ನಾಳೆ ಸ್ಥಳಿಯ ಸಂಸ್ಥೆ ಚುನಾವಣೆಯ ಅಧಿಸೂಚನೆ ಜಾರಿ…!!!

ಬೆಂಗಳೂರು

       ಲೋಕಸಭೆಯ ಚುನಾವಣೆ ಕಾವು ತಣ್ಣಗಾಗುವ ಮೊದಲೇ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗಿದ್ದು, ನಾಳೆ ಅಧಿಸೂಚನೆ ಜಾರಿಯಾಗುತ್ತಿದೆ. ಅವಧಿ ಮುಗಿದಿರುವ 8 ನಗರಸಭೆಗಳು, 33 ಪುರಸಭೆಗಳು, 22 ಪಟ್ಟಣಪಂಚಾಯ್ತಿಗಳಿಗೆ ಚುನಾವಣೆ, ವಿವಿಧ ಕಾರಣಗಳಿಗಾಗಿ ತೆರವಾಗಿರುವ ಬೆಂಗಳೂರು ನಗರದ ಹೆಬ್ಬಗೋಡಿ ನಗರಸಭೆ ವಾರ್ಡ್ ನಂ.26, ಬೆಳಗಾವಿ ಜಿಲ್ಲೆ ಸದಲಗಾ ಪುರಸಭೆ ವಾರ್ಡ್ ನಂ. 19, ಮುಗಳಖೋಡ ಪುರಸಭೆ ವಾರ್ಡ್ ನಂ.2, ಬಿಬಿಎಂಪಿಯ ಸಗಾಯಿಪುರ ವಾರ್ಡ್ ನಂ.60, ಕಾವೇರಿಪುರದ ವಾರ್ಡ್ ನಂ.103, ತುಮಕೂರು ಮಹಾನಗರ ಪಾಲಿಕೆ ವಾರ್ಡ್ ನಂ.22ಕ್ಕೆ ಉಪಚುನಾವಣೆಗಳು ಘೋಷಣೆಯಾಗಿವೆ.

         ಈ ಎಲ್ಲಾ ಕ್ಷೇತ್ರಗಳಿಗೂ ನಾಳೆಯಿಂದ ಅಧಿಸೂಚನೆ ಜಾರಿಯಾಗುತ್ತಿದೆ. ಮೇ 16ರೊಳಗೆ ನಾಮಪತ್ರ ಸಲ್ಲಿಸಲು ಕಾಲಾವಧಿ ಇದೆ. ಮೇ 17 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಮೇ 20 ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕವಾಗಿದೆ. ಮೇ 29 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೂ ಚುನಾವಣೆಗಳು ನಡೆಯಲಿವೆ.

        ಅಗತ್ಯವಿದ್ದಲ್ಲಿ ಮೇ 30ರಂದು ಮರುಮತದಾನ ನಡೆಯಲಿದೆ. ಮೇ 31ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಂಡ ನಂತರ ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ.

         ರಾಜ್ಯ ಚುನಾವಣಾ ಆಯೋಗ ಕಾಂಗ್ರೆಸ್, ಬಿಜೆಪಿ, ಕಮ್ಯುನಿಷ್ಟ್ ಸೇರಿ 7 ರಾಷ್ಟ್ರೀಯ ಪಕ್ಷಗಳು, ಜೆಡಿಎಸ್ ರಾಜ್ಯ ಪಕ್ಷ ಮತ್ತು ನೋಂದಾಯಿತ ಮಾನ್ಯತೆ ಪಡೆಯದ 80 ಪಕ್ಷಗಳು ಮತ್ತು ದೇಶದ ಇತರ ರಾಜ್ಯಗಳ 80ಕ್ಕೂ ಹೆಚ್ಚು ಪಕ್ಷಗಳಿಗೆ ಈಗಾಗಲೇ ನೀಡಿರುವ ಚಿಹ್ನೆಯನ್ನು ಅಂಗೀಕರಿಸಿದೆ.

        ಇದಲ್ಲದೆ, 164 ಮುಕ್ತ ಚಿಹ್ನೆಗಳನ್ನು ಕಾಯ್ದಿರಿಸಿದೆ. ಪಕ್ಷಗಳ ಹೊರತಾಗಿ ಸ್ವತಂತ್ರವಾಗಿ ನಾಮಪತ್ರ ಸಲ್ಲಿಸುವವರೆಗೆ ಮುಕ್ತವಾಗಿ ಕಾಯ್ದಿರಿಸಿರುವ ಚಿಹ್ನೆಗಳನ್ನು ನೀಡಲಾಗುತ್ತಿದೆ.

         ಫೆ.2 ರಂದು ಚುನಾವಣೆ ಘೋಷಣೆಯಾಗಿದ್ದು, ಅಂದಿನಿಂದಲೇ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಇದೇ ತಿಂಗಳಲ್ಲೇ ಗ್ರಾಮೀಣ ಭಾಗದ ಗ್ರಾಮಪಂಚಾಯತ್ ಮತ್ತು ತಾಲೂಕು ಪಂಚಾಯತ್‍ಗಳಿಗೆ ಉಪಚುನಾವಣೆ ನಡೆಯಲಿದ್ದು, ಅವುಗಳಿಗೆ ಮೇ 13 ರಿಂದ ಅಧಿಸೂಚನೆ ಜಾರಿಯಾಗಲಿದೆ.

          ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಗರಸಭೆಯಲ್ಲಿ 2ಲಕ್ಷ ರೂ., ಪುರಸಭೆಯಲ್ಲಿ ಒಂದೂವರೆ ಲಕ್ಷ ರೂ., ಪಟ್ಟಣ ಪಂಚಾಯ್ತಿಯಲ್ಲಿ ಒಂದು ಲಕ್ಷ, ಬಿಬಿಎಂಪಿಯಲ್ಲಿ 5 ಲಕ್ಷ ರೂ., ಇತರೆ ಪಾಲಿಕೆಗಳಲ್ಲಿ 3 ಲಕ್ಷ ಚುನಾವಣಾ ವೆಚ್ಚವನ್ನು ಮಾಡಬಹುದಾಗಿದೆ.

          ಈಗಾಗಲೇ ಕಳೆದ ವರ್ಷದ ಆಗಸ್ಟ್‍ನಲ್ಲಿ 109 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು.ಬಾಕಿ ಇರುವ 103 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಬೇಕಾಗಿತ್ತಾದರೂ ಬಹುತೇಕ ಎಲ್ಲಾ ಜಿಲ್ಲಾ ಕೇಂದ್ರಗಳ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿ ಹಾಗೂ ಕ್ಷೇತ್ರ ವಿಂಗಡಣೆ ವಿವಾದಗಳು ನ್ಯಾಯಾಲಯದಲ್ಲಿರುವುದರಿಂದ ಬಹುತೇಕ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿಲ್ಲ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap