ಲಾಕ್ ಡೌನ್ ಸಡಿಲಿಕೆ ನಂತರದ ಸವಾಲು ಎದುರಿಸಲು ರೆಡ್ ಕ್ರಾಸ್ ಸನ್ನದ್ಧ : ಎಸ್. ನಾಗಣ್ಣ

ಬೆಂಗಳೂರು

      ರಾಜ್ಯದಲ್ಲಿ ಶಾಲಾ, ಕಾಲೇಜುಗಳ ಆರಂಭಕ್ಕೆ ವ್ಯಾಪಕ ಸಿದ್ಧತೆ ಆರಂಭವಾಗುತ್ತಿರುವ ಬೆನ್ನಲ್ಲೇ ಮಕ್ಕಳಿಗೆ ಕೋವಿಡ್ 19 ಸೋಂಕು ಹರಡದಂತೆ ನೋಡಿಕೊಳ್ಳುವ ಉದ್ದೇಶದಿಂದ ರೆಡ್ ಕ್ರಾಸ್ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆರೋಗ್ಯ ಶಿಕ್ಷಣ ನೀಡುವ ಕಾರ್ಯಕ್ರಮ ಜಾರಿಗೊಳಿಸುತ್ತಿದೆ ಎಂದು ಕರ್ನಾಟಕ ರೆಡ್ ಕ್ರಾಸ್ ಶಾಖೆಯ ಸಭಾಪತಿ ಎಸ್. ನಾಗಣ್ಣ ಹೇಳಿದ್ದಾರೆ.

      ರೆಡ್ ಕ್ರಾಸ್ ನಲ್ಲಿ ಯೂಥ್ ರೆಡ್ ಕ್ರಾಸ್ ಎಂಬ ಪ್ರತ್ಯೇಕ ಘಟಕವಿದ್ದು, ಇದರ ಮೂಲಕ ಜನ ಜಾಗೃತಿ ಮೂಡಿಸಲಾಗುವುದು. ಇದಕ್ಕಾಗಿ ಪ್ರತಿಯೊಂದು ಜಿಲ್ಲೆಯಲ್ಲಿ ಸಮನ್ವಯಕಾರರನ್ನು ನೇಮಿಸಲಾಗಿದ್ದು, ನೈರ್ಮಲ್ಯ ಕಾಪಾಡುವ ಅಭ್ಯಾಸಗಳನ್ನು ರೂಢಿಸುವ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆ 70 ಲಕ್ಷ ರೂ ನೀಡಿದೆ ಎಂದರು.

      ದೂರದರ್ಶನದ ಚಂದನ ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಕಳೆದ ಫೆಬ್ರವರಿಯಲ್ಲೇ ಮಕ್ಕಳಿಗೆ ಆರೋಗ್ಯ ಶಿಕ್ಷಣ ಎಂಬ ಕಾರ್ಯಕ್ರಮ ರೂಪಿಸಲಾಗಿತ್ತು. ರಾಜ್ಯದ ಎಲ್ಲಾ ಕಂದಾಯ ವಿಭಾಗಗಳಲ್ಲಿ ಜನ ಜಾಗೃತಿಮೂಡಿಸುವ ಸಂಪನ್ಮೂಲ ವ್ಯಕ್ತಿಗಳಿಗೆ ಒಂದು ವಾರ ಆರೋಗ್ಯ ತರಬೇತಿ ನೀಡಲಾಗಿತ್ತು. ಬಳಿಕ ಕೋವಿಡ್ 19 ಸೋಂಕು ವ್ಯಾಪಿಸಿದ ಹಿನ್ನೆಲೆಯಲ್ಲಿ ಇದೀಗ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿಕೊಂಡು ಜಾಗತಿಕ ಪಿಡುಗಿನ ಕುರಿತು ಅರಿವು ಮೂಡಿಸಲು ಉದ್ದೇಶಿಸಿದ್ದು, ಇದೀಗ ತರಬೇತಿ ಸ್ವರೂಪದಲ್ಲಿ ಬದಲಾವಣೆ ಮಾಡಲಾಗುವುದು ಎಂದರು.

    ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರೆಡ್ ಕ್ರಾಸ್ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ರೆಡ್ ಕ್ರಾಸ್ ಸಂಸ್ಥೆಯನ್ನು ನೋಡೆಸ್ ಸಂಸ್ಥೆಗಳನ್ನಾಗಿ ಪರಿಗಣಿಸಿ ಮನ್ನಣೆ ನೀಡಿದ್ದಾರೆ. ಬೆಂಗಳೂರು ಜಿಲ್ಲೆಯ ಆರು ವಲಯಗಳ ಜತೆಗೆ ಉಳಿದ 29 ಜಿಲ್ಲೆಗಳಲ್ಲಿ ಪೈಕಿ 28 ಜಿಲ್ಲೆಗಳಲ್ಲಿ ರೆಡ್ ಕ್ರಾಸ್ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಗಮನಾರ್ಹ ರೀತಿಯಲ್ಲಿ ಕೆಲಸ ಮಾಡುತ್ತಿರುವ ಐದಾರು ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು ಎಂಬ ಹೆಮ್ಮೆ ಇದೆ. ಇದೀಗ ಲಾಕ್ ಡೌನ್ ಸಡಿಲಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಮುಂದೆ ಇನ್ನೂ ಹಲವಾರು ಸವಾಲುಗಳಿದ್ದು, ಇವುಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ರೆಡ್ ಕ್ರಾಸ್ ಸನ್ನದ್ಧವಾಗಿದೆ ಎಂದು ಎಸ್. ನಾಗಣ್ಣ ಹೇಳಿದರು.

    ಲಾಕ್ ಡೌನ್ ಅವಧಿಯಲ್ಲಿ ರೋಗಿಗಳು ಮತ್ತಿತರರಿಗೆ ರಕ್ತಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಪ್ರತಿ ತಿಂಗಳು 3 ರಿಂದ 4 ಸಾವಿರ ಯೂನಿಟ್ ರಕ್ತ ರಾಜ್ಯಕ್ಕೆ ಅಗತ್ಯವಾಗಿದ್ದು, ಬಹುತೇಕ ಮಂದಿ ಸಂಕಷ್ಟ ಸಮಯದಲ್ಲಿ ಆಸ್ಪತ್ರೆಗೆ ಬರುವ ಪ್ರಮಾಣ ಕಡಿಮೆ ಮಾಡಿದ್ದಾರೆ. ಜತೆಗೆ ಹಲವು ರೋಗಿಗಳು ಶಸ್ತ್ರಚಿಕಿತ್ಸೆಯನ್ನು ಮುಂದೂಡುತ್ತಿದ್ದಾರೆ. ಹೀಗಾಗಿ ಬೇಡಿಕೆ ಕಡಿಮೆಯಾಗಿದ್ದು, ಪರಿಸ್ಥಿತಿಯನ್ನು ಸರಿದೂಗಿಸಲಾಗಿದೆ ಎಂದು ಎಸ್. ನಾಗಣ್ಣ ಹೇಳಿದರು.

     ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರೆಡ್ ಕ್ರಾಸ್ ರಕ್ತ ನಿಧಿ ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ರಕ್ತವನ್ನು ವಾಣಿಜ್ಯೀಕರಣ ಮಾಡುವುದನ್ನು ತಡೆಯಲು ಬದ್ಧವಾಗಿದೆ. ರೆಡ್ ಕ್ರಾಸ್ ಸಂಸ್ಥೆಯೊಂದೇ ಅಗತ್ಯವಿರುವವರಿಗೆ ರಕ್ತ ಪೂರೈಕೆ ಮಾಡುತ್ತಿದ್ದು, ಜನಪರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap