ಬೆಳಗಾವಿ
ರಾಜ್ಯದ ಪ್ರವಾಹ ಪೀಡಿತ 13 ಜಿಲ್ಲೆಗಳ ಸಂತ್ರಸ್ತರಿಗೆ ಭಾರತೀಯ ರೆಡ್ಕ್ರಾಸ್ ಸಂಸ್ಥೆ ವತಿಯಿಂದ 1 ಕೋಟಿ ರೂ. ವೆಚ್ಚದ ಸಾಮಗ್ರಿಗಳನ್ನೊಳಗೊಂಡ ಕಿಟ್ ವಿತರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೆಡ್ಕ್ರಾಸ್ ಸಭಾಪತಿಗಳಾದ ಎಸ್.ನಾಗಣ್ಣ ಮಾಹಿತಿ ನೀಡಿದರು.
ಬೆಳಗಾವಿ ಜಿಲ್ಲೆಯ ವಿವಿಧ ಸ್ಥಳಗಳಿಗೆ ರೆಡ್ಕ್ರಾಸ್ ತಂಡದೊಂದಿಗೆ ಭೇಟಿ ನೀಡಿ, ಖಾನಾಪುರದ ನಿರಾಶ್ರಿತರ ಕೇಂದ್ರಕ್ಕೆ ಅಗತ್ಯ ಸಾಮಗ್ರಿಗಳನ್ನು ವಿತರಿಸಿದ ನಂತರ ಬೆಳಗಾವಿಯ ವಾರ್ತಾ ಇಲಾಖೆ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಹಾರ ಸಾಮಗ್ರಿ, ಔಷಧಿಗಳು ಸೇರಿದಂತೆ ಸಂತ್ರಸ್ತರಿಗೆ ಅಗತ್ಯವಾಗಿ ಬೇಕಾಗಿರುವ ಸಲಕರಣೆ, ಸೌಲಭ್ಯಗಳನ್ನು ಕಿಟ್ ರೂಪದಲ್ಲಿ ತಯಾರಿಸಿ 1 ಕೋಟಿ ರೂ.ಗಳ ವೆಚ್ಚದಲ್ಲಿ 1 ಲಕ್ಷ ಸಂತ್ರಸ್ತ ಕುಟುಂಬಗಳಿಗೆ ವಿತರಿಸಲಾಗಿದೆ ಎಂದರು.
ತಕ್ಷಣಕ್ಕೆ ಆಹಾರ ಪದಾರ್ಥಗಳನ್ನು ನೀಡುವ ದೃಷ್ಟಿಯಿಂದ ಮೊದಲು ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಲಾಗಿದೆ. ಸಂತ್ರಸ್ತ ಕುಟುಂಬಗಳ ಜೀವನ ಸಾಮಾನ್ಯ ಸ್ಥಿತಿಗೆ ತಲುಪಲು ಇನ್ನೂ ಒಂದು ವರ್ಷಗಳು ಬೇಕಾಗಬಹುದು. ಪ್ರವಾಹಪೀಡಿತ ಪ್ರದೇಶಗಳ ಸ್ಥಳಕ್ಕೆ ಹೋದರೆ ಇನ್ನೂ ಸಹ ಮಣ್ಣು ಕುಸಿಯುವ ಅಪಾಯ ಕೆಲವೆಡೆ ಕಂಡುಬರುತ್ತದೆ.
ಪ್ರವಾಹದ ಮೂಲಕ ಕೊಚ್ಚಿ ಹೋದ ಸಾಮಗ್ರಿಗಳು, ವಿದ್ಯುತ್ ಕಂಬಗಳು, ಮರಗಳಲ್ಲಿ ತೇಲಾಡುತ್ತಿವೆ. ಈ ದೃಶ್ಯಗಳನ್ನು ನೋಡಿದಾಗ ಪರಿಸ್ಥಿತಿಯ ನೈಜತೆ ಅರ್ಥವಾಗುತ್ತದೆ. ಸಂತ್ರಸ್ತರು ಸಾಧ್ಯವಾದಷ್ಟು ಬೇಗ ಬದುಕಿನತ್ತ ಮರಳಲಿ ಎಂಬ ಕಾರಣದಿಂದ ರೆಡ್ಕ್ರಾಸ್ ಸಂಸ್ಥೆಯೂ ಸಹ ಕೈಜೋಡಿಸಿದೆ ಎಂದರು.
ಬಾಗಲಕೋಟೆ ಜಿಲ್ಲೆಯಲ್ಲಿ 196 ಗ್ರಾಮಗಳು ಬಾಧಿತ 1.50 ಲಕ್ಷ ಜನರ ಸ್ಥಳಾಂತರ ಮಾಡಲಾಗಿದೆ. ಇದೇ ರೀತಿ ಬೆಳಗಾವಿಯಲ್ಲಿಯೂ ಪರಿಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಲು ರೆಡ್ಕ್ರಾಸ್ ಸಂಸ್ಥೆ ಮುಂದಾಯಿತು. ನಮ್ಮ ಸಂಸ್ಥೆಯ ಪದಾಧಿಕಾರಿಗಳು ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಬೆಂಗಳೂರು, ತುಮಕೂರು ಸೇರಿದಂತೆ ವಿವಿಧ ಕಡೆಗಳಿಂದ ಸಂಗ್ರಹವಾದ ಸಾಮಗ್ರಿಗಳನ್ನು ಇಲ್ಲಿ ವಿತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿ ಹಳ್ಳಿಗೆ ಹೋದಾಗ ಎಲ್ಲ ಕುಟುಂಬಗಳಿಗೆ ಪರಿಹಾರ ಸಾಮಗ್ರಿ ತಲುಪಿಸುವ ವ್ಯವಸ್ಥೆ ಮಾಡಲಾಯಿತು ಎಂದರು.
ಅಗತ್ಯ ಸಾಮಗ್ರಿಗಳ ಕಿಟ್ ವಿತರಿಸುವ ಜೊತೆಗೆ ಶಾಲಾಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ನೋಟ್ ಪುಸ್ತಕ, ಪೆನ್ಸಿಲ್ ಮತ್ತಿತರ ಸಾಮಗ್ರಿಗಳನ್ನು ಕೂಡ ನೀಡಲಾಗುತ್ತಿದೆ. ಆರೋಗ್ಯದ ದೃಷ್ಟಿಯಿಂದ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೆಡ್ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ಡಾ.ವಿ.ಎಲ್.ಎಸ್.ಕುಮಾರ್, ಬೆಳಗಾವಿ ಜಿಲ್ಲಾ ಶಾಖೆ ಅಧ್ಯಕ್ಷ ಡಾ.ಎಸ್.ಬಿ.ಕುಲಕರ್ಣಿ, ಬಾಗಲಕೋಟೆ ಛೇರ್ಮನ್ ಆನಂದ್ ಎಸ್.ಜಿಗಜಿನ್ನಿ, ರಾಜ್ಯ ಶಾಖೆ ಸದಸ್ಯರುಗಳಾದ ವಿಜಯಕುಮಾರ್ ಪಾಟೀಲ್, ಎಂ.ಎ.ಶಕೀಬಾ, ಸಂಗಮೇಶ ವಿಜಾಪುರ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








