗಣ್ಣನವರು ಮತ್ತು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು ಮತ್ತು ಸಿಬ್ಬಂದಿಯವರ ನೇತೃತ್ವದಲ್ಲಿ ಆಗಿರುವ ಸಂಸ್ಥೆಯ ಎಲ್ಲಾ ಸಾಧನೆಗಳು ಶ್ಲಾಘನೀಯವೆಂದು ಹೇಳಿದರು. ಈ ಶಾಲೆಗೆ ಜಿಲ್ಲಾ ಪಂಚಾಯ್ತಿವತಿಯಿಂದ ಒಂದು ಕೊಳವೆ ಬಾವಿಯನ್ನು ಕೊರೆಸಿ ಕೊಡುವ ಭರವಸೆ ನೀಡಿದರು.

     ಪ್ರೊ. ಶ್ರೀದೇವಿ ಪಟ್ಟೆದಾರ್‍ರವರು ಶಾಲೆಗೆ ಒಂದು ಲಕ್ಷ ರೂಪಾಯಿ ದೇಣಿಗೆಯ ಚೆಕ್ ನೀಡಿದ್ದು ಮತ್ತು ಆನಂದ್ ರಾವ್‍ರವರು ಶಾಲೆಯ ಉಪಯೋಗಕ್ಕೆ 3 ಡಸ್ಟ್ ಬಿನ್‍ಗಳನ್ನು ನೀಡಿದ್ದು ಇವುಗಳನ್ನು ಶಾಲೆಯ ಮುಖ್ಯಸ್ಥರಾದ ಪ್ರೊ ಕೆ.ಚಂದ್ರಣ್ಣ ಮತ್ತು ಮುಖ್ಯೋಪಾಧ್ಯಾಯರಾದ ಲಕ್ಷೀಕಾಂತ್‍ರವರಿಗೆ ಹಸ್ತಾಂತರಿಸಿದರು. ಈ ಶಾಲೆಯಲ್ಲಿ 115 ಗಂಡು ಮತ್ತು ಹೆಣ್ಣು ಮಕ್ಕಳು ಗುಣಮಟ್ಟದ ವಿದ್ಯೆ ಪಡೆಯುತ್ತಿದ್ದು, ಪ್ರಕೃತಿಯ ವಾತಾವರಣದಲ್ಲಿ ಬೆಟ್ಟದ ತಪ್ಪಲಲ್ಲಿ, ಸುಸರ್ಜಿತ ಉಚಿತವಾದ ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಒದಗಿಸಲಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಯಲ್ಲಿ ಪ್ರತಿ ವರ್ಷ ಶೇ.90 ರಷ್ಟು ಫಲಿತಾಂಶ ಪಡೆಯುತ್ತಿದ್ದು, ಇವರುಗಳು ತೇರ್ಗಡೆಯಾದ ನಂತರ ಮೈಸೂರಿನ ಜೆ.ಎಸ್.ಎಸ್. ಸಂಸ್ಥೆಯಲ್ಲಿ ಅವರಿಗೆ ದಾನಿಗಳ ಸಹಕಾರದಿಂದ ತಾಂತ್ರಿಕ ಶಿಕ್ಷಣ ನೀಡಲಾಗುತ್ತಿದೆ.

     ಜಿಲ್ಲಾ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ, ಛೇರ್ಮನ್ ಹಾಗೂ ರಾಜ್ಯದ ಸಂಸ್ಥೆಯ ಸಭಾಪತಿಗಳಾದ ಸ್.ನಾಗಣ್ಣರವರು ಮಾತನಾಡಿ, ಇಡೀ ದೇಶದಲ್ಲಿಯೇ ತುಮಕೂರು ಜಿಲ್ಲಾ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯು ಅತೀ ಹೆಚ್ಚು ಚರಾಸ್ತಿ ಮತ್ತು ಸ್ಥಿರಾಸ್ತಿ ಹೊಂದಿರುವಂತಹ ಸಂಸ್ಥೆಯಾಗಿದೆ. ಈ ಸಂಸ್ಥೆಗೆ ಅನೇಕ ದಾನಿಗಳು ಸ್ವಯಂ ಪ್ರೇರಿತವಾಗಿ ಆಗಮಿಸಿ ಸಹಾಯ ಹಸ್ತ ನೀಡುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ.

     ವಿಶೇಷವಾಗಿ ಇತ್ತೀಚೆಗೆ ರಾಜ್ಯದಲ್ಲಿ ಮಳೆಯ ಹಾನಿಯಿಂದ ಉಂಟಾದ ಕಷ್ಟ-ನಷ್ಟಗಳಿಗೆ ಬಲಿಯಾದ ನೆರೆ ಸಂತ್ರಸ್ಥರಿಗೆ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು ಜಾತಿ-ಮತ ಬೇದವಿಲ್ಲದೆ ಸಾರ್ವಜನಿಕರು ಉತ್ಸಾಹ-ಉಲ್ಲಾಸದಿಂದ ಆಗಮಿಸಿ ನೆರೆ ಸಂತ್ರಸ್ಥರಿಗೆ ನಾಲ್ಕು ಕೋಟಿ ರೂ.ಗಳಿಗಿಂತಲು ಹೆಚ್ಚು ಮೌಲ್ಯದ ಅಗತ್ಯವಿರುವ ವಸ್ತುಗಳನ್ನು ನೀಡಿದ್ದು ಇವುಗಳನ್ನು ರೆಡ್‍ಕ್ರಾಸ್ ಸಂಸ್ಥೆಯ ವಾಕ್-ಶ್ರವಣದೋಷವುಳ್ಳ ಶಾಲೆಯ ಮಕ್ಕಳು ವಸ್ತುಗಳನ್ನು ವಿಂಗಡಿಸಿ ಪ್ರತ್ಯೇಕ ಚೀಲಗಳಲ್ಲಿ ತುಂಬಿ ನೆರೆ ಸಂತ್ರಸ್ತರಿಗೆ ತಲುಪಿಸಲಾಯಿತು ಎಂದು ಹೇಳಿದರು.

      ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಓದು-ಬರಹ ವಸ್ತುಗಳನ್ನು ಪ್ರತ್ಯೇಕವಾಗಿ ಚೀಲಗಳಲ್ಲಿ ತುಂಬಿ ಅರ್ಹ ವಿದ್ಯಾರ್ಥಿಗಳಿಗೆ ಮತ್ತು ಇತರೆ ನೆರೆ ಸಂತ್ರಸ್ತರಿಗೆ ಛೇರ್ಮನ್‍ರವರಾದ ಎಸ್.ನಾಗಣ್ಣರವರು ಬೆಳಗಾಂ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ವಿತರಿಸಿದರು. ಶ್ರವಣದೋಷವುಳ್ಳ ಶಾಲೆಯ ಸಂಸ್ಥಾಪಕರಾದ ಡಾ|| ಟಿ.ಎಸ್ ಮಲ್ಲಿಕಾರ್ಜುನಯ್ಯರವರ ಸೇವೆಯನ್ನು ಶ್ಲಾಘಿಸಿದರು.

     ಮಾಜಿ ಕಾರ್ಯದರ್ಶಿ ಶ್ರೀ ಟಿ.ಎಂ ಸ್ವಾಮಿರವರು ರಕ್ತನಿಧಿ ಕೇಂದ್ರವನ್ನು ಸ್ಥಾಪನೆ ಮಾಡುವಂತೆ ಸಲಹೆ ನೀಡಿದರು.
ಸಮಾಜಸೇವಕರಾದ ಪಾರಸ್‍ಮಲ್‍ರವರು ತಮ್ಮ 75ನೇ ವರ್ಷದ ಜನ್ಮ ದಿನವನ್ನು ಶಾಲೆಯ ಮಕ್ಕಳೊಂದಿಗೆ ಆಚರಿಸಿಕೊಂಡು 75 ಸಾವಿರ ರೂ.ಗಳ ದೇಣಿಗೆಯನ್ನು ಶಾಲೆಗೆ ನೀಡಿದ್ದು, ಮತ್ತು ಅವರ 76ನೇ ಸಾಲಿನ ಜನ್ಮ ದಿನವೂ ಸಹ ಇದೇ ಶಾಲೆಯಲ್ಲಿ ಆಚರಿಸುವ ಆಶಯ ವ್ಯಕ್ತಪಡಿಸಿ ಅಂದು ಶಾಲೆಗೆ 76000/- ರೂ.ಗಳ ಧನ ಸಹಾಯ ನೀಡುವ ಭರವಸೆಯನ್ನು ನೀಡಿದ್ದು, ಇದನ್ನು ಸರ್ವಸದಸ್ಯರು ಮೆಚ್ಚುಗೆಯಿಂದ ಒಪ್ಪಿದರು.

     ಸಂಸ್ಥೆಯ ಜಂಟಿ ಕಾರ್ಯದರ್ಶಿ ಹಾಗೂ ಕೈಗಾರಿಕೋದ್ಯಮಿ ಹೆಚ್.ಜಿ ಚಂದ್ರಶೇಖರ್‍ರವರು ಜಿಲ್ಲಾ ಅಂಗವಿಕಲರ ಪುನರ್ ವಸತಿ ಕೇಂದ್ರವು ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿ ಮತ್ತು ಭವಿಷ್ಯದಲ್ಲಿ ಅಂಗವಿಕಲರಿಗೆ ಸಮಸ್ಯೆಯಿಂದ ವಿಶೇಷವಾದ ಸೌಲಭ್ಯಗಳನ್ನು ಒದಗಿಸಲು ಕಾರ್ಯಕ್ರಮ ರೂಪಿಸುವಂತೆ ಸಲಹೆ ನೀಡಿದರು.

     ವಕೀಲರಾದ ಮಲ್ಲಿಕಾರ್ಜುನಯ್ಯರವರು, ತುಮಕೂರಿನ ರೆಡ್‍ಕ್ರಾಸ್ ಸಂಸ್ಥೆಯು ಇದರ ಎಲ್ಲಾ ಪದಾಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರ ಸಹಯೋಗದೊಂದಿಗೆ ಅತ್ಯುತ್ತಮ ಸೇವೆ ಮಾಡುತ್ತಿರುವ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಸುಭಾಷಿಣಿ ರವೀಶ್ ಪ್ರಾರ್ಥಿಸಿದರು.

    ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ಎಸ್. ನಾಗಣ್ಣನವರು ಸ್ವಾಗತಿಸಿದರು, ಸಾಗರನಹಳ್ಳಿ ಪ್ರಭು ಸಭೆಯ ಸೂಚನಾ ಪತ್ರವನ್ನು ಓದಿದರು, ಪ್ರೊ. ಕೆ. ಚಂದ್ರಣ್ಣನವರು ಹಿಂದಿನ ಸಾಲಿನ ಸರ್ವಸದಸ್ಯರ ಸಭೆಯ ನಡವಳಿಕೆಗಳನ್ನು ಮಂಡಿಸಿದರು, ಸಂಸ್ಥೆಯ ಗೌರವ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿಗಳಾದ ಡಾ|| ಚಂದ್ರಿಕಾ ಬಿ.ಆರ್ 2018-19ನೇ ಸಾಲಿನ ಶಾಖಾ ವರದಿಯನ್ನು ಓದಿದರು. ಜಿ.ವಿ ವಾಸುದೇವರವರು 2018-19ನೇ ಸಾಲಿನ ಆಯವ್ಯಯ ಅಂದಾಜು ಪಟ್ಟಿ ಮತ್ತು ಲೆಕ್ಕಪರಿಶೋಧಕರಿಂದ ದೃಢೀಕರಿಸಲ್ಪಟ್ಟ ಲೆಕ್ಕಪತ್ರಗಳನ್ನು ಮಂಡಿಸಿದರು. ಸಭೆಯಲ್ಲಿ ನಿರ್ದೇಶಕರುಗಳು ಸದಸ್ಯರುಗಳು ಮತ್ತು ಅಭಿಮಾನಿಗಳು ಹಾಗೂ ಶಾಲಾ ಸಿಬ್ಬಂದಿ ಭಾಗವಹಿಸಿದ್ದರು.

 

Recent Articles

spot_img

Related Stories

Share via
Copy link